ಜೈಲಿನಲ್ಲಿರುವ ಕೈದಿಗಳಿಗೆ ಮನೆಯೂಟ; ಮಾರ್ಗಸೂಚಿ ರೂಪಿಸಲು ಹೈಕೋರ್ಟ್ ತೀರ್ಮಾನ
- by Jagan Ramesh
- September 9, 2024
- 179 Views
ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಮನೆ ಊಟ ಹಾಗೂ ಇತರ ಅಗತ್ಯ ವಸ್ತುಗಳನ್ನು ಒದಗಿಸುವ ಸಂಬಂಧ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಹೈಕೋರ್ಟ್ ಹೇಳಿದೆ.
ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮನೆ ಊಟಕ್ಕೆ ಅವಕಾಶ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಹಾಜರಾಗಿ, ಅರ್ಜಿದಾರರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿರುವುದರಿಂದ ಅರ್ಜಿಯಲ್ಲಿನ ಮನವಿ ಪ್ರಸ್ತುತವಾಗುವುದಿಲ್ಲ. ಆದರೆ, ನ್ಯಾಯಾಲವೇ ಇದಕ್ಕೆಲ್ಲ ಮಾರ್ಗಸೂಚಿಗಳನ್ನು ರೂಪಿಸಬೇಕು ಅನಿಸುತ್ತದೆ. ಆದ್ದರಿಂದ, ಆ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ನೆರವು ನೀಡಲು ತಾವು ಸಿದ್ಧವೆಂದು ತಿಳಿಸಿದರು.
ಆಗ ನ್ಯಾಯಪೀಠ, ಹೌದು ಈ ವಿಚಾರವಾಗಿ ಮಾರ್ಗಸೂಚಿ ರೂಪಿಸಲಾಗುವುದು ಎಂದು ತಿಳಿಸಿ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿತಲ್ಲದೆ, ಅಂದು ಈ ವಿಚಾರ ಪರಿಗಣಿಸಲಾಗುವುದು ಎಂದು ಹೇಳಿತು.
ಈ ಮಧ್ಯೆ ಇಂತಹದ್ದೇ ಮನವಿ ಮಾಡಿ ಅರ್ಜಿ ಸಲ್ಲಿಸಿರುವ ಮತ್ತೊಬ್ಬ ಕೈದಿಯ ಪರ ವಕೀಲರು, ಜೈಲುಗಳಲ್ಲಿ ಊಟ ಬಿಟ್ಟು ಉಳಿದೆಲ್ಲ ನಿಷೇಧಿತ ವಸ್ತುಗಳೂ ಸಿಗುತ್ತವೆ. ನಮ್ಮ ಮನೆ ಊಟ ನಾವು ತಿನ್ನಲು ಸಮಸ್ಯೆ ಮಾಡಲಾಗುತ್ತದೆ ಎಂದರು. ಅದಕ್ಕೆ ನ್ಯಾಯಪೀಠ, ನಿಮ್ಮ ಮನೆ ಊಟ ತಿನ್ನಲು ಯಾರೂ ಸಮಸ್ಯೆ ಮಾಡುವುದಿಲ್ಲ. ಇಲ್ಲಿ ಪ್ರಶ್ನೆ ಇರುವುದು ಜೈಲಿನಲ್ಲಿ ಮನೆ ಊಟ ಕೊಡಬೇಕೇ ಬೇಡವೇ ಎನ್ನುವುದು ಎಂದು ಹೇಳಿತು.
ವಾದ ಮುಂದುವರಿಸಿದ ವಕೀಲರು, ಮನೆ ಊಟ ಅಷ್ಟೇ ಅಲ್ಲ, ಬೇರೆ ಸಮಸ್ಯೆಗಳೂ ಇವೆ. ಕೈದಿಗಳಿಗೆ ಹೊಟ್ಟೆ ನೋವು, ಮೂತ್ರಪಿಂಡ ಸಮಸ್ಯೆ, ಹರ್ನಿಯಾ ಮತ್ತಿತರ ಆರೋಗ್ಯ ಸಮಸ್ಯೆಗಳಿವೆ. ಅವರಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. 90 ವರ್ಷ ವೃದ್ಧೆಯೊಬ್ಬರಿಗೆ ಸರಿಯಾದ ಊಟ, ವೈದ್ಯಕೀಯ ಉಪಚಾರ ಸಿಗುತ್ತಿಲ್ಲ. ಕೈದಿಗಳಿಗೆ ಜೈಲುಗಳಲ್ಲಿ ಶಿಕ್ಷಣದ ವ್ಯವಸ್ಥೆ ಕಲ್ಪಿಸುವ ಅವಶ್ಯಕತೆಯೂ ಇದೆ ಎಂದರು.
ವಾದ ಆಲಿಸಿದ ನ್ಯಾಯಪೀಠ, ಈ ಬಗ್ಗೆೆ ಮುಂದಿನ ವಿಚಾರಣೆ ವೇಳೆ ಪರಿಶೀಲಿಸೋಣ ಎಂದು ತಿಳಿಸಿ ಅರ್ಜಿಯನ್ನು ಸೆಪ್ಟೆಂಬರ್ 11ರಂದು ಸಂಜೆ 4 ಗಂಟೆಗೆ ವಿಚಾರಣೆಗೆ ನಿಗದಿಪಡಿಸಿತು.
ನ್ಯಾಯಾಂಗ ಬಂಧನ ವಿಸ್ತರಿಸಿದ ಎಸಿಎಂಎಂ ಕೋರ್ಟ್:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ ಎಲ್ಲ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 12 ರವರೆಗೆ ವಿಸ್ತರಿಸಿ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ದರ್ಶನ್ ಹಾಗೂ ಇತರ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಸೋಮವಾರಕ್ಕೆ ಅಂತ್ಯವಾಗಿತ್ತು. ಇದರಿಂದ, ಜೈಲಿನಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ತನಿಖಾಧಿಕಾರಿಗಳ ಪರ ವಕೀಲರು ಹಾಜರಾಗಿ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಲು ಕೋರಿ ಅರ್ಜಿ ಸಲ್ಲಿಸಿದರು. ಅದನ್ನು ಪರಿಗಣಿಸಿದ ನ್ಯಾಯಾಲಯ, ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 12 ರವರೆಗೆ ವಿಸ್ತರಿಸಿತು.
Related Articles
Thank you for your comment. It is awaiting moderation.
Comments (0)