ಮೃತ ಸರ್ಕಾರಿ ನೌಕರರ ಸೊಸೆ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲಾಗದು – ಹೈಕೋರ್ಟ್

ಬೆಂಗಳೂರು/ಧಾರವಾಡ: ಸರ್ಕಾರಿ ನೌಕರರು ನಿಧನರಾದ ಸಂದರ್ಭದಲ್ಲಿ ಮೃತರ ಸೊಸೆಗೆ ಅನುಕಂಪದ ಆಧಾರದ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.

ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಉದ್ಯೋಗ ಮಾಡುತ್ತಿದ್ದ ಅತ್ತೆ (ಪತಿಯ ತಾಯಿ) ಮೃತಪಟ್ಟ ಹಿನ್ನೆಲೆಯಲ್ಲಿ ತಮಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಪ್ರಿಯಾಂಕ ಹಲಮನಿ (ಮೃತರ ಸೊಸೆ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಧಾರವಾಡದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಹಾಗೂ ನ್ಯಾಯಮೂರ್ತಿ ವಿಜಯ್ ಕುಮಾರ್ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ, ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ನೇಮಕಾತಿ) ಅಧಿನಿಯಮ-2021ರ ನಿಯಮ 2(ಬಿ)(2) ಅನ್ವಯ ‘ಕುಟುಂಬ’ದ ವ್ಯಾಖ್ಯಾನದ ವ್ಯಾಪ್ತಿಗೆ ಉದ್ಯೋಗಿಯ ನಿರ್ದಿಷ್ಟ ಸಂಬಂಧಿಗಳನ್ನು ಸೇರ್ಪಡೆ ಮಾಡಲಾಗಿದೆ. ಆದರೆ, ಆ ಸಂಬಂಧಿಗಳಲ್ಲಿ ಸೊಸೆಯ ಉಲ್ಲೇಖವಿಲ್ಲ. ಆ ಶಾಸನದ ಅರ್ಥವನ್ನು ವಿಸ್ತರಣೆ ಮಾಡುವುದು ನ್ಯಾಯಾಂಗದ ಕಾರ್ಯವಲ್ಲ. ಆದ್ದರಿಂದ, ಅನುಕಂಪದ ಆಧಾರದ ಮೇಲೆ ಮೃತ ನೌಕರರ ಸೊಸೆಗೆ ಉದ್ಯೋಗ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.

ಪ್ರಕರಣವೇನು?
ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಗೌರಮ್ಮ ಆರ್‌. ಹಲಮನಿ ಅವರು ರಿಜಿಸ್ಟ್ರಾರ್‌ ಆಗಿ ಉದ್ಯೋಗ ಮಾಡುತ್ತಿದ್ದರು. ಕರೊನಾ ಸೋಂಕಿಗೆ ತುತ್ತಾಗಿದ್ದ ಅವರು 2021ರ ಮೇ 2ರಂದು ಮೃತಪಟ್ಟಿದ್ದರು. ಅವರಿಗೆ ವಿಜಯಕುಮಾರ್‌, ಪ್ರವೀಣ್ ಮತ್ತು ಶಿಲ್ಪಾರಾಣಿ ಎಂಬ ಮಕ್ಕಳಿದ್ದರು. ಪ್ರವೀಣ್‌ ಅವರನ್ನು ಪ್ರಿಯಾಂಕ ಮದುವೆಯಾಗಿದ್ದರು. ಆದರೆ, ಪ್ರವೀಣ್‌ ಸಹ 2021ರ ಮೇ 2ರಂದೇ ಕರೊನಾ ಸೋಂಕಿನಿಂದ ಮೃತಪಟ್ಟಿದ್ದರು.

ಮೃತರ ಕಾನೂನುಬದ್ಧ ವಾರಸುದಾರರು ಸಿವಿಲ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಸಂಬಂಧ ಮೃತರ ಕಾನೂನುಬದ್ಧ ವಾರಸುದಾರರ ಮಧ್ಯೆ ಒಪ್ಪಂದ ಏರ್ಪಟ್ಟಿತ್ತು. ಗೌರಮ್ಮ ಅವರ ಸಾವಿನ ಹಿನ್ನೆಲೆಯಲ್ಲಿ ಅವರ ಸೊಸೆ ಪ್ರಿಯಾಂಕ ಅನುಕಂಪದ ಉದ್ಯೋಗ ಹಕ್ಕು ಸಾಧಿಸಬಹುದು ಎನ್ನುವುದು ಆ ಒಪ್ಪಂದವಾಗಿತ್ತು.

ಅದರಂತೆ ಪ್ರಿಯಾಂಕ ಅನುಕಂಪದ ಆಧಾರದಲ್ಲಿ ಉದ್ಯೋಗ ಕೋರಿ ಸರ್ಕಾರಕ್ಕೆ 2021ರ ಜೂನ್ 22ರಂದು ಅರ್ಜಿ ಸಲ್ಲಿಸಿದ್ದರು. ಅದನ್ನು 2023ರ ಆಗಸ್ಟ್ 10ರಂದು ಸರ್ಕಾರ ತಿರಸ್ಕರಿಸಿತ್ತು. ಸರ್ಕಾರದ ಕ್ರಮ ಪ್ರಶ್ನಿಸಿ ಪ್ರಿಯಾಂಕ ಸಲ್ಲಿಸಿದ್ದ ಅರ್ಜಿಯನ್ನು 2024ರ ಜನವರಿ 4ರಂದು ಕೆಎಟಿ ವಜಾಗೊಳಿಸಿತ್ತು.

ಇದರಿಂದ, ಹೈಕೋರ್ಟ್‌ ಮೆಟ್ಟಿಲೇರಿದ್ದ ಪ್ರಿಯಾಂಕ, ಕರ್ನಾಟಕ ನಾಗರಿಕ ಸೇವೆಗಳ (ಅನುಕಂಪದ ಆಧಾರದ ಮೇಲೆ ಉದ್ಯೋಗ) ನಿಯಮ-2021ರ ನಿಯಮ 2(ಬಿ)(2)ರಲ್ಲಿ ಕುಟುಂಬದ ವ್ಯಾಖ್ಯಾನದಲ್ಲಿ ಸೊಸೆಯನ್ನು ಸೇರಿಸಬೇಕು. ಜತೆಗೆ, ತಮಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.

Related Articles

Comments (0)

Leave a Comment