ಉಡುಪಿ ಪರ್ಯಾಯ ಉತ್ಸವದಲ್ಲಿ ಮುಸ್ಲಿಮರ ಪಾಲ್ಗೊಳ್ಳುವಿಕೆ ಕುರಿತು ಆಕ್ಷೇಪಾರ್ಹ ಹೇಳಿಕೆ; ಪ್ರಕರಣ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ
- by Jagan Ramesh
- January 6, 2026
- 411 Views
ಬೆಂಗಳೂರು: ಈ ಬಾರಿಯ ಉಡುಪಿ ಪರ್ಯಾಯ ಉತ್ಸವದಲ್ಲಿ ಮುಸ್ಲಿಮರು ಭಾಗಿಯಾಗುವ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಹಾಗೂ ಕೋಮು ದ್ವೇಷ ಹರಡುವ ಹೇಳಿಕೆ ಪ್ರಕಟಿಸಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ನಿಟ್ಟೆ ನಿವಾಸಿಯಾಗಿರುವ ವಕೀಲ ಸುದೀಪ್ ಶೆಟ್ಟಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜನವರಿ 3ರಂದು ದಾಖಲಿಸಲಾಗಿರುವ ಎಫ್ಐಆರ್ ಮತ್ತರದ ಸಂಬಂಧ ಕಾರ್ಕಳದ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮುಂದೆ ಬಾಕಿ ಇರುವ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಸುದೀಪ್ ಶೆಟ್ಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಯನ್ನು ಪ್ರತಿವಾದಿಯನ್ನಾಗಿಸಲಾಗಿದ್ದು, ಅರ್ಜಿ ಇನ್ನಷ್ಟೇ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
ಪ್ರಕರಣವೇನು?
ಈ ಬಾರಿಯ ಉಡುಪಿ ಪರ್ಯಾಯ ಉತ್ಸವದ ಹೊರೆ ಕಾಣಿಕೆಯಲ್ಲಿ ಭಾಗಿಯಾಗುವುದಾಗಿ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಹೇಳಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದ (ಫೇಸ್‌ಬುಕ್) ‘ಸುದೀಪ್ ಶೆಟ್ಟಿ ನಿಟ್ಟೆ’ ಎಂಬ ಖಾತೆಯಲ್ಲಿ “ಹಿಂದು-ಮುಸ್ಲಿಮರು ಸೌಹಾರ್ದತೆಯಿಂದ ಬಾಳಬೇಕಾದರೆ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿಯವರು ಹಿಂದುಗಳಿಗೆ ಪಾನೀಯ (ಶರಬತ್) ಅಥವಾ ನೀರಿನ ಬಾಟಲ್‌ಗಳನ್ನು ಹಂಚುವ ಬದಲು ಲವ್ ಜಿಹಾದ್, ಗೋಹತ್ಯೆ, ಭಯೋತ್ಪಾದನೆ, ಹಿಂದು ಧಾರ್ಮಿಕ ಕೇಂದ್ರಗಳು ಮತ್ತು ಹಿಂದುಗಳ ಮೆರವಣಿಗೆ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬೇಕು” ಎಂದು ಬರೆಯಲಾಗಿತ್ತು. ಇದು ಜಾತಿ-ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕಲು ಕಾರಣವಾಗಿದೆ ಎಂದು ಕಾರ್ಕಳ ಗ್ರಾಮೀಣ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಈ ಪ್ರಕರಣ ರದ್ದು ಕೋರಿ ವಕೀಲ ಸುದೀಪ್ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related Articles
Thank you for your comment. It is awaiting moderation.


Comments (0)