ಹತ್ತಾರು ಪುರುಷರ ವಿರುದ್ಧ ಕ್ಷುಲ್ಲಕ ಕೇಸ್ ದಾಖಲಿಸಿದ್ದ ಮಹಿಳೆಯ ನಡೆಗೆ ಹೈಕೋರ್ಟ್ ಆಕ್ರೋಶ; ಪೊಲೀಸರನ್ನು ಎಚ್ಚರಿಸಲು ಡಿಜಿಪಿಗೆ ನಿರ್ದೇಶನ
- by Jagan Ramesh
- September 11, 2024
- 415 Views
ಬೆಂಗಳೂರು: ಒಂದು ದಶಕದ ಅವಧಿಯಲ್ಲಿ ಪತಿಯರೂ ಸೇರಿ ಹಲವು ಪುರುಷರ ವಿರುದ್ಧ 10 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದ ಮಹಿಳೆಯೊಬ್ಬಳ ನಡೆಯನ್ನು ತೀವ್ರವಾಗಿ ಖಂಡಿಸಿರುವ ಹೈಕೋರ್ಟ್, ಇನ್ನು ಮುಂದೆ ಆ ಮಹಿಳೆ ನೀಡುವ ದೂರುಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿದೆ.
ಕೊಡಗಿನ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಮುಳ್ಳುಸೋಗೆಯ ದೀಪಿಕಾ (33) ಎಂಬಾಕೆ ಕ್ರೌರ್ಯ, ಅತ್ಯಾಚಾರ, ಜೀವ ಬೆದರಿಕೆ ಮತ್ತು ಹಲ್ಲೆ ಆರೋಪಗಳ ಸಂಬಂಧ ದಾಖಲಿಸಿದ್ದ ಪ್ರಕರಣ ರದ್ದುಕೋರಿ ಆಕೆಯ ಪತಿ ಮತ್ತವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಕಳೆದ 14 ವರ್ಷಗಳಲ್ಲಿ ದೀಪಿಕಾ ಹಲವು ಪುರುಷರ ವಿರುದ್ಧ ಕ್ರೌರ್ಯ, ಲೈಂಗಿಕ ದೌರ್ಜನ್ಯ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಜೀವ ಬೆದರಿಕೆ ಇನ್ನಿತರ ಆರೋಪಗಳನ್ನು ಹೊರಿಸಿ 10 ಪ್ರಕರಣಗಳನ್ನು ದಾಖಲಿಸಿದ್ದಾರೆ. ಆಕೆಯ ಬಗೆಗಿನ ಮಾಹಿತಿ ಎಲ್ಲ ಪೊಲೀಸ್ ಠಾಣೆಗಳ ದತ್ತಾಂಶಗಳಲ್ಲಿ ಲಭ್ಯವಿರುವಂತೆ ಮಾಡಬೇಕಿದೆ. ಇದರಿಂದ, ಆಕೆ ಮತ್ತೊಬ್ಬ ಪುರುಷನ ವಿರುದ್ಧ ದೂರು ನೀಡಲು ಬಂದಾಗ, ಪೊಲೀಸರು ಎಚ್ಚರಿಕೆಯಿಂದ ಇರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಸೂಚಿಸಿದೆ.
ಅರ್ಜಿಯಲ್ಲಿ ಎರಡನೇ ಪ್ರತಿವಾದಿಯಾಗಿರುವ ದೂರುದಾರೆ ದೀಪಿಕಾ ಯಾವುದೇ ಪೊಲೀಸ್ ಠಾಣೆಗೆ ದೂರು ದಾಖಲಿಸಲು ತೆರಳಿದಾಗ, ಸೂಕ್ತ ರೀತಿಯಲ್ಲಿ ಪ್ರಾಥಮಿಕ ತನಿಖೆ ನಡೆಸದೆಯೇ ಪೊಲೀಸರು ದೂರು ದಾಖಲಿಸಿಕೊಳ್ಳಬಾರದು. ಈ ಮೂಲಕ ಮಹಿಳೆಯ ಚಾಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಈಗಾಗಲೇ ಆಕೆ 10 ಅಪರಾಧ ಪ್ರಕರಣಗಳನ್ನು ದಾಖಲಿಸಿರುವುದು ಕಂಡು ಬಂದಿದ್ದು, 11ನೇ ಪ್ರಕರಣ ದಾಖಲಾಗದಂತೆ ತಡೆಯಬೇಕಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ದಶಕದಷ್ಟು ಹಳೆಯ ವಂಚನೆಯ ಕಥೆ:
ದೀಪಿಕಾ ಜಾಲಕ್ಕೆ 10ಕ್ಕೂ ಅಧಿಕ ಪುರುಷರು ಬಿದ್ದಿದ್ದಾರೆ. ಕೆಲವರನ್ನು ಆಕೆ ಮದುವೆಯಾಗಿದ್ದರೆ, ಮತ್ತೆ ಕೆಲವರನ್ನು ಮದುವೆಯಾಗಿಲ್ಲ. ಅವರ ವಿರುದ್ಧ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಹನಿ ಟ್ರ್ಯಾಪ್ ಸ್ವಭಾವದ ಆಕೆಯ ಕಾರ್ಯವಿಧಾನವೇ ಹೀಗಿದೆ. ಪ್ರತಿ ಪ್ರಕರಣದಲ್ಲೂ ದೀಪಿಕಾ ನಡೆ ಸಂಶಯಾಸ್ಪದವಾಗಿದೆ. ಆಕೆಯ ಕೃತ್ಯವು ಒಬ್ಬರ ವಿರುದ್ಧವಲ್ಲ, ಹಲವರ ವಿರುದ್ಧದ “ದಶಕದಷ್ಟು ಹಳೆಯ ಮೋಸದ ಕಥೆ” ಆಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.
ಮಹಿಳೆಯ ದೂರುಗಳಲ್ಲಿ ಕಿಂಚಿತ್ತೂ ಸತ್ಯಾಂಶವಿಲ್ಲ. ಆದ್ದರಿಂದ, ಪೊಲೀಸರು ನಕಲಿ ಪ್ರಕರಣಗಳ ಬಗ್ಗೆ ತನಿಖೆ ನಡೆಸಬೇಕಾಗುತ್ತದೆ. ಇಂಥ ಪ್ರಕರಣಗಳಿಂದ ಪೊಲೀಸರು ಹಾಗೂ ನ್ಯಾಯಾಲಯಗಳ ಅಮೂಲ್ಯ ಸಮಯವೂ ವ್ಯರ್ಥವಾಗುತ್ತಿದೆ. ಈ ರೀತಿಯ ಪ್ರಕರಣಗಳನ್ನು ಮುಂದುವರಿಯಲು ಅನುಮತಿಸಿದರೆ ಸುಳ್ಳು ಪ್ರಕರಣಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರ ಮತ್ತವರ ಕುಟುಂಬ ಸದಸ್ಯರ ವಿರುದ್ಧ ದೀಪಿಕಾ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಿದೆ.
ನಟೋರಿಯಸ್ ಇರುವಂತಿದೆ:
ಅರ್ಜಿಯು ಆಗಸ್ಟ್ 28ರಂದು ವಿಚಾರಣೆಗೆ ಬಂದ ಸಂದರ್ಭದಲ್ಲಿ ದೀಪಿಕಾ ವಯಸ್ಸು 33 ವರ್ಷ ಎಂಬುದನ್ನು ಗಮನಿಸಿದ ನ್ಯಾಯಪೀಠ, ಆಕೆ ಮೊದಲ ಪ್ರಕರಣ ದಾಖಲಿಸಿದ ವರ್ಷ ನೋಡಿದರೆ ಆಕೆಗೆ 21 ವರ್ಷ. ಆಗಿನಿಂದಲೇ ಇಂತಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಳೆಯೇ? ಎಂದು ಆಶ್ಚರ್ಯ ವ್ಯಕ್ತಪಡಿಸಿತು. ಅರ್ಜಿದಾರರ ಪರ ಹಿರಿಯ ವಕೀಲ ಮೂರ್ತಿ ಡಿ. ನಾಯಕ್, ದೀಪಿಕಾ ದೂರು ನೀಡಿರುವ ಒಂದು ಪ್ರಕರಣದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಆರೋಪಿಯಾಗಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆಗ ನ್ಯಾಯಮೂರ್ತಿಗಳು, ಓಹೋ! ಪೊಲೀಸರನ್ನೂ ಬಿಟ್ಟಿಲ್ಲವೇ? ಹಾಗಿದ್ದರೆ, ಆಕೆ ನಿಜಕ್ಕೂ ನಟೋರಿಯಸ್ ಇರುವಂತೆ ಕಾಣುತ್ತದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು.
ಸತತ ಗೈರಾಗಿದ್ದ ದೀಪಿಕಾ:
ಅರ್ಜಿ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಹಲವು ಬಾರಿ ಸೂಚಿಸಿದ್ದರೂ ದೀಪಿಕಾ ಸತತವಾಗಿ ಗೈರು ಹಾಜರಾಗಿದ್ದರು. ಸಾಕಷ್ಟು ಅವಕಾಶ ನೀಡಿದ ಹೊರತಾಗಿಯೂ ದೀಪಿಕಾ ಆಗಲೀ, ಆಕೆಯ ಪರ ವಕೀಲರಾಗಲೀ ವಿಚಾರಣೆಗೆ ಹಾಜರಾಗದ ಕಾರಣ ಆಗಸ್ಟ್ 31ರಂದು ಖುದ್ದು ಹಾಜರಾಗಲು ಹೈಕೋರ್ಟ್ ಕೊನೆಯದಾಗಿ ಅವಕಾಶ ನೀಡಿತ್ತು. ಅಂದೂ ಸಹ ದೀಪಿಕಾ ವಿಚಾರಣೆಗೆ ಹಾಜರಾಗಿರಲಿಲ್ಲ.
Related Articles
Thank you for your comment. It is awaiting moderation.
Comments (1)
ಆ ಮಹಿಳೆಯ ಫೋಟೋ ಸಹಿತ ಸುದ್ದಿ ಪ್ರಕಟಿಸಿ. ಮುಖ ಪರಿಚಯವಿದ್ದರೆ ಇನ್ನಷ್ಟು ಅಮಾಯಕ ಹುಡುಗರು ಆಕೆಯ ವಂಚನೆಗೆ ಸಿಲುಕುವುದು ತಪ್ಪುತ್ತದೆ.
Reply