ಮಾಧ್ಯಮಗಳಿಂದ ಕೋರ್ಟ್ ಆದೇಶ ಉಲ್ಲಂಘನೆ; ಕ್ರಮ ಜರುಗಿಸಲು ನಿರ್ದೇಶನ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್
- by Prashanth Basavapatna
- April 2, 2026
- 4 Views
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯ ಹೊರಡಿಸಿರುವ ನಿರ್ಬಂಧಕಾದೇಶ ಉಲ್ಲಂಘಿಸುತ್ತಿರುವ ಮಾಧ್ಯಮಗಳ (ಚಾನಲ್) ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದರ್ಶನ್ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ಮನವಿಯ ಬಗ್ಗೆ ನಿಲುವು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ಪ್ರತಿಕ್ರಿಯಿಸಿ, ಅರ್ಜಿಯಲ್ಲಿ ಕೋರಲಾದ ಮನವಿ ಕುರಿತು ಯಾವ ಕ್ರಮ ಕೈಗೊಳಲಾಗುವುದು ಎಂಬ ಬಗ್ಗೆ ಸೋಮವಾರದೊಳಗೆ ತಿಳಿಸಲಾಗುವುದು ಎಂದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿತು.
ದರ್ಶನ್ ಅರ್ಜಿಯಲ್ಲೇನಿದೆ?
ಸುದ್ದಿವಾಹಿನಿಗಳು ಗ್ರಾಫಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅನಿಮೇಷನ್‌ಗಳನ್ನು ಬಳಸಿಕೊಂಡು ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ಅಪರಾಧದ ದೃಶ್ಯವನ್ನು ಮರುಸೃಷ್ಟಿಸುತ್ತಿವೆ. ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ದಾಖಲಿಸಿದ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಚರ್ಚೆಗಳನ್ನು ನಡೆಸುತ್ತಿವೆ. ಇದು 2024ರಲ್ಲಿ ಕರ್ನಾಟಕ ಹೈಕೋರ್ಟ್ ಮತ್ತು ಸಿಟಿ ಸಿವಿಲ್ ನ್ಯಾಯಾಲಯ ಹೊರಡಿಸಿರುವ ಪ್ರತಿಬಂಧಕಾದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಸುದ್ದಿವಾಹಿನಿಗಳು ಉದ್ದೇಶಪೂರ್ವಕವಾಗಿ ವಿಚಾರಣೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಸಾರ ಮಾಡುತ್ತಿವೆ. ಇದು ಸಂವಿಧಾನದ ಪರಿಚ್ಛೇದ 14 ಹಾಗೂ 21ರ ಅಡಿಯಲ್ಲಿ ಖಾತ್ರಿಪಡಿಸಲಾದ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ, ಈ ಸಂಬಂಧ 2026ರ ಜನವರಿ 16ರಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೀಡಿದ ದೂರು ಪರಿಗಣಿಸಬೇಕು ಹಾಗೂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸುತ್ತಿರುವ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ನಟ ದರ್ಶನ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.



Comments (0)