ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್; ಆರೋಪಿ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಂಚಿಕೊಂಡ ಆರೋಪದಲ್ಲಿ ಮಳವಳ್ಳಿ ತಾಲೂಕಿನ ಮೆಹದಿ ನಗರದ ನಿವಾಸಿ ಜಾವೀದ್ ಪಾಷಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಮಂಡ್ಯ ಜಿಲ್ಲೆಯ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಹಾಗೂ ಪ್ರಕರಣದಲ್ಲಿ ತನ್ನ ಬಂಧನ ಅಕ್ರಮವೆಂದು ಘೊಷಿಸುವಂತೆ ಕೋರಿ ಜಾವಿದ್‌ ಪಾಷಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣವೇನು?
ಪಹಲ್ಗಾಮ್ ದಾಳಿಯ ಬಳಿಕ ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದ ಸಂದರ್ಭದಲ್ಲಿ ಜಾವಿದ್ ಪಾಷಾ 2025ರ ಮೇ 8ರಂದು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಕಾಲಿಗೆ ಶೂ ತೊಡಿಸುತ್ತಿರುವ ರೀತಿಯಲ್ಲಿ ತಿರುಚಿದ ಫೋಟೋ ಹಾಗೂ “ಭಾರತವನ್ನು ನಾಶ ಮಾಡಲು ಇ್ರಮಾನ್‌ ಖಾನ್‌ ಒಬ್ಬರು ಸಾಕು” ಎಂಬ ಶೀರ್ಷಿಕೆಯುಳ್ಳ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದ ಎಂದು ಆರೋಪಿಸಲಾಗಿದ್ದು, ಈ ಕುರಿತು ಮಹೇಶ್‌ ಎಂಬುವವರು ಮಂಡ್ಯ ಜಿಲ್ಲೆಯ ಕಿರುಗಾವಲು ಪೊಲೀಸ್‌ ಠಾಣೆಗೆ ಮೇ 9ರಂದು ದೂರು ನೀಡಿ, ಕ್ರಮ ಜರುಗಿಸುವಂತೆ ಕೋರಿದ್ದರು.

ದೂರು ಆಧರಿಸಿ ಜಾವಿದ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 152, 192 ಮತ್ತು 340 ಅಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಪರಾಧಿಕ ಒಳಸಂಚು ರೂಪಿಸಿದ, ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಯತ್ನಿಸಿದ ಮತ್ತು ತಿರುಚಿದ ವಿದ್ಯುನ್ಮಾನ ಸಾಕ್ಷ್ಯವನ್ನು ಬಳಕೆ ಮಾಡಿದ ಆರೋಪದಲ್ಲಿ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು, ನಂತರ ಜಾವಿದ್‌ ಪಾಷಾನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

Related Articles

Comments (0)

Leave a Comment