ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ; ಆರೋಪ ನಿಗದಿಗೆ ಖುದ್ದು ಹಾಜರಾಗಲು ಹೈಕೋರ್ಟ್ ಆದೇಶ

ಬೆಂಗಳೂರು: ಉನ್ನತ ಶಿಕ್ಷಣ ಪಡೆಯಲು ಬಯಸಿದ್ದ ಸರ್ಕಾರಿ ಆಸ್ಪತ್ರೆಗಳ ಸೇವಾನಿರತ ವೈದ್ಯರನ್ನು ಸೇವೆಯಿಂದ ಬಿಡುಗಡೆಗೊಳಿಸಲು ನ್ಯಾಯಾಲಯ ನೀಡಿದ್ದ ಆದೇಶ ಪಾಲನೆ ಮಾಡದ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ನ್ಯಾಯಾಂಗ ನಿಂದನೆಯಡಿ ಆರೋಪ ನಿಗದಿಪಡಿಸಲು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು ಶುಕ್ರವಾರ ಖುದ್ದು ಹಾಜರಾಗಬೇಕೆಂದು ಆದೇಶಿಸಿದೆ.

ಉನ್ನತ ಶಿಕ್ಷಣ ಪಡೆಯಲು ತಮ್ಮನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಏಕಸದಸ್ಯ ನ್ಯಾಯಪೀಠ 2025ರ ಜೂನ್ 24ರಂದು ಹೊರಡಿಸಿದ್ದ ಆದೇಶವನ್ನು ಆರೋಗ್ಯ ಇಲಾಖೆ ಪಾಲಿಸಿಲ್ಲ ಎಂದು ಆರೋಪಿಸಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಡಿಎಂಒ (General Duty Medical Officer) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಎಂ. ಶಿವರಾಜ ಸೇರಿ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿರುವ 22 ವೈದ್ಯರು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿದಾರರನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಏಕಸದಸ್ಯ ನ್ಯಾಯಪೀಠ ಆದೇಶ ನೀಡಿ 2 ತಿಂಗಳು ಕಳೆಯುತ್ತಿದೆ. ಆದರೂ ಸಂಬಂಧಪಟ್ಟ ಇಲಾಖೆ ಹೈಕೋರ್ಟ್ ಆದೇಶ ಪಾಲಿಸಿಲ್ಲ. ಇದು ನ್ಯಾಯಾಲಯದ ಆದೇಶವೆಂದು ಗೊತ್ತಿಲ್ಲವೇ ಎಂದು ಸರ್ಕಾರದ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.

ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾದರೆ ಕೋರ್ಟ್ ಆದೇಶಕ್ಕೆ ತಡೆ ಸಿಕ್ಕಂತೆ ಎಂದು ಸರ್ಕಾರ ಭಾವಿಸಿದಂತಿದೆ.‌ ಒಂದು ತಿಂಗಳಲ್ಲಿ 300ಕ್ಕೂ ಅಧಿಕ ವಿವಿಧ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ನ್ಯಾಯಾಲಯ ಗಮನಿಸಿದೆ. ಸರ್ಕಾರದ ಈ ಧೋರಣೆಗೆ ಅಂತ್ಯ ಹಾಡಬೇಕಿದೆ. ಆದ್ದರಿಂದ, ಕೋರ್ಟ್ ಆದೇಶ ಪಾಲಿಸದೆ ಉದ್ದೇಶಪೂರ್ವಕ ಅಸಹಕಾರ ತೋರಿದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ, ಆಯುಕ್ತ ಕೆ.ಬಿ. ಶಿವಕುಮಾರ್ ಅವರು ಶುಕ್ರವಾರ ಮಧ್ಯಾಹ್ನ 2.30ಕ್ಕೆ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಅವರ ವಿರುದ್ಧ ನ್ಯಾಯಾಂಗ ನಿಂದನೆಯಡಿ ಆರೋಪ ನಿಗದಿಪಡಿಸಲಾಗುವುದು ಎಂದ ಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

Related Articles

Comments (0)

Leave a Comment