ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯಸ್ವಾಮಿ ದೇಗುಲ; ಬುಧವಾರ ಮಧ್ಯಂತರ ಆದೇಶ ನೀಡಲಿರುವ ಹೈಕೋರ್ಟ್

ಬೆಂಗಳೂರು: ನಗರದ ಸುಪ್ರಸಿದ್ಧ ಗಾಳಿ ಆಂಜನೇಯಸ್ವಾಮಿ ದೇವಾಲಯವನ್ನು ರಾಜ್ಯ ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆದು ಹೊರಡಿಸಲಾಗಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂಬ ದೇವಾಲಯ ಆಡಳಿತ ಮಂಡಳಿಯ ಮಧ್ಯಂತರ ಮನವಿ ಕುರಿತ ಆದೇಶವನ್ನು ಹೈಕೋರ್ಟ್‌ ಬುಧವಾರಕ್ಕೆ ಕಾಯ್ದಿರಿಸಿದೆ.

ಸರ್ಕಾರದ ಆದೇಶ ರದ್ದು ಕೋರಿ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್‌ ದತ್ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ದೇವಾಲಯದ ಆಡಳಿತ ಮಂಡಳಿ ಪರ ವಕೀಲ ಪಿ. ಪ್ರಸನ್ನಕುಮಾರ್‌ ವಾದ ಮಂಡಿಸಿ, ದೇವಾಲಯವನ್ನು ಸುಪರ್ದಿಗೆ ಪಡೆದು ಸರ್ಕಾರ ತರಾತುರಿಯಲ್ಲಿ ಆದೇಶಿಸಿದೆ. ಆ ಆದೇಶ ಹೊರಡಿಸುವ ಮುನ್ನ ಅರ್ಜಿದಾರರ ಅಹವಾಲು ಆಲಿಸಿಲ್ಲ. ಮೇಲಾಗಿ ರಜಾ ದಿನವಾದ ಎರಡನೇ ಶನಿವಾರದಂದು ಆದೇಶ ಹೊರಡಿಸಿದೆ. ದೇವಾಲಯದ ಬಗ್ಗೆ ಸರ್ಕಾರ ಮಾಡಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಆದ್ದರಿಂದ, ಈ ಅರ್ಜಿ ಇತ್ಯರ್ಥವಾಗುವರೆಗೆ ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆದ ಆದೇಶಕ್ಕೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಬೇಕು ಎಂದು ಕೋರಿದರು.

ಈ ಮನವಿ ಆಕ್ಷೇಪಿಸಿದ ಸರ್ಕಾರದ ವಕೀಲರು, ದೇವಾಲಯದ ಟ್ರಸ್ಟ್‌ನಲ್ಲಿ ಹಣದ ದುರುಪಯೋಗವಾಗಿರುವ ಬಗ್ಗೆ ದೂರುಗಳಿದ್ದವು. ದೇವಾಲಯದ ಸಿಬ್ಬಂದಿಯೇ ಹುಂಡಿ ಹಣ ಕಳ್ಳತನ ಮಾಡಿದ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ದೇವಾಲಯದ ಆಡಳಿತ ಮಂಡಳಿ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ಉನ್ನತ ಮಟ್ಟದ ಅಧಿಕಾರಿಗಳಿಂದ ವಿಚಾರಣಾ ವರದಿ ಪಡೆಯಲಾಗಿತ್ತು. ಅದರಲ್ಲಿ ದೇವಾಲಯದಲ್ಲಿ ಹಣಕಾಸು ದುರುಪಯೋಗ ನಡೆದಿರುವುದು ತಿಳಿದು ಬಂದಿದೆ. ಇದರಿಂದ, ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯಲಾಗಿದ್ದು, ಆ ಆದೇಶಕ್ಕೆ ತಡೆಯಾಜ್ಞೆ ನೀಡಬಾರದು ಎಂದು ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿ ಕುರಿತ ಆದೇಶವನ್ನು ನಾಳೆ ಪ್ರಕಟಿಸುವುದಾಗಿ ತಿಳಿಸಿತು.

ಪ್ರಕರಣವೇನು?
ಗಾಳಿ ಆಂಜನೇಯಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲ. ದೇವಾಲಯಕ್ಕೆ ಲಕ್ಷಾಂತರ ರೂ. ಆದಾಯ ಬರುತ್ತಿದ್ದರೂ ಪ್ರತಿ ವರ್ಷ ಉಳಿತಾಯವಿಲ್ಲದೇ ವೆಚ್ಚ ಮಾಡಲಾಗುತ್ತಿದೆ. ದೇವಸ್ಥಾನದ ಹಣ ದುರುಪಯೋಗವಾಗುತ್ತಿದೆ. ಆದಾಯ ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ಕಳೆದ 25 ವರ್ಷಗಳಿಂದ ಯಾವುದೇ ದಾಖಲೆ ಇಡದೆ, ಸಹಾಯಕ ಆಯುಕ್ತರು ಮತ್ತು ಮುಜರಾಯಿ ಇಲಾಖೆ ನೋಟಿಸ್ ನೀಡಿದ ಬಳಿಕ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದ ಮುಜರಾಯಿ ಇಲಾಖೆ, ದೇವಾಲಯವನ್ನು ಸುಪರ್ದಿಗೆ ಪಡೆದು ಇತ್ತೀಚೆಗೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ದೇವಾಲಯ ಆಡಳಿತ ಮಂಡಳಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

Related Articles

Comments (0)

Leave a Comment