ಮಾಳಗಾಳ ಬಸ್ ಸ್ಟಾಪ್ ಬಳಿ ಸ್ಕೈವಾಕ್ ನಿರ್ಮಾಣಕ್ಕೆ ಕೋರಿ ಪಿಐಎಲ್; ಪಾಲಿಕೆಯಿಂದ ವರದಿ ಕೇಳಿದ ಹೈಕೋರ್ಟ್

ಬೆಂಗಳೂರು: ನಗರದ ನಾಗರಭಾವಿ ಹೊರವರ್ತುಲ ರಸ್ತೆಯ ಮಾಳಗಾಳ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ಅಥವಾ ಫುಟ್ ಓವರ್ ಬ್ರಿಡ್ಜ್ ನಿರ್ಮಾಣದ ಸಾಧ್ಯಾಸಾಧ್ಯತೆ ಕುರಿತು ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಸ್ಕೈವಾಕ್ ನಿರ್ಮಾಣಕ್ಕೆ ನಿರ್ದೇಶನ ಕೋರಿ ಬಸವನಗುಡಿಯ ಬಿಎಂಎಸ್ ಕಾಲೇಜಿನಲ್ಲಿ ವಾಸ್ತುಶಿಲ್ಪ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ನಾಗರಭಾವಿಯ ನಿವಾಸಿ ತಿಯಾ ತೆರೆಸೆ ಡಿ’ಸೋಜಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಬಿಬಿಎಂಪಿ ಮುಖ್ಯ ಆಯುಕ್ತರು, ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿಯಲ್ಲಿ ಮಾಡಲಾಗಿರುವ ಮನವಿಯ ಸಾಧ್ಯಾಸಾಧ್ಯತೆ ಕುರಿತು ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಪಾಲಿಕೆಗೆ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಮನವಿ ಏನು?
ಪ್ರತಿನಿತ್ಯ ಮನೆಯಿಂದ ಕಾಲೇಜಿಗೆ ಹೋಗಲು ಸಾರ್ವಜನಿಕ ಸಾರಿಗೆ ಅವಲಂಬಿಸಿದ್ದು, ಬಿಎಂಟಿಸಿ ಬಸ್ ಮೂಲಕ ಪ್ರಯಾಣಿಸುತ್ತೇನೆ. ಬಸ್ ಹತ್ತಲು ಮಾಳಗಾಳ ಬಸ್ ನಿಲ್ದಾಾಣಕ್ಕೆ ಬರಬೇಕು. ಆದರೆ, ಬಸ್ ನಿಲ್ದಾಣ ತಲುಪಲು ರಸ್ತೆ ದಾಟಬೇಕಾದರೆ ಸಂಚಾರ ದಟ್ಟಣೆಯಿಂದ ಸಾಧ್ಯವಾಗುವುದಿಲ್ಲ. ಹೊರ ವರ್ತುಲ ರಸ್ತೆಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿರುತ್ತವೆ. ಇದರಿಂದ, ಕಚೇರಿ ಕೆಲಸಕ್ಕೆ ಹೋಗುವವರು, ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳು ಪ್ರತಿನಿತ್ಯ ಕಷ್ಟ ಅನುಭವಿಸುವಂತಾಗಿದೆ ಎಂದು ಅರ್ಜಿದಾರ ವಿದ್ಯಾರ್ಥಿನಿ ವಿವರಿಸಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಆದ್ದರಿಂದ, ನ್ಯಾಯಾಲಯ ಪರಿಹಾರ ದೊರಕಿಸಿಕೊಡಬೇಕು. ನಾಗರಭಾವಿ ಹೊರವರ್ತುಲ ರಸ್ತೆಯ ಮಾಳಗಾಳ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ಅಥವಾ ಫುಟ್ ಓವರ್ ಬ್ರಿಡ್ಜ್‌ ನಿರ್ಮಾಣ ಮಾಡುವಂತೆ ಸಂಬಂಧ ಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

Related Articles

Comments (0)

Leave a Comment