ಮೆಟ್ರೋ ಮಾರ್ಗದ ನಿಲ್ದಾಣಗಳನ್ನು ಕೋರ್ಟ್ ನಿರ್ಧರಿಸಲು ಸಾಧ್ಯವಿಲ್ಲ; ಚಿಕ್ಕಜಾಲದಲ್ಲಿ ಮೆಟ್ರೋ ರೈಲು ನಿಲ್ದಾಣಕ್ಕೆ ಕೋರಿದ್ದ ಪಿಐಎಲ್ ವಜಾ
- by Ramya B T
- September 1, 2025
- 44 Views

ಬೆಂಗಳೂರು: ನಗರದ ಕೃಷ್ಣರಾಜ ಪುರ (ಕೆ.ಆರ್.ಪುರ) ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಪರ್ಕ ಕಲ್ಪಿಸುವ ಮೆಟ್ರೊ 2 ಬಿ ಹಂತದ ನೀಲಿ ಮಾರ್ಗದ ಚಿಕ್ಕಜಾಲದಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್‌ಗೆ (ಬಿಎಂಆರ್‌ಸಿಎಲ್) ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಚಿಕ್ಕಜಾಲದಲ್ಲಿ ಮೆಟ್ರೊ ನಿಲ್ದಾಣ ಪ್ರಸ್ತಾವನೆ ಕೈಬಿಟ್ಟಿದ್ದ ಕ್ರಮ ಪ್ರಶ್ನಿಸಿ ಸಿ.ಆರ್. ನವೀನ್ ಕುಮಾರ್ ಸೇರಿ 7 ಮಂದಿ ಸ್ಥಳಿಯ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಮೆಟ್ರೊ ಮಾರ್ಗದ ನಿರ್ದಿಷ್ಟ ಸ್ಥಳದಲ್ಲಿ ನಿಲ್ದಾಣವನ್ನು ನಿರ್ಮಿಸುವ ಅಗತ್ಯವಿದೆಯೇ ಎಂಬ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರ ನಿರ್ಧರಿಸಬೇಕೇ ಹೊರತು, ನ್ಯಾಯಾಲಯ ಅದನ್ನು ಪರಿಶೀಲಿಸಲಾಗದು ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.
ಮೆಟ್ರೊ ಮಾರ್ಗ ನಕ್ಷೆಯ ನಿರ್ವಹಣೆ ಹಾಗೂ ಮೆಟ್ರೊ ಮಾರ್ಗದಲ್ಲಿನ ನಿಲ್ದಾಣಗಳು ಸಂಬಂಧಪಟ್ಟ ಅಧಿಕಾರಿಗಳು ಪರಿಗಣಿಸಬೇಕಾದ ವಿಷಯವಾಗಿದೆ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಗರ ಕೇಂದ್ರಕ್ಕೆ ಸಂಪರ್ಕಿಸುವ ಮೆಟ್ರೊ ಮಾರ್ಗದಲ್ಲಿನ ನಿಲ್ದಾಣಗಳ ಸಂಖ್ಯೆಯೂ ಸಹ ಸಂಬಂಧಪಟ್ಟ ಪ್ರಾಧಿಕಾರದಿಂದ ನಿರ್ಧರಿಸಲ್ಪಡಬೇಕಾದ ವಿಷಯವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಇದೇ ವೇಳೆ, ನಿಲ್ದಾಣ ನಿರ್ಮಾಣ ಪ್ರಸ್ತಾವ ಕೈಬಿಟ್ಟಿರುವ ಸಂಬಂಧ ಮಾಹಿತಿ ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಬಿಎಂಆರ್ಸಿಎಲ್ಗೆ ನ್ಯಾಯಪೀಠ ನಿರ್ದೇಶಿಸಿದೆ.
Related Articles
Thank you for your comment. It is awaiting moderation.
Comments (0)