ನಿರ್ದಿಷ್ಟ ವಿಚಾರದ ಬಗ್ಗೆ ವಾದಿಸದ ಬಿಎಸ್‌ವೈ ವಕೀಲರು; ಅರ್ಜಿ ಪುರಸ್ಕರಿಸುವ ಪ್ರಶ್ನೆ ಉದ್ಭವಿಸದೆಂದು ಮೌಖಿಕವಾಗಿ ನುಡಿದ ಹೈಕೋರ್ಟ್
- by Jagan Ramesh
- October 10, 2025
- 362 Views

ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ಸಂತ್ರಸ್ತೆ ಹಾಗೂ ಘಟನಾ ಸ್ಥಳದಲ್ಲಿ ಹಾಜರಿದ್ದವರ ಹೇಳಿಕೆಯ ಸುತ್ತವಷ್ಟೇ ಆರೋಪಿ ಬಿ.ಎಸ್. ಯಡಿಯೂರಪ್ಪ ಪರ ವಕೀಲರು ವಾದ ಮಂಡಿಸಿದ್ದಾರೆ. ಆದರೆ, ಈ ಎಲ್ಲ ವಿಚಾರಗಳನ್ನು ಮೊದಲನೇ ಅರ್ಜಿಯಲ್ಲಿ ಹೈಕೋರ್ಟ್‌ನ ಸಮನ್ವಯ ಪೀಠವು ಈಗಾಗಲೇ ಪರಿಗಣಿಸಿ, ಯಡಿಯೂರಪ್ಪ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಿರುವಾಗ, ಎರಡನೇ ಅರ್ಜಿಯನ್ನು ಪುರಸ್ಕರಿಸುವ ಪ್ರಶ್ನೆಯೇ ಉದ್ಭವಿಸದು ಎಂದು ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ಪೋಕ್ಸೊ ಪ್ರಕರಣ ಸಂಬಂಧ ಹೊಸದಾಗಿ ಕಾಗ್ನೈಜೆನ್ಸ್ (ವಿಚಾರಣೆಗೆ ಪರಿಗಣಿಸಿದ) ತೆಗೆದುಕೊಂಡಿದ್ದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಎರಡನೇ ಬಾರಿ ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಅವರು, ವಿಚಾರಣಾ ನ್ಯಾಯಾಲಯ ಮೊದಲ ಬಾರಿಗೆ ಕಾಗ್ನೈಜೆನ್ಸ್ ತೆಗೆದುಕೊಂಡಿದ್ದನ್ನು ಪ್ರಶ್ನಿಸಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ದೂರು, ಎಫ್‌ಐಆರ್, ಆರೋಪ ಪಟ್ಟಿ, ತನಿಖೆಯನ್ನು ನಿರ್ದಿಷ್ಟವಾಗಿ ಬಿಎಸ್‌ವೈ ಪ್ರಶ್ನಿಸಿದ್ದರು. ಅಲ್ಲಿ ಅರ್ಜಿದಾರರಿಗೆ ಹಿನ್ನಡೆಯಾಗಿದೆ. ಪ್ರಕರಣದ ಕಾಗ್ನೈಜೆನ್ಸ್ ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನಷ್ಟೇ ರದ್ದುಪಡಿಸಿತ್ತು ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಈ ವೇಳೆ ನ್ಯಾಯಪೀಠ, ಹೇಳಿಕೆ ಮತ್ತು ಪ್ರತಿ ಹೇಳಿಕೆಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಬೇಕಿತ್ತು ಎಂಬ ವಿಚಾರದ ಸುತ್ತ ನಿನ್ನೆ ಯಡಿಯೂರಪ್ಪ ಪರ ಹಿರಿಯ ವಕೀಲರಾದ ಸಿ.ವಿ. ನಾಗೇಶ್ ಅವರು ವಾದಿಸಿದ್ದಾರೆ. ಇತರ ವಿಚಾರಗಳ ಕುರಿತು ಅವರು ವಾದಿಸಿಲ್ಲ. ಕೃತ್ಯ ನಡೆದ ಸ್ಥಳದಲ್ಲಿ ಹಾಜರಿದ್ದವರು ಮತ್ತು ಸಂತ್ರಸ್ತೆಯ ಹೇಳಿಕೆಯ ಸುತ್ತ ವಾದಿಸಿದ್ದಾರೆ. ಈ ಹಿಂದೆ ಕಾಗ್ನೈಜೆನ್ಸ್ ತೆಗೆದುಕೊಂಡಿದ್ದನ್ನು ಪ್ರಶ್ನಿಸಿದ್ದಾಗ ಈ ವಿಚಾರಗಳನ್ನು ಹೈಕೋರ್ಟ್‌ನ ಸಮನ್ವಯ ಪೀಠ ಪರಿಗಣಿಸಿ, ಅರ್ಜಿದಾರರ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದೆ. ಅದು ಅಂತಿಮಗೊಂಡಿದ್ದು, ಅದನ್ನು ಅರ್ಜಿದಾರರು ಪ್ರಶ್ನಿಸಿಲ್ಲ ಎಂದು ಹೇಳಿತು.
ಎರಡನೇ ಬಾರಿ ಕಾಗ್ನೈಜೆನ್ಸ್ ತೆಗೆದುಕೊಳ್ಳುವಾಗ ವಿಚಾರಣಾ ನ್ಯಾಯಾಲಯ ವಿವೇಚನೆ ಬಳಸಿದೆಯೋ, ಇಲ್ಲವೋ ಎಂಬುದೂ ಸೇರಿ ಬೇರಾವುದೇ ವಿಚಾರದ ಕುರಿತು ವಾದಿಸಿಲ್ಲ. ಹೀಗಿರುವಾಗ, ನಿಮ್ಮ ಅರ್ಜಿಯನ್ನು ಪುರಸ್ಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದಕ್ಕೆ ಉತ್ತರಿಸಲು ನಿಮ್ಮ ಹಿರಿಯ ವಕೀಲರನ್ನು (ಸಿ.ವಿ. ನಾಗೇಶ್) ಕರೆತನ್ನಿ ಎಂದು ಕೋರ್ಟ್‌ನಲ್ಲಿ ಉಪಸ್ಥಿತರಿದ್ದ ವಕೀಲೆ ಸ್ವಾಮಿನಿ ಗಣೇಶ್ (ಬಿಎಸ್‌ವೈ ಪರ ವಕೀಲರು) ಅವರನ್ನು ಕುರಿತು ನ್ಯಾಯಪೀಠ ಹೇಳಿತು.
ಸಿ.ವಿ. ನಾಗೇಶ್ ಅವರು ಧಾರವಾಡದಲ್ಲಿದ್ದಾರೆ ಎಂದು ವಕೀಲೆ ಸ್ವಾಮಿನಿ ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)