ಬೈರತಿ ಬಸವರಾಜ್ ಅವರಿಂದ ತನಿಖೆಯ ಹಾದಿ ತಪ್ಪಿಸುವ ಯತ್ನ; ಹೈಕೋರ್ಟ್ನಲ್ಲಿ ರಾಜ್ಯ ಸರ್ಕಾರದ ವಾದ
- by Jagan Ramesh
- January 22, 2026
- 392 Views
ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಆರೋಪಿ ಬೈರತಿ ಬಸವರಾಜ್ ತನಿಖೆಗೆ ಸಹಕರಿಸುವ ಬದಲಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ತನಿಖೆಯ ಹಾದಿ ತಪ್ಪಿಸಿದ್ದಾರೆ ಎಂದು ಸರ್ಕಾರ ಹೈಕೋರ್ಟ್ನಲ್ಲಿ ಬಲವಾಗಿ ವಾದಿಸಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೈರತಿ ಬಸವರಾಜ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಸಿಐಡಿ ಪರ ವಾದ ಮುಂದುವರಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಭೂವ್ಯಾಜ್ಯ ಸಂಬಂಧ ಬಿಕ್ಲು ಶಿವು ಕೊಲೆ ಮಾಡಲಾಗಿದೆ. ಪ್ರಕರಣದ 1ನೇ ಆರೋಪಿ ಜಗದೀಶ್ ಮತ್ತು 20ನೇ ಆರೋಪಿ ಅಜಿತ್ ಅವರಿಗೆ ಬೈರತಿ ಬಸವರಾಜ್ ಕರೆ ಮಾಡಿ ಸಂಭಾಷಣೆ ನಡೆಸಿದ್ದಾರೆ ಎಂದು ತಿಳಿಸಿದರಲ್ಲದೆ, ತನಿಖಾಧಿಕಾರಿಗಳು ಸಂಗ್ರಹಿಸಿರುವ ಸಿಡಿಆರ್ ದಾಖಲೆಗಳು, ಆರೋಪಿಗಳು ಒಂದೇ ಸ್ಥಳದಲ್ಲಿದ್ದ ಬಗ್ಗೆ ಜಿಯೋಗ್ರಫಿಕಲ್ ಮ್ಯಾಪಿಂಗ್ ಮತ್ತು ಜಗದೀಶ್, ಬೈರತಿ ಬಸವರಾಜ್ ಅವರು ಒಟ್ಟಿಗೆ ಕುಂಬಮೇಳಕ್ಕೆ ಪ್ರಯಾಣಿಸಿರುವ ವಿವರಗಳನ್ನು ಕೋರ್ಟ್ಗೆ ಸಲ್ಲಿಸಿದರು.
ತನಿಖೆ ವೇಳೆ ಬಸವರಾಜ್ ಅವರು ಜಗದೀಶ್ ಜತೆಗೆ ಕುಂಬಮೇಳದಲ್ಲಿ ಭಾಗಿಯಾಗಿಯಾಗಲು ಒಟ್ಟಿಗೆ ಪ್ರಯಾಗ್ರಾಜ್ಗೆ ಪ್ರಯಾಣಿಸಿದ್ದಾರೆ. ಜಗದೀಶ್ ಹುಟ್ಟುಹಬ್ಬದ ಆಚರಣೆ ವೇಳೆ ಒಟ್ಟಿಗೆ ಪೋಟೋ ತೆಗೆಸಿಕೊಂಡಿದ್ಧಾರೆ. ತನಿಖೆ ವೇಳೆ ಈ ಬಗ್ಗೆ ವಿವರಣೆ ಕೇಳಿದಾಗ, ಜಗದೀಶ್ ಮತ್ತು ಅಜಿತ್ ಯಾರೆಂಬುದೇ ನನಗೆ ಗೊತ್ತಿಲ್ಲ. ಕ್ಷೇತ್ರದ ಕಾರ್ಯಕರ್ತರೆಂದು ನನ್ನೊಂದಿಗೆ ಪೋಟೋ ತೆಗೆಸಿಕೊಂಡಿದ್ದಾರೆ. ಜಗದೀಶ್ ಮತ್ತು ಅಜಿತ್ ಅವರ ಫೋಟೋಗೋಳನ್ನು ಟಿವಿಯಲ್ಲಿ ನೋಡಿದಾಗ, ಅವರ ಬಗ್ಗೆ ನನಗೆ ತಿಳಿಯಿತಷ್ಟೇ ಎಂದು ಬೈರತಿ ಬಸವರಾಜ್ ಹೇಳಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಒಂದೇ ಪಿಎನ್ಆರ್ ನಂಬರ್ನಲ್ಲಿ ಜಗದೀಶ್, ಬೈರತಿ ಬಸವರಾಜ್ 2025ರ ಫೆಬ್ರವರಿಯಲ್ಲಿ ಪ್ರಯಾಗ್ರಾಜ್ಗೆ ಪ್ರಯಾಣ ಬೆಳೆಸಿದ್ದಾರೆ. ಪೈ ಲೇಔಟ್ನ ಜಾಗದ ವಿಚಾರವಾಗಿ ಗಲಾಟೆ ನಡೆದಾಗ ಬಸವರಾಜ್, ಜಗದೀಶ್ ಹಾಗೂ ಕೊಲೆ ಪ್ರಕರಣದ ಆರೋಪಿಗಳೂ ಒಂದೇ ಸ್ಥಳದಲ್ಲಿ ಇದ್ದರು. ಜಗದೀಶ್ ಮೇಲೆ ಕೊಲೆ ಯತ್ನ ನಡೆದಾಗ ಪ್ರಕರಣದ ಆರೋಪಿಗಳೊಂದಿಗೆ ಬಸವರಾಜ್ ಮಾತನಾಡಿದ್ದಾರೆ. ಮೇಲಾಗಿ ಶಿವು ವಿರುದ್ಧವೇ ಮೂರು ಪ್ರಕರಣಗಳನ್ನು ದಾಖಲಾಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದರು.
ಅರ್ಜಿದಾರರು ವಿಚಾರಣೆಗೆ ಸಹಕಾರ ನೀಡಿಲ್ಲ. ಬದಲಿಗೆ ಸುಳ್ಳು ಮಾಹಿತಿ ನೀಡಿ ತನಿಖೆಯ ದಿಕ್ಕು ತಪ್ಪಿಸಿದ್ದಾರೆ. ನ್ಯಾಯಾಲಯದಲ್ಲಿ ಮಾತ್ರ ತನಿಖೆ ಸಂಪೂರ್ಣ ಸಹಕರಿಸಿರುವುದಾಗಿ ಹೇಳಿದ್ದಾರೆ. ಸುಳ್ಳು ಹೇಳಿ ತನಿಖೆ ದಿಕ್ಕು ತಪ್ಪಿಸಿರುವುದು ಯಾವ ರೀತಿ ತನಿಖೆಗೆ ಸಹಕರಿಸಿದಂತಾಗುತ್ತದೆ? ಇಂತಹವರು ಜಾಮೀನು ಪಡೆಯಲು ಅನರ್ಹರು. ಬಿಕ್ಲು ಶಿವು ತಾಯಿಗೆ ಬೆದರಿಕೆ ಹಾಕಿದ್ದಾರೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಬಿಕ್ಲು ಶಿವು ಕೊಲೆ ಯತ್ನ ಘಟನೆ ನಡೆದಿದ್ದರೂ, ಎಫ್ಐಆರ್ ದಾಖಲಾಗದಂತೆ ಹಾಗೂ ಶಿವುಗೆ ರಕ್ಷಣೆ ಸಿಗದಂತೆ ನೋಡಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ಅರ್ಜಿದಾರರು ನ್ಯಾಯಾಲಯದ ಮುಂದೆ ಪ್ರಕರಣದ ತ್ವರಿತ ತನಿಖೆ ನಡೆಯಬೇಕು ಎಂದು ವಾದಿಸುತ್ತಾರೆ. ಆದರೆ, ಇತರ ಆರೋಪಿಗಳ ವಿರುದ್ಧ ತನಿಖೆ ನಡೆಯಬೇಕು. ತಮ್ಮ ವಿರುದ್ಧ ಮಾತ್ರ ತನಿಖೆ ನಡೆಯಬಾರದು ಎಂದು ಬಯಸುತ್ತಾರೆ. ತನಿಖೆ ಆರೋಪಿಯ ಇಚ್ಛೆಗೆ ಅನುಸಾರ ನಡೆಯುವಂಥದಲ್ಲ. ಆದ್ದರಿಂದ, ಬೈರತಿ ಬಸವರಾಜ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದ್ದು, ಅವರಿಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಜನವರಿ 27ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)