ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮೈಸೂರು ನಗರಾಭಿವದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳ ಬದಲಿ ಹಂಚಿಕೆ ಪ್ರಕರಣದಲ್ಲಿ ಅಧಿಕಾರ ದುರ್ಬಳಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಸೋಮವಾರ ಬೆಳಗ್ಗೆ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಪೀಠದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಹಾಜರಾಗಿ, ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮುನ್ನ ರಾಜ್ಯಪಾಲರು ಕಾನೂನು ಪ್ರಕ್ರಿಯೆ ಪಾಲಿಸಿಲ್ಲ. ಸಚಿವ ಸಂಪುಟದ ಶಿಫಾರಸಿಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ. ಸಂವಿಧಾನದ ಪರಿಚ್ಛೇದ 163ರ ಪ್ರಕಾರ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು. ಅನುಮತಿಗೆ ಮುನ್ನ ದಾಖಲೆಗಳನ್ನು ಪರಿಶೀಲಿಸಿಲ್ಲ. ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಲಾಗಿದ್ದು, ಪ್ರಕರಣವನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸುವಂತೆ ಮನವಿ ಮಾಡಿದರು.

ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರು, ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟು ವಿಚಾರಣೆ ನಡೆಸಲಾಗುವುದು ಎಂದರು. ಆಗ ಪ್ರೊ. ರವಿವರ್ಮ ಕುಮಾರ್ ಅವರು, ಮುಖ್ಯ ನ್ಯಾಯಮೂರ್ತಿಗಳಿಗೂ ಮನವಿ ಮಾಡಲಾಗಿದೆ. ಜತೆಗೆ, ರಿಟ್ ಅರ್ಜಿಯನ್ನು ರಾಜ್ಯಪಾಲರ ಕಚೇರಿ ಪ್ರತಿನಿಧಿಸುವ ವಕೀಲರಿಗೂ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು. ಅದನ್ನು ಪರಿಗಣಿಸಿದ ಪೀಠ, ಸಿಜೆ ಸೂಚಿಸಿದರೆ ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

ನ್ಯಾ. ನಾಗಪ್ರಸನ್ನ ಪೀಠದಲ್ಲೂ ಮೆಮೋ ಸಲ್ಲಿಕೆ:
ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಸಂಬಂಧ ನ್ಯಾ.ಎಂ ನಾಗಪ್ರಸನ್ನ ಅವರ ಪೀಠದಲ್ಲಿಯೂ ಸಿಎಂ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಮೆಮೋ ಸಲ್ಲಿಸಿದ್ದಾರೆ. ಅರ್ಜಿ ಯಾವ ಪೀಠದ ಮುಂದೆ ವಿಚಾರಣೆಗೆ ಬರಬೇಕೆಂದು ಮುಖ್ಯ ನ್ಯಾಯಮೂರ್ತಿಗಳು ನಿರ್ಧರಿಸುತ್ತಾರೆ. ಒಂದು ವೇಳೆ ಈ ಪೀಠದಲ್ಲಿ ವಿಚಾರಣೆಗೆ ನಿಗದಿಪಡಿಸಿದರೆ ಇಂದೇ ಅರ್ಜಿ ವಿಚಾರಣೆ ನಡೆಸಬೇಕೆಂದು ಮನವಿ ಮಾಡಲಾಗಿದೆ. ಮೆಮೋ ಪರಿಶೀಲಿಸಿದ ನ್ಯಾಯಮೂರ್ತಿಗಳು ಸಿಜೆ ಸೂಚಿಸಿದರೆ ವಿಚಾರಣೆ ನಡೆಸುವುದಾಗಿ ತಿಳಿಸಿದರು.

ಅರ್ಜಿಯಲ್ಲೇ‌ನಿದೆ?
ಮುಡಾ ಹಗರಣದ ಸಂಬಂಧ ಜುಲೈ 26ರಂದು ಟಿ.ಜೆ. ಅಬ್ರಾಹಂ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಭ್ರಷ್ಟಾಚಾರ ನಿಗ್ರಹ (ಪಿಸಿ) ಕಾಯ್ದೆ- 1988ರ ಸೆಕ್ಷನ್ 17ಎ, 19 ಹಾಗೂ ಭಾರತೀಯ ನ್ಯಾಯ‌ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 218ರ ಅಡಿಯಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಕೋರಿದ್ದಾರೆ.‌ ಅದೇ ದಿನ ರಾಜ್ಯಪಾಲರು ಕಾನೂನು ಮತ್ತು ಸಂವಿಧಾನಾತ್ಮಕ ಅಂಶಗಳನ್ನು ಪರಿಗಣಿಸದೆ ವಿವೇಚನಾ ರಹಿತವಾಗಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಅದಕ್ಕೆ ಮುಖ್ಯಮಂತ್ರಿಗಳು ವಿವರವಾದ ಪ್ರತಿಕ್ರಿಯೆ ನೀಡಿದ್ದರು. ಜತೆಗೆ, ಸಚಿವ ಸಂಪುಟದ ಶಿಫಾರಸಿನ ಹೊರತಾಗಿಯೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಆಗಸ್ಟ್ 16ರಂದು ಆದೇಶ ಹೊರಡಿಸಿದ್ದಾರೆ. ರಾಜ್ಯಪಾಲರ ಈ ವಿವೇಚನಾರಹಿತ ನಡೆಯು ಸ್ವಾಭಾವಿಕ ನ್ಯಾಯದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಪಿಸಿ ಕಾಯ್ದೆಯ ಸೆಕ್ಷನ್ 17ಎ ಮತ್ತು 19 ಹಾಗೂ ಬಿಎನ್ಎಸ್ಎಸ್‌ ಸೆಕ್ಷನ್ 218ರ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ದೂರುದಾರರಾದ ಟಿ.ಜೆ.ಅಬ್ರಾಹಂ, ಸ್ನೇಹಮಯಿ ಕೃಷ್ಣ, ಎಸ್.ಪಿ. ಪ್ರದೀಪ್ ಕುಮಾರ್ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.

ಅರ್ಜಿದಾರರ ಮನವಿ:
ರಾಜ್ಯಪಾಲರು ಮುಖ್ಯಮಂತ್ರಿಗಳ ಪ್ರತಿಕ್ರಿಯೆಯನ್ನು ಅನುಕೂಲಕ್ಕೆ ತಕ್ಕಂತೆ ನಿರ್ಲಕ್ಷಿಸಿ, ಬಳಿಕ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಅಗತ್ಯ ದಾಖಲೆಗಳನ್ನು ಪರಿಗಣಿಸದೆ ಆದೇಶ ಹೊರಡಿಸಲಾಗಿದ್ದು, ಇದು ಆತುರದ ಹಾಗೂ ಅಸಾಂವಿಧಾನಿಕ ಕ್ರಮವಾಗಿದೆ.‌ ಆದ್ದರಿಂದ, ಆ‌ಗಸ್ಟ್ 16ರಂದು ರಾಜ್ಯಪಾಲರು ಹೊರಡಿಸಿರುವ ಆದೇಶ ಹಾಗೂ ಈ ಸಂಬಂಧ ಆಗಸ್ಟ್ 17ರಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ರವಾನಿಸಿರುವ ಪತ್ರವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಜತೆಗೆ, ರಾಜ್ಯಪಾಲರ ಆದೇಶವನ್ನು ತಡೆ ಹಿಡಿದು ಮಧ್ಯಂತರ ಪರಿಹಾರ ನೀಡದಿದ್ದಲ್ಲಿ ಅರ್ಜಿದಾರರ ಘನತೆಗೆ ಸರಿಪಡಿಸಲಾಗದ ಹಾನಿಯಾಗಲಿದ್ದು, ಮುಖ್ಯಮಂತ್ರಿಗಳ ಕಚೇರಿಯ ಕಾರ್ಯನಿರ್ವಹಣೆಗೂ ತೊಡಕಾಗಲಿದೆ. ಆದ್ದರಿಂದ, ರಾಜ್ಯಪಾಲರ ಆದೇಶವನ್ನು ಕಾರ್ಯರೂಪಕ್ಕೆ ತರುವುದಕ್ಕೆ ತಡೆ‌ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ.

Related Articles

Comments (1)

  • - Channakeshava D R

    Perfect and excellent legal news coverage

    Reply

Leave a Comment