ನಗ್ನ ಫೋಟೋ ಬಳಸಿ ಮಹಿಳೆಗೆ ಬ್ಲ್ಯಾಕ್‌ಮೇಲ್ ಮಾಡುವುದು ‘ಆತ್ಮಹತ್ಯೆ ಪ್ರಚೋದನೆ’; ಕ್ರಿಮಿನಲ್‌ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಮಹಿಳೆಯ ನಗ್ನ ಚಿತ್ರಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿರುವುದು ಸಾಬೀತಾದರೆ ಅದು ನಿಸ್ಸಂದೇಹವಾಗಿ ಆತ್ಮಹತ್ಯೆಗೆ ಪ್ರಚೋದನೆಯಾಗುತ್ತದೆ ಎಂದಿರುವ ಹೈಕೋರ್ಟ್‌, ಲಿವ್‌-ಇನ್‌ ಸಂಬಂಧದಲ್ಲಿದ್ದ ಮಹಿಳೆಯ ನಗ್ನ ಚಿತ್ರಗಳನ್ನು ಬಳಸಿಕೊಂಡು ಸುಮಾರು 50 ಲಕ್ಷ ರೂ. ವಸೂಲಿ ಮಾಡಿದ್ದಲ್ಲದೆ, ಆಕೆಯ ಆತ್ಮಹತ್ಯೆಗೆ ಕಾರಣನಾದ ಮಂಡ್ಯದ 28 ವರ್ಷದ ವ್ಯಕ್ತಿ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.

ಆನೇಕಲ್‌ ವಿಚಾರಣಾ ನ್ಯಾಯಾಲಯದಲ್ಲಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ (ಐಪಿಸಿ) 306 ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷ ನ್‌ 66(ಇ) ಮತ್ತು 67(ಎ) ಅಡಿ ಬಾಕಿ ಇರುವ ಆರೋಪಪಟ್ಟಿ ಮತ್ತು ವಿಚಾರಣೆ ರದ್ದು ಕೋರಿ ಜಿ.ಎ. ವರುಣ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಅರ್ಜಿದಾರರ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಫೋನ್‌‌ಗಳು ಮೃತ ಮಹಿಳೆ ಹಾಗೂ ಅರ್ಜಿದಾರರ ಲಿವ್‌-ಇನ್‌ ಸಂಬಂಧದ ಸಮಯದಲ್ಲಿ ತೆಗೆದ ಚಿತ್ರಗಳು ಮತ್ತು ವಿಡಿಯೋಗಳಿಂದ ತುಂಬಿವೆ. ಇದು ಕೇವಲ ಪ್ರೀತಿ ತಿರಸ್ಕಾರದ ಪ್ರಕರಣ ಅಥವಾ ಸಾಂದರ್ಭಿಕ ನಿಂದನೆಯ ಪ್ರಕರಣ ಎಂಬ ವಾದವನ್ನು ಉದ್ದೇಶಪೂರ್ವಕ ಅವಮಾನ ಮತ್ತು ಸುಲಿಗೆ ಆರೋಪದ ಹಿನ್ನೆಲೆಯಲ್ಲಿ ನೋಡಿದಾಗ ಅರ್ಜಿದಾರರ ಕೃತ್ಯವನ್ನು ಸಮರ್ಥಿಸಲಾಗದು. ಈ ಹಂತದಲ್ಲಿ ಪ್ರಕರಣ ರದ್ದುಪಡಿಸಲಾಗದು, ವಿಚಾರಣೆ ಮುಂದುವರಿಯಲಿ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು, “ಹೋಗಿ ಸಾಯಿರಿ” ಎಂಬ ಪದಗಳ ಉಚ್ಚಾರಣೆಯು ಆತ್ಮಹತ್ಯೆಗೆ ಪ್ರಚೋದನೆಯಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಹಲವು ತೀರ್ಪುಗಳನ್ನು ನೀಡಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಆರೋಪಗಳು ನಿರಾಧಾರವಾದವು. ಆದ್ದರಿಂದ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕೆಂದು ಕೋರಿದ್ದರು.

ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ವಾದ ಮಂಡಿಸಿ, ಅರ್ಜಿದಾರ ಮತ್ತು ಮೃತ ಮಹಿಳೆಯ ಮೊಬೈಲ್‌ಗಳಲ್ಲಿ ಕಂಡು ಬರುವ ಚಿತ್ರಗಳು, ಆರೋಪಪಟ್ಟಿ, ಸಾಕ್ಷ್ಯಗಳ ಹೇಳಿಕೆಗಳು ಮತ್ತು ವಿಧಿ ವಿಜ್ಞಾನ ಪ್ರಯೋಗಾಲದ (ಎಫ್‌ಎಸ್‌ಎಲ್‌) ವರದಿಯತ್ತ ನ್ಯಾಯಾಲಯದ ಗಮನ ಸೆಳೆದು, ಇದು ಕೇವಲ “ಹೋಗಿ ಸಾಯಿರಿ” ಎಂದು ಉಚ್ಚರಿಸಿರುವ ಸರಳ ಪ್ರಕರಣವಾಗಿದ್ದರೆ ಪ್ರಾಸಿಕ್ಯೂಷನ್‌ಗೆ ಯಾವುದೇ ಪ್ರಕರಣವಿರುವುದಿಲ್ಲ. ಆದರೆ, ಅದಕ್ಕೂ ಮೀರಿದ ಸಾಕ್ಷ್ಯಗಳಿವೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಆರೋಪಿ ಮತ್ತು ಮೃತಳ ನಡುವಿನ ಕೊನೆಯ ಜಗಳವೇ ಆಕೆಯ ಆತ್ಮಹತ್ಯೆಗೆ ಕಾರಣವಾಗಿತ್ತು. ಅರ್ಜಿದಾರರು ತಮ್ಮ ಫೋನ್‌ನಲ್ಲಿ ಸೆರೆಹಿಡಿದಿರುವ ಚಿತ್ರಗಳು ಭಯಾನಕವಾಗಿದ್ದು, ಅವುಗಳನ್ನು ಹಿಡಿದುಕೊಂಡು ಕ್ರೆಡಿಟ್‌ ಕಾರ್ಡ್‌ ಮೂಲಕ ತಮ್ಮ ವ್ಯವಹಾರಕ್ಕಾಗಿ ಸುಮಾರು 51 ಲಕ್ಷ ರೂ.ಗಳನ್ನು ಬೆದರಿಸಿ ಸುಲಿಗೆ ಮಾಡಿದ್ದಾರೆ. ಆದ್ದರಿಂದ, ಪ್ರಕರಣ ರದ್ದುಪಡಿಸಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಪ್ರಕರಣವೇನು?
ಮೃತ ಸಂತ್ರಸ್ತೆಯ ತಂದೆ ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ದೂರಿನ ಪ್ರಕಾರ, ಅವರ ಮಗಳು ಮತ್ತು ಆರೋಪಿ ವರುಣ್ ಮಂಡ್ಯದ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ವ್ಯಾಸಂಗದ ಬಳಿಕ ಮಗಳು ಬೆಂಗಳೂರಿನ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದರು. ಆಕೆ ಮತ್ತು ವರುಣ್‌ 3 ವರ್ಷಗಳಿಂದ ಲಿವ್‌-ಇನ್‌ ಸಂಬಂಧದಲ್ಲಿದ್ದರು. ಅವರ ನಡುವೆ ವಿವಾಹದ ಭರವಸೆ ಮತ್ತು ಹಣಕಾಸಿನ ವಹಿವಾಟು ನಡೆದಿದ್ದವು. ಈ ನಡುವೆ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು. 2023ರ ಡಿಸೆಂಬರ್ 28ರಂದು ಸಂತ್ರಸ್ತೆ ತಾನು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

Related Articles

Comments (0)

Leave a Comment