ಬೈಕ್ ಟ್ಯಾಕ್ಸಿ ಕುರಿತು ಉನ್ನತ ಮಟ್ಟದಲ್ಲಿ ನಿರ್ಧರಿಸಲಾಗುವುದು ಎಂದ ಸರ್ಕಾರ; ಗಂಭೀರವಾಗಿ ಆಲೋಚಿಸುವಂತೆ ಹೈಕೋರ್ಟ್ ಸಲಹೆ
- by Jagan Ramesh
- August 21, 2025
- 170 Views

ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸರ್ಕಾರದ ಉನ್ನತ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ತಿಳಿಸಿದೆ. ಇದನ್ನು ಪರಿಗಣಿಸಿದ ನ್ಯಾಯಾಲಯ, ಬೈಕ್ ಟ್ಯಾಕ್ಸಿ ಸೇವೆಯನ್ನು ಹಲವರು ಜೀವನೋಪಾಯಕ್ಕಾಗಿ ಅವಲಂಬಿಸಿರುವುದರಿಂದ ಗಂಭೀರವಾಗಿ ಆಲೋಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.
ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ನಿಷೇಧಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಹೊರಡಿಸಿರುವ ಆದೇಶ ಪ್ರಶ್ನಿಸಿ ಅಗ್ರಿಗೇಟರ್ ಸಂಸ್ಥೆಗಳಾದ ಓಲಾ, ಉಬರ್ ಹಾಗೂ ರ‌್ಯಾಪಿಡೋ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ, ಬೈಕ್ ಟ್ಯಾಕ್ಸಿ ಸಾರಿಗೆ ವಿಧಾನವನ್ನು ನಿಯಂತ್ರಿಸುವ ಬದಲು ಸಂಪೂರ್ಣ ನಿಷೇಧಿಸುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ನ್ಯಾಯಪೀಠ, ಇ-ಬೈಕ್ ಸೇವೆಗೂ ಅನುಮತಿ ನೀಡಲಾಗಿಲ್ಲ. ಶಾಸನಬದ್ಧವಾದ ವ್ಯವಹಾರಕ್ಕೆ ನಿಷೇಧ ಹೇರಲಾಗಿದೆ. ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿಸಿದಾಗ, ಅದನ್ನು ನಿಯಂತ್ರಿಸಬಹುದು. ನಿಯಂತ್ರಣವು ಸಂಪೂರ್ಣ ನಿಷೇಧವನ್ನು ಒಳಗೊಳ್ಳುತ್ತದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ. ನಿಯಂತ್ರಣ ಹೇರದ ಹೊರತು ಪ್ರತಿ ವ್ಯವಹಾರಕ್ಕೂ ಅವಕಾಶವಿದೆ. ಬೈಕ್ ಟ್ಯಾಕ್ಸಿ ಸೇವೆಯು ವಾಣಿಜ್ಯ ವಹಿವಾಟು ವ್ಯಾಪ್ತಿಯ ಹೊರಗಿಲ್ಲ ಎಂದು ಮೌಖಿಕವಾಗಿ ಹೇಳಿತು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, ಸುರಕ್ಷತಾ ದೃಷ್ಟಿಯಿಂದ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಲಾಗಿದೆ. ಇದು ಕಾನೂನುಬದ್ಧ ಉದ್ಯಮವಾಗಿರಬಹುದು. ಆದರೆ, ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸದ ಹೊರತು ವ್ಯವಹಾರ ನಡೆಸಲು ಅವರಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.
ಕಾನೂನುಬದ್ಧ ಉದ್ಯಮ ನಡೆಸುವ ಹಕ್ಕಿದೆ:
ಆಗ ನ್ಯಾಯಪೀಠ, ಸಂವಿಧಾನದ ಪರಿಚ್ಛೇದ 19(1)(ಜಿ) ಅಡಿಯಲ್ಲಿ ಸಮಂಜಸವಾದ ನಿರ್ಬಂಧದ ಅಡಿಯಲ್ಲಿ ಕಾನೂನುಬದ್ಧ ಉದ್ಯಮ ನಡೆಸುವ ಹಕ್ಕಿದೆ. ಇಲ್ಲಿ ಅಂಥ ಯಾವುದೇ ನಿರ್ಬಂಧಗಳಿಲ್ಲ. ಸದ್ಯ ಬೈಕ್ ಟ್ಯಾಕ್ಸಿಗಳ ಮೇಲೆ ವಸ್ತುತಃ ನಿಷೇಧವಿದೆ. ಇದನ್ನು ಪ್ರಶ್ನಿಸಿ ಮೇಲ್ಮನವಿದಾರರು ನ್ಯಾಯಾಲಯದ ಮುಂದೆ ಬಂದಿದ್ದಾರೆ. ಬೈಕ್ ಟ್ಯಾಕ್ಸಿಗಳ ಸೇವೆಯನ್ನು ನಿಯಂತ್ರಿಸದಿದ್ದರೆ ಹಾಗೂ ನಿಯಂತ್ರಿಸಲು ನೀತಿ ಹೊಂದಿಲ್ಲದಿದ್ದರೆ ಸಂವಿಧಾನದ ಅಡಿಯಲ್ಲಿ ಆ ಉದ್ಯಮ ಮುಂದುವರಿಸುವ ಹಕ್ಕಿದೆ ಎನ್ನುವುದು ಅವರ ವಾದವಾಗಿದೆ. ನಿಯಂತ್ರಣದ ಅನುಪಸ್ಥಿತಿಯಲ್ಲಿ ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ. ಬದಲಿಗೆ ಸಂಪೂರ್ಣವಾಗಿ ಅನುಮತಿಸಲಾಗಿದೆ ಎಂದರ್ಥ. ನಿಮ್ಮ ಬಳಿ ನೀತಿ ಇಲ್ಲದಿದ್ದರೆ, ನಿಷೇಧಿಸುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ನೀವು ಹೊಂದಿದ್ದೀರಿ ಎಂದಾಗುತ್ತದೆ ಎಂದು ನ್ಯಾಯಪೀಠ ಹೇಳಿತು.
ಈ ವೇಳೆ ಅಡ್ವೊಕೇಟ್ ಜನರಲ್, ಸಂಚಾರ ದಟ್ಟಣೆ ಸಮಸ್ಯೆಗಳ ಬಗ್ಗೆ ವಿಶೇಷವಾಗಿ ಬೆಂಗಳೂರಿನ ಸಮಸ್ಯೆಗಳನ್ನು ಉಲ್ಲೇಖಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬೈಕ್‌ಗಳು ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ ಎಂದು ತೋರಿಸಲು ನಿಮ್ಮ ಬಳಿ ಆಧಾರವಿದೆಯೇ? ಹಾಗಾದರೆ, ಆಟೋ ರಿಕ್ಷಾಗಳು ಕಡಿಮೆ ದಟ್ಟಣೆಗೆ ಕಾರಣವಾಗುತ್ತದೆ ಎಂದು ನೀವು ಭಾವಿಸುತ್ತೀರಾ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.
ಆಗ ಶಶಿಕಿರಣ್ ಶೆಟ್ಟಿ ಅವರು, ರಾಜ್ಯದಲ್ಲಿ ಸುಮಾರು 6 ಲಕ್ಷ ಬೈಕ್ ಟ್ಯಾಕ್ಸಿಗಳಿವೆ. ಅಂತಿಮವಾಗಿ, ಬೈಕ್ ಟ್ಯಾಕ್ಸಿಗಳನ್ನು ಸಾರಿಗೆ ವಾಹನಗಳಾಗಿ ಕಾರ್ಯಾಚರಣೆ ನಡೆಸಲು ಅನುಮತಿಸುವುದು ಸರಿಯೇ ಎಂಬುದು ಪ್ರಶ್ನೆಯಾಗಿದೆ ಎಂದರು.
ಉನ್ನತ ಮಟ್ಟದಲ್ಲಿ ಪರಿಶೀಲಿಸಬಹುದೇ?
ಈ ಹಂತದಲ್ಲಿ ನ್ಯಾಯಪೀಠ, ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ನೀತಿ ಮಟ್ಟದಲ್ಲಿ ಪರಿಶೀಲಿಸಬಹುದೇ ಎಂದು ಕೇಳಿತಲ್ಲದೆ, ಪ್ರಕರಣವನ್ನು ಒಂದು ತಿಂಗಳು ಮುಂದೂಡಲಾಗುತ್ತದೆ. ನೀತಿಯು ನ್ಯಾಯಾಲಯಕ್ಕೆ ತೃಪ್ತಿದಾಯಕವಿರಬೇಕೆಂದಿಲ್ಲ. ಆ ನೀತಿಯು ಸ್ವೇಚ್ಛೆಯಿಂದ ಕೂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ನ್ಯಾಯಾಲಯ ಪರಿಶೀಲಿಸಲಿದೆ. ನೀತಿಯ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನುಡಿಯಿತು.
ಇದಕ್ಕೆ ಸಮ್ಮತಿಸಿದ ಅಡ್ವೊಕೇಟ್ ಜನರಲ್, ಈ ವಿಷಯದ ಬಗ್ಗೆ ಒಂದು ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಅದಾಗ್ಯೂ, ಬೈಕ್ ಟ್ಯಾಕ್ಸಿಗಳಿಗೆ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ರಾಜ್ಯ ಸರ್ಕಾರ ಸದ್ಯ ಪರಿಗಣಿಸಿಲ್ಲ. ಆದರೆ, ಆ ಸಂಬಂಧ ನೀತಿ ರೂಪಿಸಬೇಕೇ ಅಥವಾ ಬೇಡವೇ, ಒಂದು ವೇಳೆ ಹೌದು ಎಂದಾದರೆ, ಯಾವ ನೀತಿ ಎಂಬ ಕುರಿತಷ್ಟೇ ನಿರ್ಧರಿಸಲಿದೆ ಎಂದು ಎಜಿ ಸ್ಪಷ್ಟಪಡಿಸಿದರು.
ಪ್ರಸ್ತುತ ವಿಷಯದಲ್ಲಿ ಎತ್ತಲಾದ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಸಲಾಗುವುದು ಎಂಬ ಸರ್ಕಾರದ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿತು. ಕೊನೆಯಲ್ಲಿ ನ್ಯಾಯಪೀಠ, ಈ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು. ಏಕೆಂದರೆ, ಇಲ್ಲಿ ಹಲವರ ಜೀವನೋಪಾಯವಿದೆ ಎಂದು ಮೌಖಿಕವಾಗಿ ನುಡಿಯಿತು.
Related Articles
Thank you for your comment. It is awaiting moderation.
Comments (0)