ಎಲೆಕ್ಟ್ರಿಕ್ ಆಟೋಗಳಿಗೆ ಅನುಮತಿ ನೀಡದಂತೆ ಮನವಿ; ರಿಕ್ಷಾ ಚಾಲಕರ ಸಂಘದ ಕೋರಿಕೆ ಪರಿಗಣಿಸಿ, ನಿರ್ಧರಿಸುವಂತೆ ದ.ಕ. ಡಿಸಿಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಮಂಗಳೂರು ನಗರದಲ್ಲಿ ಹೊಸದಾಗಿ ಎಲೆಕ್ಟ್ರಿಕ್ ಆಟೋಗಳ ಕಾರ್ಯಾಚರಣೆಗೆ ಅನುಮತಿ ನೀಡದಂತೆ ಕೋರಿ ಮಂಗಳೂರು ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರ ಸಂಘ ಸಲ್ಲಿಸಿರುವ ಮನವಿಯನ್ನು ಎರಡು ವಾರಗಳಲ್ಲಿ ಕಾನೂನು ಪ್ರಕಾರ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಮನವಿಪತ್ರ ಪರಿಗಣಿಸದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕ್ರಮಕ್ಕೆ ಆಕ್ಷೇಪಿಸಿ ಮಂಗಳೂರು ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.

ಅರ್ಜಿದಾರರ ಆಕ್ಷೇಪವೇನು?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರ್ಮಿಟ್‌ ಪಡೆಯದೆ ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಕಾರ್ಯ ನಿರ್ವಹಣೆಗೆ ಅನುಮತಿ ನೀಡಿ 2024ರ ಜುಲೈ 26ರಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಇದರಿಂದ, ಮಂಗಳೂರಿನಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚಾಗಿ, ಸಂಚಾರ ದಟ್ಟಣೆ ಉಂಟಾಗಿದೆ. ಈಗಾಗಲೇ ಕಾರ್ಯಾಚರಣೆಯಲ್ಲಿದ್ದ ಆಟೋ ರಿಕ್ಷಾಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಎದುರಾಗಿದೆ. 2023ರಲ್ಲಿ 7,629ರಷ್ಟಿದ್ದ ಆಟೋ‌ ರಿಕ್ಷಾ ಸಂಖ್ಯೆ ಜಿಲ್ಲಾಧಿಕಾರಿ ಆದೇಶದ ನಂತರ ಅಗತ್ಯ ಪ್ರಮಾಣಕ್ಕಿಂತ ಹತ್ತು ಪಟ್ಟು ಹೆಚ್ಚಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಹೊಸ ಎಲೆಕ್ಟ್ರಿಕ್‌ ಆಟೋ ರಿಕ್ಷಾಗಳು ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯಚರಣೆ ಮಾಡಲು ಅನುಮತಿ ನೀಡಬಾರದು ಎಂದು ಕೋರಿ, 2025ರ ಜುಲೈ 9ರಂದು ಜಿಲ್ಲಾಧಿಕಾರಿಗಳಿಗೆ ಅರ್ಜಿದಾರರ ಸಂಘವು ಮನವಿ ಸಲ್ಲಿಸಿತ್ತು. ಆದರೆ, ಈ ಮನವಿ ಆಧರಿಸಿ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ತಮ್ಮ ಮನವಿ ಪತ್ರ ಪರಿಗಣಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

Related Articles

Comments (0)

Leave a Comment