ದೂರು ದಾಖಲಿಸಲು ಆಗುವ ವಿಳಂಬ ಖುಲಾಸೆಗೆ ಆಧಾರವಾಗದು; ಅಳಿಯನ ಕೊಂದ ಮಾವನ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್
- by Ramya B T
- March 3, 2026
- 9 Views
ಬೆಂಗಳೂರು: ಕೊಲೆ ಪ್ರಕರಣದಲ್ಲಿ ದೂರು ದಾಖಲಿಸುವಲ್ಲಿ ಆಗಿರುವ ವಿಳಂಬವು ಆರೋಪಿಯನ್ನು ಖುಲಾಸೆಗೊಳಿಸಲು ಆಧಾರವಾಗುವುದಿಲ್ಲ. ಅಪರಾಧ ಕೃತ್ಯ ನಡೆದ ತಕ್ಷಣ ಸಂತ್ರಸ್ತರ ಕುಟುಂಬ ಗಾಯಾಳುವನ್ನು ಉಳಿಸುವ ಬಗ್ಗೆ ಕಾಳಜಿ ತೋರುತ್ತದೆಯೇ ಹೊರತು ಪೊಲೀಸರಿಗೆ ದೂರು ನೀಡುವ ಬಗ್ಗೆ ಅಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಳಿಯನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಮಾವನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ಎತ್ತಿಹಿಡಿದಿದೆ.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಂಜಪ್ಪ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ಟಿ. ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ವೈದ್ಯಕೀಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ, ಇದೊಂದು ನರಹತ್ಯೆಯ ಸಾವು ಎಂಬುದು ಸ್ಪಷ್ಟವಾಗುತ್ತದೆ. ದಾಖಲೆಯಲ್ಲಿರುವ ಅಂಶಗಳನ್ನು ಗಮನಿಸಿದರೆ, ವಿಚಾರಣಾ ನ್ಯಾಯಾಲಯದ ನೀಡಿರುವ ತೀರ್ಪು ರದ್ದುಗೊಳಿಸಲು ಯಾವುದೇ ಆಧಾರಗಳು ಕಂಡುಬರುವುದಿಲ್ಲ. ಒಂದು ವೇಳೆ, ತೀರ್ಪು ರದ್ದುಪಡಿಸಿ, ವಿಭಿನ್ನ ತೀರ್ಪು ನೀಡಬೇಕೆಂದರೆ ಬಲವಾದ ಪುರಾವೆಗಳು ಇರಬೇಕಾಗುತ್ತದೆ. ಪ್ರಸ್ತುತ ಪ್ರಕರಣದಲ್ಲಿ ಅಂಥ ಯಾವುದೇ ಪುರಾವೆಗಳು ಇಲ್ಲ. ಮೇಲ್ಮನವಿದಾರನ ವಿರುದ್ಧ ಸುಳ್ಳು ಆರೋಪ ಹೊರಿಸಲು ಯಾವುದೇ ಸಾಕ್ಷಿಗಳು ಆತನ ಬಗ್ಗೆ ದ್ವೇಷವನ್ನೂ ಹೊಂದಿಲ್ಲ ಎಂದು ಹೇಳಿದೆ.
ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮೈಕಸ್ ಕ್ಯೂರಿಯಾಗಿ ನೇಮಕಗೊಂಡಿದ್ದ ವಕೀಲ ಸಂಪಂಗಿ ರಾಮಯ್ಯ ಅವರು, ಘಟನೆ ನಡೆದ ಕೂಡಲೇ ದೂರನ್ನು ಸಲ್ಲಿಸಿಲ್ಲ. ಗಾಯಗೊಂಡಿದ್ದ ವ್ಯಕ್ತಿಯ ಮರಣದ ನಂತರ ದೂರು ದಾಖಲಿಸಲಾಗಿದೆ ಮತ್ತು ದೂರು ವಿಳಂಬಕ್ಕೆ ಕಾರಣಗಳನ್ನು ನೀಡಿಲ್ಲವೆಂದು ತಿಳಿಸಿದ್ದಾರೆ. ಆದರೆ, ಆರೋಪಿ ಬೇರೆ ಯಾರೂ ಅಲ್ಲ. ಮೂರನೇ ಪ್ರತ್ಯಕ್ಷದರ್ಶಿಯ ತಂದೆ ಮತ್ತು 7ನೇ ಪ್ರತ್ಯಕ್ಷದರ್ಶಿಯ ಪತಿಯಾಗಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಕುಟುಂಬ ಸದಸ್ಯರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಆದ್ಯತೆ ನೀಡಿರುವುದು ಸಹಜವಾಗಿಯೇ ಇದೆ. ಆದ್ದರಿಂದ, ದೂರು ದಾಕಲಿಸುವುದರಲ್ಲಿ ವಿಳಂಬವಾಗಿದ್ದು, ಈ ವಿಳಂಬ ಆರೋಪಿಯನ್ನು ಖುಲಾಸೆಗೊಳಿಸಲು ಆಧಾರವಲ್ಲ ಎಂದಿರುವ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದೆ.
ಪ್ರಕರಣವೇನು?
ಶಿವಕುಮಾರ್ ಎಂಬಾತ ಮಂಜಪ್ಪನ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ ಮಕ್ಕಳೂ ಸಹ ಇದ್ದರು. ಆದರೆ, ಶಿವಕುಮಾರ್ ಆಗಾಗ್ಗೆ ಹಣಕ್ಕಾಗಿ ಪೀಡಿಸುತ್ತಿದ್ದನೆಂಬ ಕಾರಣಕ್ಕೆ ಮಾವ-ಅಳಿಯನ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. 2017ರ ಅಕ್ಟೋಬರ್ 6ರಂದು ಪತ್ನಿ ಮತ್ತು ಮಕ್ಕಳ ಜತೆ ಟಿ. ಗೋಪಗೊಂಡನಹಳ್ಳಿ ಗ್ರಾಮದ ಮನೆಯಲ್ಲಿ ಮಲಗಿದ್ದ ಶಿವಕುಮಾರ್‌ಗೆ ಮಂಜಪ್ಪ ಮರದ ದಿಮ್ಮಿ ತೆಗೆದುಕೊಂಡು ಹೊಟ್ಟೆಯ ಮೇಲೆ ಬಲವಾಗಿ ಹೊಡೆದಿದ್ದನು. ಅದರಿಂದಾಗಿ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿದ್ದನು.
ಗಾಯಾಳುವನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಬಳಿಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಶಿವಕುಮಾರ್ ಮೃತಪಟ್ಟಿದ್ದರು. ಆನಂತರ ಮೃತನ ಪತ್ನಿ ತಂದೆಯ ವಿರುದ್ಧ ದೂರು ನೀಡಿದ್ದರು. ನ್ಯಾಮತಿ ಪೊಲೀಸರು ತನಿಖೆಗೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ದಾವಣೆಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಂಜಪ್ಪನನ್ನು ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಮಂಜಪ್ಪ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದನು.
Related Articles
Thank you for your comment. It is awaiting moderation.


Comments (0)