ಕೋರ್ಟ್ ಆದೇಶದ ಹೊರತಾಗಿಯೂ ಎಸ್‌ಐಟಿ ರಚಿಸಲು ವಿಫಲ; ಗೃಹ ಇಲಾಖೆ ಕಾರ್ಯದರ್ಶಿ ಖುದ್ದು ಹಾಜರಾತಿಗೆ ಹೈಕೋರ್ಟ್ ತಾಕೀತು
- by Prashanth Basavapatna
- February 20, 2026
- 9 Views
ಬೆಂಗಳೂರು: ನ್ಯಾಯಾಲಯ ಆದೇಶ ಹೊರಡಿಸಿ 5 ತಿಂಗಳು ಕಳೆದರೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ಸ್ ಉದ್ಯೋಗಿ ಶ್ರೀಧರ್ ಎಂಬುವರ ಸಾವಿನ ಪ್ರಕರಣದ ಮರು ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಯ ಖುದ್ದು ಹಾಜರಾತಿಗೆ ನಿರ್ದೇಶಿಸಿದೆ.
ಸಾರಾ ಫಾರ್ಮ್ಸ್ ಮ್ಯಾನೇಜರ್ ಹರೀಶ್ ಮುಗರೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಶ್ರೀಧರ್ ಸಾವಿನ ಪ್ರಕರಣದ ಮರು ತನಿಖೆ ಮಾಡಲು ರಾಜ್ಯ ಸರ್ಕಾರ 4 ವಾರದಲ್ಲಿ ಎಸ್ಐಟಿ ರಚನೆ ಮಾಡಬೇಕು. ತನಿಖೆ ಆರಂಭಿಸಿದ ದಿನದಿಂದ 4 ತಿಂಗಳಲ್ಲಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಎಸ್‌ಐಟಿ ಅಂತಿಮ ವರದಿ ಸಲ್ಲಿಸಬೇಕು ಎಂದು 2025ರ ಸೆಪ್ಟೆಂಬರ್ 9ರಂದು ಹೈಕೋರ್ಟ್ ಆದೇಶಿಸಿದೆ. ಆದರೆ, ಈವರೆಗೂ ಎಸ್ಐಟಿ ರಚನೆಯಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಆದ್ದರಿಂದ, ಈ ಕುರಿತು ವಿವರಣೆ ನೀಡಲು ಫೆಬ್ರವರಿ 21ರ (ಶನಿವಾರ) ಮಧ್ಯಾಹ್ನ 2.30ಕ್ಕೆ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಖುದ್ದು ಹಾಜರಾಗಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ.
ಪ್ರಕರಣವೇನು?
ಅರ್ಜಿದಾರ ಹರೀಶ್ ಮುಗರೆ 2025ರ ಏಪ್ರಿಲ್‌ನಲ್ಲಿ ಹೈಕೊರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಗಂಡಿ ತಾಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಫಾರ್ಮ್‌ನ ಉದ್ಯೋಗಿಯಾಗಿದ್ದ ಶ್ರೀಧರ್ ಮೇಲೆ 2022ರ ಡಿಸೆಂಬರ್ 17ರಂದು ಕೆಲವರು ಹಲ್ಲೆ ಮಾಡಿದ್ದರು. ಆಗ ನಾನು ಆತನಿಗೆ ಚಿಕಿತ್ಸೆ ನೀಡಿ, ಫಾರ್ಮ್ ಕರೆದೊಯ್ದು ಅಲ್ಲೇ ತಂಗಲು ಸೂಚಿಸಿದ್ದೆ. ಮರು ದಿನ ಡಿಸೆಂಬರ್ 18ರಂದು ಬೆಳಗ್ಗೆ 6.30ಕ್ಕೆ ಫಾರ್ಮ್‌ಗೆ ಹೋದಾಗ, ಯಾರೋ ಕೆಲ ಆರೋಪಿಗಳು ಫೆನ್ಸ್ ತುಂಡು ಮಾಡಿ, ಒಳಗೆ ಪ್ರವೇಶಿಸಿದ್ದರು. ಶ್ರೀಧರ್ ಅನ್ನು ಕೊಲೆಗೈದು ಫಾರ್ಮ್ ಮಧ್ಯದಲ್ಲಿ ಶವ ಬಿಸಾಡಿದ್ದರು. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಗೆ ನಾನು ದೂರು ನೀಡಿದ್ದೆ ಎಂದು ಅರ್ಜಿಯಲ್ಲಿ ವಿವರಿಸಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 393 (ದರೋಡೆ) ಅಪರಾಧದಡಿಯಲ್ಲದೆ ಐಪಿಸಿ ಸೆಕ್ಷನ್ 323 ಅಡಿಯಲ್ಲಿ ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ ಅಪರಾಧ ಸಂಬಂಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅದು ಗಂಭೀರ ಸ್ವರೂಪವಲ್ಲದ ಅಪರಾಧವಾಗಿದೆ. ಇನ್ನೂ ಪೊಲೀಸರಿಗೆ ದಾರಿ ತಪ್ಪಿಸಿದ ಆರೋಪದಲ್ಲಿ ನನ್ನ ವಿರುದ್ಧವೇ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ, ಶ್ರೀಧರ್ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಎಂದು ಹರೀಶ್ ಮುಗರೆ ಅರ್ಜಿಯಲ್ಲಿ ಕೋರಿದ್ದರು.
ಅರ್ಜಿಯನ್ನು 2025ರ ಸೆಪ್ಟೆಂಬರ್ 9ರಂದು ಪುರಸ್ಕರಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ, ಶ್ರೀಧರ್ ಸಾವು ಪ್ರಕರಣದ ಮರು ತನಿಖೆಗೆ ಎಸ್‌ಐಟಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಆದೇಶ ಪಾಲನೆಯಾಗಿಲ್ಲ ಎಂದು ಅರ್ಜಿದಾರರು ಶುಕ್ರವಾರ ನ್ಯಾಯಾಲಯದ ಗಮನಕ್ಕೆ ತಂದರು.
Related Articles
Thank you for your comment. It is awaiting moderation.


Comments (0)