ರಾಜಕೀಯ ಉದ್ದೇಶಕ್ಕೆ ಹಬ್ಬಗಳ ಬಳಕೆಗೆ ಹೈಕೋರ್ಟ್ ಬೇಸರ; ರೇಣುಕಾಚಾರ್ಯ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಮಧ್ಯಂತರ ಆದೇಶ
- by Jagan Ramesh
- September 24, 2025
- 917 Views
ಬೆಂಗಳೂರು: “ಹಬ್ಬಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ, ಸರ್ಕಾರ ಸಹ ಇದನ್ನೇ ಮಾಡುತ್ತಿದೆ” ಎಂದು ಮೌಖಿಕವಾಗಿ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಗಣೇಶೋತ್ಸವದ ವೇಳೆ ಡಿಜೆ ಬಳಕೆ ನಿಷೇಧಿಸಿದ್ದ ದಾವಣಗೆರೆ ಜಿಲ್ಲಾಡಳಿತದ ವಿರುದ್ಧ ಸುದ್ದಿಗೋಷ್ಠಿ ನಡೆಸಿ, ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಎಕ್ಸ್‌ಟೆನ್ಷನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಎಂ.ಪಿ. ರೇಣುಕಾಚಾರ್ಯ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರು ಹಾಗೂ ಸರ್ಕಾರದ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಪೊಲೀಸರು ಬಲವಂತದ ಕ್ರಮ ಜರುಗಿಸಬಾರದು. ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ಮಧ್ಯಂತರ ಆದೇಶ ಮಾಡಿತು.
ಜತೆಗೆ, ಪ್ರತಿವಾದಿಗಳಾದ ದಾವಣಗೆರೆ ಎಕ್ಸ್‌ಟೆನ್ಷನ್ ಠಾಣೆ ಪೊಲೀಸರು ಹಾಗೂ ದೂರುದಾರ ಬಿ.ಆರ್. ರವಿ (ಪೊಲೀಸ್ ಕಾನ್‌ಸ್ಟೆಬಲ್) ಅವರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ದಸರಾ ರಜೆಯ ಬಳಿಕ ಮುಂದೂಡಿತು.
ಹಬ್ಬಗಳು ರಾಜಕೀಯ ಕಾರಣಗಳಿಗೆ ಬಳಕೆಯಾಗಬಾರದು:
ಇದಕ್ಕೂ ಮುನ್ನ ರೇಣುಕಾಚಾರ್ಯ ಪರ ವಕೀಲರು ವಾದ ಮಂಡಿಸಿ, ಡಿಜೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಸುತ್ತೋಲೆಯನ್ನು ಅರ್ಜಿದಾರರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದರು. ಅವರ ಹೇಳಿಕೆಗಳನ್ನು ತಿರುಚಲಾಗಿದ್ದು, ತಪ್ಪಾಗಿ ವರದಿ ಮಾಡಲಾಗಿದೆ. ಅದರ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮೆರವಣಿಗೆಗೆ ಅರ್ಜಿದಾರರು ಜವಾಬ್ದಾರರಲ್ಲ ಹಾಗೂ ಅವರು ಸಾರ್ವಜನಿಕ ಮಾರ್ಗವನ್ನು ನಿರ್ಬಂಧಿಸಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಸರ್ಕಾರದ ಪರ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಸರ್ಕಾರ ಅಥವಾ ಡಿಸಿ ಆದೇಶವನ್ನು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಲು ಅರ್ಜಿದಾರರಿಗೆ ಅವಕಾಶವಿತ್ತು. ಅದನ್ನು ಯಾರೂ ತಡೆಯುತ್ತಿರಲಿಲ್ಲ. ಅದು ಬಿಟ್ಟು ಜನರನ್ನು ಸೇರಿಸಿ, ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ನೆರೆದಿದ್ದ ಜನರನ್ನು ಉದ್ದೇಶಿಸಿ “ನೀವು ಡಿಜೆ ಹಾಕಿ, ತಾಕತ್ತಿದ್ದರೆ ಪೊಲೀಸರು ಬಂದು ತಡೆಯಲಿ ನೋಡೋಣ” ಎಂದು ಹೇಳಿಕೆ ನೀಡಿದ್ದಾರೆ. ಇದು ಜನಪ್ರತಿನಿಧಿಯೊಬ್ಬರು ಬಳಸುವ ಭಾಷೆಯಾಗಿದೆ ಎಂದು ಆಕ್ಷೇಪಿಸಿದರು.
ವಿಚಾರಣೆಯ ಹಂತದಲ್ಲಿ ನ್ಯಾಯಪೀಠ ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ, “ಒಂದು ವಿಷಯ ಜಗದೀಶ್, ಹಬ್ಬಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರವೂ ಸಹ. ಇದನ್ನು ಗಮನಿಸಲಾಗಿದೆ, ಈ ರೀತಿ ಆಗಬಾರದು” ಎಂದು ಮೌಖಿಕವಾಗಿ ಹೇಳಿತು.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಸಣ್ಣ ವಿಚಾರವನ್ನು ಎಲ್ಲರೂ ಸೇರಿ ದೊಡ್ಡದು ಮಾಡಲು ಮುಂದಾಗುತ್ತಾರೆ. ಪ್ರತಿವರ್ಷ ಈ ಹಬ್ಬದ ಸಂದರ್ಭದಲ್ಲಿ ಸಮಸ್ಯೆಯಾಗುತ್ತಿದೆ. ಒಬ್ಬರತ್ತ ಬೆರಳು ಮಾಡುತ್ತಿಲ್ಲ. ಎರಡೂ ಕಡೆಯಿಂದ ಈ ಸಮಸ್ಯೆಗಳಾಗುತ್ತಿವೆ. ಮದ್ದೂರಿನಲ್ಲಿ ಇಂಥದೇ ವಿಚಾರದಲ್ಲಿ ನಡೆದ ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿದರೆ ನಮಗೆ ಯಾವುದೇ ತಕರಾರಿಲ್ಲ. ಆದರೆ, ಈ ರೀತಿ ರಸ್ತೆಯಲ್ಲಿ ನಿಂತು ಜನರನ್ನು ಸೇರಿಸಿ, ಪ್ರಚೋದನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
Related Articles
Thank you for your comment. It is awaiting moderation.


Comments (0)