ಪ್ರತಿಭಟನೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗದು; ನ.1ರಂದು ಕರಾಳ ದಿನಾಚರಣೆ ಪ್ರಶ್ನಿಸಿದ್ದ ಪಿಐಎಲ್ ಇತ್ಯರ್ಥಪಡಿಸಿದ ಹೈಕೋರ್ಟ್

ಬೆಂಗಳೂರು: ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳನ್ನು ಪ್ರತಿಭಟನೆ ನಡೆಸದಂತೆ ಸಂಪೂರ್ಣವಾಗಿ ನಿರ್ಬಂಧಿಸಲಾಗದು ಎಂದಿರುವ ಹೈಕೋರ್ಟ್, ಬೆಳಗಾವಿ ಅಥವಾ ಇತರ ಯಾವುದೇ ಕನ್ನಡ ಮಾತನಾಡುವ ಪ್ರದೇಶದಲ್ಲಿ ಕನ್ನಡ ರಾಜ್ಯೋತ್ಸವ (ನವೆಂಬರ್ 01) ದಿನದಂದು ‘ಕರಾಳ ದಿನ’ ಆಚರಿಸದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು (ಎಂಇಎಸ್) ನಿರ್ಬಂಧಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡಿದೆ.

ಇದೇ ವೇಳೆ, ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಅನುಮತಿ ಪಡೆದ ನಂತರವೇ ಎಂಇಎಸ್ ಯಾವುದೇ ಮೆರವಣಿಗೆ, ಪ್ರತಿಭಟನೆ ಅಥವಾ ರ‌್ಯಾಲಿ ಆಯೋಜಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಬೆಳಗಾವಿಯ ಮಲ್ಲಪ್ಪ ಛಾಯಪ್ಪ ಅಕ್ಷರದ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ನವೆಂಬರ್ 1ರಂದು ನಡೆಯುವ ಯಾವುದೇ ಪ್ರತಿಭಟನೆಗಳಿಂದ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರವು ಭರವಸೆ ನೀಡಿದೆ ಎಂಬ ಅಂಶವನ್ನು ಆದೇಶದಲ್ಲಿ ದಾಖಲಿಸಿರುವ ಹೈಕೋರ್ಟ್, ರ‌್ಯಾಲಿಯ ಸಮಯದಲ್ಲಿ ಯಾವುದೇ ವ್ಯಕ್ತಿ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದರೆ, ಸರ್ಕಾರ ಆ ವ್ಯಕ್ತಿಗಳ ಮೇಲೆ ಪೂರ್ಣ ಪ್ರಮಾಣದಲ್ಲಿ ಮೊಕದ್ದಮೆ ಹೂಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಆದೇಶಿಸಿದೆ.

ಅರ್ಜಿದಾರರ ಮನವಿ:
ಉದ್ದೇಶಿತ ಪ್ರತಿಭಟನೆಯು ಸಾರ್ವಜನಿಕ ಶಾಂತಿಯನ್ನು ಭಂಗಗೊಳಿಸುತ್ತದೆ, ಕನ್ನಡ ಮಾತನಾಡುವ ನಾಗರಿಕರು ತಮ್ಮ ರಾಜ್ಯದ ಸಂಸ್ಥಾಪನಾ ದಿನವನ್ನು ಶಾಂತಿಯುತವಾಗಿ ಆಚರಿಸುವ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಪ್ರತಿ ವರ್ಷ ನವೆಂಬರ್ 1 ರಂದು ನಡೆಯುವ ಯಾವುದೇ ಕಾನೂನುಬಾಹಿರ ಸಭೆಗಳು ಅಥವಾ ಪ್ರತಿಕೂಲ ಪ್ರದರ್ಶನಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಅಗತ್ಯವಾದ ಕಾನೂನು ಜಾರಿ ಸಂಸ್ಥೆಗಳನ್ನು ನಿಯೋಜಿಸುವುದು ಸೇರಿ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಆಚರಣೆಗಳಿಗೆ ಸುರಕ್ಷಿತ ವಾತಾವರಣವನ್ನು ಖಾತ್ರಿಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದರು.

ಸಾಮರಸ್ಯ ಕಾಪಾಡಿಕೊಳ್ಳಲು ಮತ್ತು ರಾಜ್ಯದ ಸಾಂಸ್ಕೃತಿಕ ಸಮಗ್ರತೆಯನ್ನು ಎತ್ತಿಹಿಡಿಯಲು ಕನ್ನಡ ರಾಜ್ಯೋತ್ಸವದಂದು ‘ಕರಾಳ ದಿನ’ ಅಥವಾ ಯಾವುದೇ ಇತರ ವಿಭಜಕ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ನಿಷೇಧಿಸುವ ನೀತಿಗಳು ಅಥವಾ ಮಾರ್ಗಸೂಚಿಗಳನ್ನು ರೂಪಿಸಿ, ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

Related Articles

Comments (0)

Leave a Comment