ಹಣ ವಸೂಲಿ ಪ್ರಕರಣದ ಆರೋಪಿ ಶ್ರೀನಾಥ್ ಜೋಶಿ ಮೊಬೈಲ್ ದತ್ತಾಂಶ ಅಳಿಸಿ ಹಾಕಲಾಗಿದೆ; ಹೈಕೋರ್ಟ್‌ಗೆ ಲೋಕಾಯುಕ್ತ ಎಸ್‌ಪಿಪಿ ಮಾಹಿತಿ
- by Jagan Ramesh
- August 29, 2025
- 13 Views

ಬೆಂಗಳೂರು: ಲೋಕಾಯುಕ್ತ ದಾಳಿ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಶಿ ಅವರು ಎರಡು ಮೊಬೈಲ್‌ಗಳನ್ನು ಹಾನಿಗೊಳಿಸಿ ತನಿಖಾಧಿಕಾರಿಗೆ ನೀಡಿದ್ದು, ಅವುಗಳಲ್ಲಿದ್ದ ದತ್ತಾಂಶವನ್ನು ಅಳಿಸಿ ಹಾಕಲಾಗಿದೆ ಎಂದು ಲೋಕಾಯುಕ್ತ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಲೋಕಾಯುಕ್ತದ ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಶಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಲೋಕಾಯುಕ್ತ ಪರ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ್ ಅರಬಟ್ಟಿ ವಾದ ಮಂಡಿಸಿ, ಗಂಭೀರ ಆಪಾದನೆಗಳು ಇರುವುದರಿಂದ ಪ್ರಕರಣದಲ್ಲಿ ಶ್ರೀನಾಥ್ ಜೋಶಿ ಅವರನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ. ತನಿಖೆಯ ವೇಳೆ ಹಾನಿಗೊಳಿಸಿರುವ ಎರಡು ಮೊಬೈಲ್‌ಗಳನ್ನು ಜೋಶಿ ನೀಡಿದ್ದಾರೆ. ಆದರೆ, ಮೊಬೈಲ್ ದತ್ತಾಂಶಗಳನ್ನು ಅಳಿಸಿ ಹಾಕಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಸೇವೆಯಿಂದ ವಜಾಗೊಂಡಿರುವ ಮೊದಲ ಆರೋಪಿ ನಿಂಗಪ್ಪ ಸಾವಂತ್ ಜತೆ ಭೌತಿಕವಾಗಿ ಮತ್ತು ಮೊಬೈಲ್‌ನಲ್ಲಿ ಶ್ರೀಕಾಂತ್ ಜೋಶಿ ಸಂಪರ್ಕದಲ್ಲಿದ್ದರು. ಇದಕ್ಕೆ ಪೂರಕವಾಗಿ ಆಡಿಯೊ ಮತ್ತು ಫೋಟೊಗಳು ಲಭ್ಯವಾಗಿವೆ. ಆರೋಪಗಳು ಗಂಭೀರವಾಗಿದ್ದು, ತನಿಖೆ ನಡೆಯುತ್ತಿದೆ. ಇದೇ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿಲ್ಲ. ಇಲ್ಲಿ ಅರ್ಜಿದಾರರಿಗೆ ಯಾವುದೇ ಬಂಧನದ ಆತಂಕವಿಲ್ಲ ಎಂದರು.
ಶ್ರೀನಾಥ್ ಜೋಶಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ, ತನಿಖೆಗೆ ಹಾಜರಾಗಿದ್ದ ಜೋಶಿ ಅವರು ಎರಡು ಮೊಬೈಲ್‌ಗಳನ್ನು ತನಿಖಾಧಿಕಾರಿಗೆ ನೀಡಿದ್ದು, ಅವುಗಳನ್ನು ವಿಧಿ ವಿಜ್ಞಾನ ವಿಶ್ಲೇಷಣೆಗೆ ಕಳುಹಿಸಿಕೊಡಲಾಗಿದೆ. ವಿಚಾರಣಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬಳಿಕ ಜೋಶಿ ಅವರನ್ನು ಪ್ರಕರಣದಲ್ಲಿ ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ ಎಂದರು.
ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ನಿಂಗಪ್ಪ ಸಾವಂತ್‌ಗೆ ಜೋಶಿ ನಿರ್ದೇಶನ ನೀಡಿದ್ದಾರೆ ಎಂಬುದಕ್ಕೆ ಪೂರಕವಾಗಿ ದಾಖಲೆ ನೀಡಬೇಕು. ಅದನ್ನು ಲೋಕಾಯುಕ್ತ ಪೊಲೀಸರು ನೀಡಿಲ್ಲ. ವಿಚಾರಣಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬಳಿಕ ಜೋಶಿ ಅವರ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಶೋಧ ನಡೆಸಿ ಕೇವಲ 32 ಸಾವಿರ ರೂಪಾಯಿ ಜಪ್ತಿ ಮಾಡಿದ್ದಾರೆ. ಜಪ್ತಿಯ ಸಂದರ್ಭದಲ್ಲೂ ಏನೂ ದೊರೆತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಸಮಯಾವಕಾಶದ ಕೊರತೆ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತಲ್ಲದೆ, ಅರ್ಜಿದಾರರನ್ನು ಬಂಧಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.
Related Articles
Thank you for your comment. It is awaiting moderation.
Comments (0)