ಕೆಐಎಡಿಬಿ ಅಭಿವೃದ್ಧಿಪಡಿಸಿದ ಪ್ರದೇಶದ ಆಸ್ತಿಗಳಿಗೆ ತೆರಿಗೆ ವಿಧಿಸಲು ಗ್ರಾ.ಪಂ.ಗಳಿಗೆ ಕಾನೂನಾತ್ಮಕ ಅಧಿಕಾರವಿಲ್ಲ – ಹೈಕೋರ್ಟ್
- by Prashanth Basavapatna
- July 9, 2025
- 138 Views

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಸೂಚಿತ ಮತ್ತು ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲಿರುವ ಕೈಗಾರಿಕಾ ಸಂಸ್ಥೆಗಳಿಗೆ ತೆರಿಗೆ ವಿಧಿಸಲು ಅಥವಾ ಅವುಗಳಿಂದ ತೆರಿಗೆ ಸಂಗ್ರಹಿಸಲು ಗ್ರಾಮ ಪಂಚಾಯತಿಗಳಿಗೆ ಕಾನೂನಿನಲ್ಲಿ ಯಾವುದೇ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ನೆಲಮಂಗಲದ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಹಲವಾರು ಕೈಗಾರಿಕಾ ಸಂಸ್ಥೆಗಳಿಗೆ ಆಸ್ತಿ ತೆರಿಗೆ ಪಾವತಿಸುವಂತೆ ಸೋಂಪುರ ಗ್ರಾಮ ಪಂಚಾಯಿತಿ ನೀಡಿರುವ ನೋಟಿಸ್‌ಗಳನ್ನು ಪ್ರಶ್ನಿಸಿ ಕಲ್ಪತರು ಬ್ರೂವರೀಸ್ ಮತ್ತು ಡಿಸ್ಟಿಲರೀಸ್ ಪ್ರೈವೆಟ್ ಲಿಮಿಟೆಡ್ ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಆಸ್ತಿ ತೆರಿಗೆ ಪಾವತಿಸುವಂತೆ ಸೋಂಪುರ ಗ್ರಾಮ ಪಂಚಾಯಿತಿ ನೀಡಿದ್ದ ನೋಟಿಸ್‌ಗಳನ್ನು ರದ್ದುಪಡಿಸಿರುವ ನ್ಯಾಯಾಲಯ, ಕೆಐಎಡಿಬಿ ಕಾಯ್ದೆ 1966ರ ನಿಬಂಧನೆಗಳ ಅನುಸಾರ ತೆರಿಗೆ ವಿಧಿಸುವ ಮತ್ತು ಸಂಗ್ರಹಿಸುವ ಹಕ್ಕು ಸೇರಿ ಅಭಿವೃದ್ಧಿ ಚಟುವಟಿಕೆ ನಿಯಂತ್ರಿಸುವ ಮತ್ತು ಅನುಮೋದಿಸುವ ಅಧಿಕಾರ ಕೆಐಎಡಿಬಿಗೆ ಮಾತ್ರ ಇರುತ್ತದೆ. ನಿರ್ದಿಷ್ಟ ಶಾಸನಬದ್ಧ ಸಮ್ಮತಿಯ ಅನುಪಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಅಂಥ ಅಧಿಕಾರವಿಲ್ಲ ಹಾಗೂ ಆ ಅಧಿಕಾರವನ್ನು ಕೆಐಎಡಿಬಿ ಇಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಸರ್ಕಾರದ ಅಧಿಸೂಚನೆ ಇದ್ದರಷ್ಟೇ ಅಧಿಕಾರ ವ್ಯಾಪ್ತಿ:
ರಾಜ್ಯ ಸರ್ಕಾರ ಕೆಐಎಡಿಬಿ ಕಾಯ್ದೆಯ ಸೆಕ್ಷನ್ 37ರ ಅಡಿಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಕೆಐಎಡಿಬಿ ನಿಯಂತ್ರಣದಿಂದ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಿಗೆ ವರ್ಗಾಯಿಸಿ ಅಧಿಸೂಚನೆ ಹೊರಡಿಸಿದ್ದಾಗ ಮಾತ್ರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕೈಗಾರಿಕಾ ಪ್ರದೇಶಗಳ ಮೇಲೆ ಅಧಿಕಾರವ್ಯಾಪ್ತಿ ಹೊಂದಲಿದ್ದಾರೆ ಎಂದಿರುವ ಹೈಕೋರ್ಟ್, ಸರ್ಕಾರ ಅಂತಹ ಅಧಿಸೂಚನೆ ಹೊರಡಿಸುವವರೆಗೆ, ಕೆಐಎಡಿಬಿ ಅಧಿಕಾರ ವ್ಯಾಪ್ತಿ ಪ್ರತ್ಯೇಕವಾಗಿರಲಿದೆ ಎಂದು ಸ್ಪಷ್ಟಪಡಿಸಿದೆ.
ಜತೆಗೆ, ಕೆಐಎಡಿಬಿ ಕಾಯ್ದೆಯ ಸೆಕ್ಷನ್ 47 ಮತ್ತು ಅದರ ನಿಬಂಧನೆಗಳಿಗೆ ಹೊಂದಿಕೆಯಾಗದ ಯಾವುದೇ ಇತರ ಕಾನೂನಿನ ಮೇಲೆ ಕಾಯ್ದೆಯ ನಿಬಂಧನೆಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತವೆ. ಆದ್ದರಿಂದ, ಶಾಸನಬದ್ಧ ಯೋಜನೆಯು ಗ್ರಾಮ ಪಂಚಾಯತಿಗಳು ಸೇರಿ ಯಾವುದೇ ಸ್ಥಳೀಯ ಪ್ರಾಧಿಕಾರ ಪರೋಕ್ಷವಾಗಿ ಅಥವಾ ಆಕಸ್ಮಿಕವಾಗಿ ಅಧಿಕಾರ ಚಲಾಯಿಸಲು ಯಾವುದೇ ಅವಕಾಶವಿರುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
Related Articles
Thank you for your comment. It is awaiting moderation.
Comments (0)