ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಆಹ್ವಾನಕ್ಕೆ ಆಕ್ಷೇಪ; ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ
- by Ramya B T
- September 6, 2025
- 47 Views

ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಮಾಜಿ ಸಂಸದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಸಕ್ತ ವರ್ಷದ ದಸರಾ ಮಹೋತ್ಸವದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ನೀಡಿರುವ ಆಹ್ವಾನ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಪ್ರತಾಪ್ ಸಿಂಹ ಅರ್ಜಿ ಸಲ್ಲಿಸಿದ್ದು, ಅರ್ಜಿಯು ಇನ್ನಷ್ಟೇ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಾಗಿದೆ.
ಆಕ್ಷೇಪವೇನು?
ದಸರಾ ಹಬ್ಬವು ಹಿಂದುಗಳ ಧಾರ್ಮಿಕ ಹಬ್ಬವಾಗಿದ್ದು, ನವರಾತ್ರಿಯ ಸಂದರ್ಭದಲ್ಲಿ ಆಚರಣೆ ಮಾಡಲಾಗುತ್ತದೆ. ಮೈಸೂರಿನ ಚಾಮುಂಡೇಶ್ವರಿಯನ್ನು ನಾಡದೇವಿ ಎಂದೂ ಮೈಸೂರು ದಸರಾ ಹಬ್ಬವನ್ನು ನಾಡ ಹಬ್ಬ ಎಂದೂ ಕರೆಯಲಾಗುತ್ತದೆ. ಆದರೆ, ಬೇರೊಂದು ಧರ್ಮಕ್ಕೆ ಸೇರಿರುವ ಬಾನು ಮುಷ್ತಾಕ್ ಅವರನ್ನು ಸರ್ಕಾರ ದಸರಾ ಉದ್ಘಾಟನೆಗೆ ಅಧಿಕೃತವಾಗಿ ಆಹ್ವಾನಿಸಿದೆ. ಬಾನು ಮುಷ್ತಾಕ್ ಅವರು ಈ ಹಿಂದೆ ಹಿಂದು ವಿರೋಧಿ ಹಾಗೂ ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ. ಅವರಿಗೆ ದಸರಾ ಉದ್ಘಾಟನೆ ಆಹ್ವಾನ ನೀಡಿರುವುದು ಸಾಂವಿಧಾನಿಕ ಹಕ್ಕುಗಳು ಮತ್ತು ಧಾರ್ಮಿಕ ಭಾವನೆಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳು ಚಾಮುಂಡೇಶ್ವರಿ ದೇವಿಯ ಗರ್ಭಗುಡಿಯ ಮುಂದೆ ದೀಪ ಹಚ್ಚಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಬೇಕಾಗುತ್ತದೆ. ಆದರೆ, ಸರ್ಕಾರದ ನಿರ್ಧಾರವು ಹಿಂದು ಸಂಘಟನೆಗಳು, ಧಾರ್ಮಿಕ ಮುಖಂಡರು ಹಾಗೂ ಭಕ್ತಾದಿಗಳ ಆತಂಕಕ್ಕೆ ಕಾರಣವಾಗಿದೆ. ಬಾನು ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿಲುವು ಸಂವಿಧಾನದ ಪರಿಚ್ಛೇದ 25 ಹಾಗೂ 26ರ ಅಡಿಯಲ್ಲಿ ಲಭ್ಯವಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಉಲ್ಲಂಘನೆಯಾಗಿದೆ. ಬಾನು ಮುಷ್ತಾಕ್ ಅವರ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ಮೂಲಭೂತವಾಗಿ ವಿಭಿನ್ನವಾಗಿದ್ದರೂ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಸಮಂಜಸವಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
Related Articles
Thank you for your comment. It is awaiting moderation.
Comments (0)