ಮತ ಎಣಿಕೆ ದೃಶ್ಯಾವಳಿ ಒಳಗೊಂಡ ಹಾರ್ಡ್ ಡಿಸ್ಕ್ ಪಡೆದ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು: ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಸಂಗ್ರಹಿಸಿರುವ ಹಾರ್ಡ್‌ಡಿಸ್ಕ್‌ ಅನ್ನು ಐಕಿಯಾ ಬಿಸಿನೆಸ್‌ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌‌ನಿಂದ ಪಡೆಯಲಾಗಿದೆಯೇ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ವೆಂಕಟರಾಜ (ಹಾಲಿ ಕೊಡಗು ಜಿಲ್ಲಾಾಧಿಕಾರಿ) ಅವರಿಗೆ ಹೈಕೋರ್ಟ್ ಸೂಚಿಸಿದೆ.

ಕೋಲಾರದ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕಾಂಗ್ರೆೆಸ್‌ನ ಕೆ.ವೈ. ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸುವಂತೆ ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿದೆ.

ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ಸಂಪೂರ್ಣ ವಿಡಿಯೋ ನಾಪತ್ತೆಯಾಗಿರುವ ಬಗ್ಗೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ವೆಂಕಟರಾಜ ಅವರಿಗೆ ಹೈಕೋರ್ಟ್ ಆಗಸ್ಟ್ 27ರಂದು ಸೂಚಿಸಿತ್ತು.

ಮಂಗಳವಾರ ಅರ್ಜಿ ವಿಚಾರಣೆಗೆ ಹಾಜರಾದ ವೆಂಕಟರಾಜ ಪರ ವಕೀಲರು, ಐಕಿಯಾ ಬಿಸಿನೆಸ್‌ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಏಜೆನ್ಸಿಗೆ ಮತ ಎಣಿಕೆ ಕಾರ್ಯದ ದೃಶ್ಯಾವಳಿ ಚಿತ್ರೀಕರಿಸಲು ಗುತ್ತಿಗೆ ನೀಡಲಾಗಿತ್ತು. ಮತ ಎಣಿಕೆ ಕಾರ್ಯದ ದೃಶ್ಯಾವಳಿ ಚಿತ್ರೀಕರಿಸಿ, ಅದರ ವಿಡಿಯೋ ಒಳಗೊಂಡ ಹಾರ್ಡ್‌ಸಿಡ್ಕ್‌ ಅನ್ನು ಜಿಲ್ಲಾ ಚುನಾವಣಾಧಿಕಾರಿಗೆ (ಡಿಇಒ) ನೀಡಲಾಗಿದೆ. ತಮಗೆ ವಹಿಸಿದ ಜವಾಬ್ದಾರಿ ಪೂರ್ಣಗೊಳಿಸಿರುವ ಬಗ್ಗೆ ಡಿಇಒ ಅವರಿಂದ ಸ್ವೀಕೃತಿ ಪತ್ರ ಸಹ ಪಡೆಯಲಾಗಿದೆ ಎಂದು ಏಜೆನ್ಸಿ ಪತ್ರ ಬರೆದಿದೆ. ಆದರೆ, ಆ ಸ್ವೀಕೃತಿ ಪ್ರತಿಯ ದಾಖಲೆ ಡಿಇಒ ಕಚೇರಿಯಲ್ಲಿಲ್ಲ ಎಂದು ತಿಳಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಹಾರ್ಡ್‌ ಡಿಸ್ಕ್‌ ಸ್ವೀಕರಿಸಿ ಏಜೆನ್ಸಿಗೆ ಸ್ವೀಕೃತಿ ಪತ್ರ ವಿತರಿಸಿದ್ದರೆ, ಅದರ ಪ್ರತಿಯನ್ನು ಡಿಇಒ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಏಜೆನ್ಸಿ ಸಹ ಹಾರ್ಡ್‌ಡಿಸ್ಕ್‌ ಅನ್ನು ಡಿಇಒಗೆ ನೀಡಿ ಅವರಿಂದ ಪಡೆದಿರುವ ಸ್ವೀಕೃತಿಯ ಪ್ರತಿ ಸಲ್ಲಿಸಬೇಕು. ಸ್ವೀಕೃತಿ ಪ್ರತಿ ಒದಗಿಸುವಂತೆ ಡಿಇಒ ಅವರು ಏಜೆನ್ಸಿಯನ್ನು ಕೇಳಹುದು. ಈ ಎಲ್ಲ ಪ್ರಕ್ರಿಯೆ ಕುರಿತು ವಿವರಣೆ ನೀಡಿ ವೆಂಕಟರಾಜ ಅವರು ಹೊಸದಾಗಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ, ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿತು.

Related Articles

Comments (0)

Leave a Comment