ಧರ್ಮಸ್ಥಳ ಪ್ರಕರಣ; ಎಸ್ಐಟಿ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್
- by Jagan Ramesh
- November 12, 2025
- 30 Views
ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೂರಾರು ಶವಗಳ ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಗಿದೆ ಎನ್ನಲಾದ ಪ್ರಕರಣ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ಗೆ ಸಂಬಂಧಿಸಿದ ಮುಂದಿನ ಎಲ್ಲ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಬುಧವಾರ ತೆರವುಗೊಳಿಸಿದೆ.
ಹೈಕೋರ್ಟ್ನ ಈ ಆದೇಶದಿಂದ ಎಸ್ಐಟಿ ತನಿಖೆ ಮುಂದುವರಿಯಲಿದ್ದು, ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪ ಎದುರಿಸುತ್ತಿರುವ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಮತ್ತು ವಿಠಲ್ಗೌಡ ಅವರಿಗೆ ಎಸ್ಐಟಿ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್ (FIR No. 39/2025), ವಿಚಾರಣೆಗೆ ಹಾಜರಾಗಲು ಪೊಲೀಸರು ನೀಡಿರುವ ನೋಟಿಸ್ ಹಾಗೂ ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಕೋರಿ ಗಿರೀಶ್ ಮಟ್ಟೆಣ್ಣವರ್ ಸೇರಿ ನಾಲ್ವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಎಫ್ಐಆರ್ಗೆ ತಡೆ ನೀಡಿ ಅಕ್ಟೋಬರ್ 30ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿತಲ್ಲದೆ, ಅರ್ಜಿಯನ್ನು ಮೆರಿಟ್ ಆಧಾರದಲ್ಲಿ ವಿಚಾರಣೆ ನಡೆಸುವುದಾಗಿ ತಿಳಿಸಿ, ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ವಾದ ಮಂಡಿಸಿ, ಮ್ಯಾಜಿಸ್ಟ್ರೇಟ್ ಅನುಮತಿ ಪಡೆದಿಲ್ಲ ಎಂದು ಕೋರ್ಟ್ಗೆ ಸುಳ್ಳು ಮಾಹಿತಿ ನೀಡಿ ಅರ್ಜಿದಾರರು ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಆದರೆ, ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲು ಹಾಗೂ ನೋಟಿಸ್ ನೀಡಲು ಮ್ಯಾಜಿಸ್ಟ್ರೇಟ್ ಅನುಮತಿ ಪಡೆಯಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರಲ್ಲದೆ, ಅನುಮತಿಯ ಪ್ರತಿಯನ್ನು ಕೋರ್ಟ್ಗೆ ಸಲ್ಲಿಸಿದರು.
ವಾದ ಮುಂದುವರಿಸಿದ ಬಿ.ಎನ್. ಜಗದೀಶ್, ಈ ಹಿಂದೆ ಎಸ್ಐಟಿ ತನಿಖೆಯನ್ನು ಶ್ಲಾಘಿಸಿದ್ದ ಅರ್ಜಿದಾರರು, ಈಗ ಅವರಿಗೇ ನೋಟಿಸ್ ನೀಡುತ್ತಿದ್ದಂತೆಯೇ ಕಿರುಕುಳ ಎಂದು ಆರೋಪಿಸಿ ಕೋರ್ಟ್ಗೆ ಬಂದಿದ್ದಾರೆ. ಈ ಹಿಂದೆ ನೀಡಿದ್ದ ನೋಟಿಸ್ಗಳಿಗೂ, ಈಗ ನೀಡಿರುವ ನೋಟಿಸ್ಗಳಿಗೂ ಸಂಬಂಧವಿಲ್ಲ. ಆಗ ಅರ್ಜಿದಾರರನ್ನು ಸಾಕ್ಷಿಗಳಾಗಿ ವಿವರಣೆ ಕೇಳಲು ನೋಟಿಸ್ ನೀಡಲಾಗಿತ್ತು. ಈಗ ಅವರನ್ನು ಆರೋಪಿಗಳನ್ನಾಗಿಸಲಾಗಿದ್ದು, ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಇದರಲ್ಲಿ ಕಿರುಕುಳದ ಪ್ರಶ್ನೆಯೇ ಇಲ್ಲ. ಎಫ್ಐಆರ್ಗೆ ತಡೆಯಾಜ್ಞೆ ನೀಡಿರುವುದರಿಂದ ತನಿಖೆಗೆ ಅಡ್ಡಿಯಾಗುತ್ತಿದೆ. ಆದ್ದರಿಂದ, ಈ ಹಿಂದೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಕೋರಿದರು.
Related Articles
Thank you for your comment. It is awaiting moderation.


Comments (0)