ಆರ್ಟಿಐ ಕಾಯ್ದೆ ವ್ಯಾಪ್ತಿಗೆ ಸೆಂಚುರಿ ಕ್ಲಬ್; ಮಾಹಿತಿ ಆಯೋಗದ ಆದೇಶ ಎತ್ತಿಹಿಡಿದ ಹೈಕೋರ್ಟ್
- by Jagan Ramesh
- July 22, 2025
- 50 Views

ಬೆಂಗಳೂರು: ನಗರದ ಪ್ರತಿಷ್ಠಿತ ‘ಸೆಂಚುರಿ ಕ್ಲಬ್’ ಸಾರ್ವಜನಿಕ ಪ್ರಾಧಿಕಾರವಾಗಿದ್ದು, ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯ ವ್ಯಾಪ್ತಿಗೆ ಒಳಪಡಲಿದೆ ಎಂದು ರಾಜ್ಯ ಮಾಹಿತಿ ಆಯೋಗ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಮಾಹಿತಿ ಆಯೋಗದ ಆದೇಶ ಪ್ರಶ್ನಿಸಿ ಸೆಂಚುರಿ ಕ್ಲಬ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಸೆಂಚುರಿ ಕ್ಲಬ್ಗಾಗಿ ಮೈಸೂರು ಸಂಸ್ಥಾನಕ್ಕೆ ಸೇರಿದ್ದ 7.5 ಎಕರೆ ಜಮೀನನ್ನು ಅಂದಿನ ಮಹಾರಾಜರು ಮಂಜೂರು ಮಾಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಕ್ಲಬ್ನಿಂದ ಮಹಾರಾಜರಿಗೆ ಯಾವುದೇ ಹಣ ಪಾವತಿ ಮಾಡಿಲ್ಲ. ಈ ಜಮೀನು ಮೈಸೂರು ಮಹಾರಾಜರ ಸ್ವಂತದ್ದು ಎಂಬುದಕ್ಕೆ ಯಾವುದೇ ದಾಖಲೆಗಳೂ ಇಲ್ಲ. ಜತೆಗೆ, ಮಹಾರಾಜರು ಮಂಜೂರು ಮಾಡಿದ ಜಾಗದಲ್ಲಿ ಮಾತ್ರವೇ ಕ್ಲಬ್ ನಡೆಯುತ್ತಿದೆ. ಈ ಭೂಮಿ ಇಲ್ಲವಾದಲ್ಲಿ ಕ್ಲಬ್ನ ಅಸ್ತಿತ್ವವೇ ಇಲ್ಲವಾಗಲಿದೆ ಎಂದು ಪೀಠ ಹೇಳಿದೆ.
ಕ್ಲಬ್ಗೆ ನೀಡಿರುವ ಜಮೀನಿನ ಮೊತ್ತ ಪ್ರಸ್ತುತ ನೂರಾರು ಕೋಟಿ ರೂ. ಗಳಾಗಿದೆ. ಆದರೆ, ಸದಸ್ಯರು ಪಾವತಿ ಮಾಡುವ ಸದಸ್ಯತ್ವ ಶುಲ್ಕ ಅತ್ಯಲ್ಪವಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದರೆ ಕ್ಲಬ್ಗೆ ಸರ್ಕಾರದ ಗಣನೀಯ ಹಣಕಾಸಿನ ಕೊಡುಗೆ ನೀಡಿದಂತಾಗಿದೆ. ಆದ್ದರಿಂದ, ಅದು ಆರ್ಟಿಐ ಕಾಯ್ದೆಯ ವ್ಯಾಪ್ತಿಗೆ ಬರಲಿದ್ದು, ಮಾಹಿತಿ ಆಯೋಗದ ಆದೇಶದಲ್ಲಿ ಯಾವುದೇ ಲೋಪ ಕಂಡು ಬಂದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.
ಪ್ರಕರಣವೇನು?
ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನರಸಿಂಹರಾಜ ಒಡೆಯರ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಅವರ ಆರಂಭಿಸಿದ್ದ ಸೆಂಚುರಿ ಕ್ಲಬ್, ಕರ್ನಾಟಕ ಸೊಸೈಟಿ ಕಾಯ್ದೆಯ ಅಡಿಯಲ್ಲಿ ನೊಂದಾಯಿಸಲ್ಪಟ್ಟಿದೆ. 1913ರಲ್ಲಿ ಮೈಸೂರು ಮಹಾರಾಜರು ನಗರದ ಕಬ್ಬನ್ಪಾರ್ಕ್ ಬಳಿಯ ಅಂದಾಜು 7.5 ಎಕರೆ ಜಮೀನನ್ನು ಕ್ಲಬ್ಗಾಗಿ ಮಂಜೂರು ಮಾಡಿದ್ದರು.
ಕ್ಲಬ್ ನಿರ್ವಹಣೆಗೆ ಸಂಬಂಧಿಸಿದ ಪ್ರಾಮಾಣೀಕೃತ ದಾಖಲೆಗಳನ್ನು ನೀಡುವಂತೆ ಮಾಹಿತಿ ಹಕ್ಕು ಕಾರ್ಯಕರ್ತರೂ ಆಗಿರುವ ವಕೀಲ ಎಸ್. ಉಮಾಪತಿ ಅವರು ಆರ್ಟಿಐ ಕಾಯ್ದೆಯಡಿ ಮಾಹಿತಿ ಕೋರಿದ್ದರು. ಇದಕ್ಕೆ ಉತ್ತರಿಸಿದ್ದ ಕ್ಲಬ್, ಇದು ಸಾರ್ವಜನಿಕ ಪ್ರಾಧಿಕಾರವಲ್ಲ. ಆದ್ದರಿಂದ, ಆರ್ಟಿಐ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ತಿಳಿಸಿತ್ತು.
ಇದನ್ನು ಪ್ರಶ್ನಿಸಿ ಉಮಾಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಮಾಹಿತಿ ಆಯೋಗ, ಮೈಸೂರು ಮಹಾರಾಜರು ಕ್ಲಬ್ಗಾಗಿ 7.5 ಎಕರೆ ಜಮೀನು ಮಂಜೂರು ಮಾಡಿದ್ದಾರೆ. ಈ ಅಂಶ ಕ್ಲಬ್ ಪರೋಕ್ಷವಾಗಿ ಸರ್ಕಾರದ ಹಣಕಾಸು ನೆರವು ಪಡೆದುಕೊಂಡಂತಾಗಿದೆ. ಆದ್ದರಿಂದ, ಕ್ಲಬ್ ಮಾಹಿತಿ ಹಕ್ಕು ಕಾಯಿದೆ ವ್ಯಾಪ್ತಿಗೆ ಬರಲಿದೆ ಎಂದು ಆದೇಶಿಸಿತ್ತಲ್ಲದೆ, ಉಮಾಪತಿ ಅವರಿಗೆ ಮಾಹಿತಿ ಒದಗಿಸುವಂತೆ ಸೂಚಿಸಿತ್ತು. ಈ ಆದೇಶವನ್ನು ಸೆಂಚುರಿ ಕ್ಲಬ್ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು.
ಮೈಸೂರು ಮಹಾರಾಜರು ಕ್ಲಬ್ಗೆ ಜಮೀನು ಮಂಜೂರು ಮಾಡಿದ್ದಾರೆ ಎಂಬ ಕಾರಣಕ್ಕೆ ಗಣನೀಯ ಹಣಕಾಸು ದೊರೆತಿದೆ ಎಂದು ಹೇಳಲಾಗುವುದಿಲ್ಲ. ಗಣನೀಯ ಅನುದಾನ ಪಡೆಯದ ಹೊರತು ಸಾರ್ವಜನಿಕ ಪ್ರಾಧಿಕಾರ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಸ್ವಾತಂತ್ರ್ಯಾಪೂರ್ವದಲ್ಲಿ ಮೈಸೂರು ಮಹಾರಾಜರು ಕ್ಲಬ್ಗೆ ಪೋಷಕ ಮುಖ್ಯಸ್ಥರಾಗಿದ್ದರು. ಪೋಷಕ ಮುಖ್ಯಸ್ಥರು ನೀಡಿರುವ ದಾನವನ್ನು ಸರ್ಕಾರದ ಅನುದಾನ ಎನ್ನಲಾಗುವುದಿಲ್ಲ. ಆದ್ದರಿಂದ, ಮಾಹಿತಿ ಆಯೋಗದ ಆದೇಶ ರದ್ದುಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
Related Articles
Thank you for your comment. It is awaiting moderation.
Comments (0)