ಶಾಲೆಗಳಲ್ಲಿ ಸುರಕ್ಷತಾ ಕ್ರಮ ಅಳವಡಿಕೆ ವಿಚಾರದಲ್ಲಿ ಸರ್ಕಾರ ಮಾದರಿ ನಾಗರಿಕನಂತಿರಬೇಕು – ಹೈಕೋರ್ಟ್
- by Jagan Ramesh
- December 2, 2024
- 89 Views
ಬೆಂಗಳೂರು: ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆಯ ಕ್ರಮಗಳನ್ನು ಖಾಸಗಿ ಶಾಲೆಗಳಲ್ಲಿ ಬಯಸುವ ಸರ್ಕಾರ, ಆ ಸುರಕ್ಷತಾ ಕ್ರಮಗಳನ್ನು ತನ್ನ ಅಧೀನದಲ್ಲಿರುವ ಸರ್ಕಾರಿ ಶಾಲೆಗಳಲ್ಲೂ ಇರುವಂತೆ ನೋಡಿಕೊಳ್ಳಬೇಕು. ಈ ವಿಚಾರದಲ್ಲಿ ಸರ್ಕಾರಿ ಶಾಲೆಗಳಿಗೆ ವಿನಾಯಿತಿ ಸಲ್ಲದು. ಶಾಲೆಗಳಲ್ಲಿ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ ಸೇರಿ ಉಳಿದ ಷರತ್ತುಗಳ ಪಾಲನೆ, ಕ್ರಮಗಳ ಅಳವಡಿಕೆಯಲ್ಲಿ ಸರ್ಕಾರ ‘ಮಾದರಿ ನಾಗರಿಕ’ನಾಗಿ ವರ್ತಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಶಾಲೆಗಳಿಗೆ ಮಾನ್ಯತೆ ಪಡೆದುಕೊಳ್ಳಲು ಅಥವಾ ಮಾನ್ಯತೆ ನವೀಕರಣಕ್ಕೆ ಕಟ್ಟಡ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು 2022ರ ಜೂನ್ 6ರಂದು ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ಅವರ್ಸ್ ಸ್ಕೂಲ್) ಸಲ್ಲಿಸಿದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸರ್ಕಾರದ ಸುತ್ತೋಲೆಯಲ್ಲಿ ಹೊಸ ಷರತ್ತುಗಳನ್ನು ವಿಧಿಸಲಾಗಿಲ್ಲ. ಸುತ್ತೋಲೆಯಲ್ಲಿರುವುದು ಹೊಸ ನಿಯಮಗಳೂ ಅಲ್ಲ. ಆದರೆ, ಅವುಗಳನ್ನು ಪಾಲಿಸಲು ಅಥವಾ ಅಳವಡಿಸಿಕೊಳ್ಳಲು ಕಾಲಾವಕಾಶ ಬೇಕು. ಖಾಸಗಿ ಶಾಲೆಗಳು ಶಿಕ್ಷಣ ನೀಡುವಂತೆ ಉದಾತ್ತ ಸೇವೆ ಸಲ್ಲಿಸುತ್ತಿರುವುದರಿಂದ ಮಾನವೀಯ ಆಧಾರದಲ್ಲಿ ಪರಿಗಣಿಸಬೇಕು. ಮುಖ್ಯವಾಗಿ ಇದರಲ್ಲಿ ಆರ್ಥಿಕ ವಿಚಾರ ಒಳಗೊಂಡಿರುವುದರಿಂದ ಮಾನ್ಯತೆ ಅಥವಾ ಮಾನ್ಯತೆ ನವೀಕರಣಕ್ಕೆ ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ ಪ್ರಮಾಣಪತ್ರ ಪಡೆದುಕೊಳ್ಳುವುದು ಸೇರಿ ಕೆಲ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಿನ ಶೈಕ್ಷಣಿಕ ವರ್ಷದ (2025-26) ವರೆಗೆ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಕಾಲಾವಕಾಶ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.
ಖಾಸಗಿ ಶಾಲೆಗಳಿಗೆ ಕಡ್ಡಾಯಗೊಳಿಸಿರುವ ನಿಯಮಗಳು ಸರ್ಕಾರಿ ಶಾಲೆಗಳಿಗೂ ಅನ್ವಯವಾಗುತ್ತದೆ, ಈ ವಿಚಾರದಲ್ಲಿ ಸರ್ಕಾರಿ ಶಾಲೆಗಳಿಗೆ ವಿನಾಯಿತಿ ಸಲ್ಲದು ಎಂದು ಇದೇ ವೇಳೆ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತು.
Related Articles
Thank you for your comment. It is awaiting moderation.
Comments (0)