ಬೆಟ್ಟ ಹಲಸೂರು ಕ್ರಾಸ್‌ನಲ್ಲಿ ಮೆಟ್ರೊ ನಿಲ್ದಾಣಕ್ಕೆ ಮನವಿ; ಸೂಕ್ತ ಕ್ರಮ ಕೈಗೊಳ್ಳಲು ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೊ 2ನೇ ಬಿ ಹಂತದ ನಿರ್ಮಾಣದ ವೇಳೆ ಬೆಟ್ಟಹಲಸೂರು ಕ್ರಾಸ್‌ನಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸುವ ಸಂಬಂಧ ಸ್ಥಳೀಯರು ನೀಡಿರುವ ಮನವಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್‌‌ಗೆ (ಬಿಎಂಆರ್‌ಸಿಎಲ್‌) ಹೈಕೋರ್ಟ್ ಸೂಚಿಸಿದೆ.

ಬೆಟ್ಟಹಲಸೂರು ನಿವಾಸಿಗಳಾದ ಬಿ.ಜಿ. ನಂಜುಂಡಪ್ಪ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿ, ಅರ್ಜಿ ಇತ್ಯರ್ಥಪಡಿಸಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮೆಟ್ರೊ ನಿಲ್ದಾಣ ನಿರ್ಮಾಣದ ವಿಷಯವು ನ್ಯಾಯಾಲಯದ ವ್ಯಾಪ್ತಿಗೆ ಬಾರದ ಕಾರಣ ಯಾವುದೇ ನಿರ್ದಿಷ್ಟ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತಲ್ಲದೆ, ಬೆಟ್ಟಹಲಸೂರು ಕ್ರಾಸ್‌ ಬಳಿ ಮೆಟ್ರೊ ನಿಲ್ದಾಣ ನಿರ್ಮಿಸುವ ಸಂಬಂಧ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿತು.

ಅರ್ಜಿದಾರರ ಮನವಿ:
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 2019ರಲ್ಲಿ ಬಿಎಂಆರ್‌ಸಿಎಲ್‌ ಬೆಟ್ಟಹಲಸೂರು ಕ್ರಾಸ್‌ನಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸಲು ಉದ್ದೇಶಿಸಿ, ಅದಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಂಡು, ಪರಿಹಾರವನ್ನೂ ನೀಡಿ ನಂತರ ನಿಲ್ದಾಣ ನಿರ್ಮಾಣ ನಿರ್ಧಾರ ಕೈ ಬಿಟ್ಟಿದೆ. ಆದರೆ, ಉದ್ದೇಶಿತ ಮಾರ್ಗದಲ್ಲಿ ಬೆಟ್ಟಹಲಸೂರು ಕ್ರಾಸ್‌, ಬಾಗಲೂರು ಮತ್ತು ದೊಡ್ಡಜಾಲ ನಿಲ್ದಾಣಗಳ ನಡುವೆ ಸಾಕಷ್ಟು ಅಂತರವಿರುವುದರಿಂದ ಪ್ರಯಾಣಿಕರ ಹಿತದೃಷ್ಟಿಯಿಂದ ಅಲ್ಲಿ ನಿಲ್ದಾಣ ಅತ್ಯಗತ್ಯವಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಬೆಟ್ಟಹಲಸೂರು ಕ್ರಾಸ್‌ನಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಬಿಎಂಆರ್‌ಸಿಎಲ್‌ ಸೂಕ್ತ ಕಾರಣವಿಲ್ಲದೆ ಕೈಬಿಟ್ಟಿದೆ. ಆದರೆ, ಅರ್ಜಿದಾರರು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಆಡಿ ಪಡೆದಿರುವ ಮಾಹಿತಿಯಂತೆ, ಎಂಬೆಸಿ ಗ್ರೂಪ್‌ ಎಂಬ ಖಾಸಗಿ ಕಂಪನಿಯು ಈ ಹಿಂದೆ ಒಪ್ಪಿಕೊಂಡಂತೆ ಮೆಟ್ರೊ ನಿಲ್ದಾಣವನ್ನು ಪ್ರಾಯೋಜಿಸುವುದರಿಂದ ಹಿಂದೆ ಸರಿದ ಕಾರಣ ಅಲ್ಲಿ ನಿಲ್ದಾಣ ನಿರ್ಮಾಣ ಯೋಜನೆಯನ್ನು ಕೈಬಿಡಲಾಗಿದೆ ಎಂದರು.

ಖಾಸಗಿ ಕಂಪನಿಯು ನಿಲ್ದಾಣವನ್ನು ಪ್ರಾಯೋಜಿಸುವುದರಿಂದ ಹಿಂದೆ ಸರಿದಿರುವುದು ಉದ್ದೇಶಿತ ನಿಲ್ದಾಣ ನಿರ್ಮಾಣ ಕೈಬಿಡಲು ಕಾರಣವಾಗಬಾರದು. ಬೆಟ್ಟಹಲಸೂರು ಕ್ರಾಸ್‌ನಿಂದ ಎರಡೂ ಬದಿಗಳಲ್ಲಿ ಅಂದಾಜು 4 ಕಿ.ಮೀ ಅಂತರವಿದೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸುವುದು ಬಿಎಂಆರ್‌ಸಿಎಲ್‌ನ ಜವಾಬ್ದಾರಿಯಾಗಿದೆ. ಆದ್ದರಿಂದ, ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದರು.

Related Articles

Comments (0)

Leave a Comment