ಬೈರತಿ ಬಸವರಾಜ್ ಸತ್ಯಾಂಶ ಮರೆಮಾಚಿ ಮಧ್ಯಂತರ ನಿರೀಕ್ಷಣಾ‌ ಜಾಮೀನು ಪಡೆದಿದ್ದಾರೆ – ಎಸ್‌ಪಿಪಿ

ಬೆಂಗಳೂರು: ರೌಡಿ ಶೀಟರ್ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಬೈರತಿ ಬಸವರಾಜ್‌ ಹಲವು ಸತ್ಯಾಂಶಗಳನ್ನು ಮರೆಮಾಚಿ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ ಎಂದು ಸಿಐಡಿ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಸಿ) ಹೈಕೋರ್ಟ್‌ಗೆ ತಿಳಿಸಿದರು.

ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಬೈರತಿ ಬಸವರಾಜ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸುನೀಲ್ ದತ್‌ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಸಿಐಡಿ ತನಿಖಾಧಿಕಾರಿಗಳ ಪರ ಎಸ್‌ಪಿಪಿ ಬಿ.ಎನ್‌. ಜಗದೀಶ್‌ ಹಾಜರಾಗಿ, ಬಸವರಾಜ್‌ (ಅವರ ಪರ ವಕೀಲರು) ಪ್ರಕರಣಕ್ಕೆ ಸಂಬಂಧಿಸಿದ ಹಲವು ಸತ್ಯಾಂಶಗಳನ್ನು ಮರೆಮಾಚಿ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ನಾನು ಎಸ್‌ಪಿಪಿಯಾಗಿದ್ದೇನೆ. ಆದರೆ, ನನಗೆ ಅರ್ಜಿಯ ಪ್ರತಿ ನೀಡಿಲ್ಲ. ಬದಲಾಗಿ ರಾಜ್ಯ ಸರ್ಕಾರಿ ಅಭಿಯೋಜಕರ ಕಚೇರಿಗೆ ತಲುಪಿಸಿದ್ದಾರೆ. ಕೋರ್ಟ್‌ನಲ್ಲಿ ಮಾತ್ರ ಎಸ್‌ಪಿಪಿಗೆ ಅರ್ಜಿಯ ಪ್ರತಿ ನೀಡಿರುವುದಾಗಿ ಎಂದು ತಿಳಿಸಿದ್ದಾರೆ ಎಂದು ದೂರಿದರು.

ಅಲ್ಲದೆ, ಪ್ರಕರಣ ಸಂಬಂಧ ಎಫ್‌ಐಆರ್‌ ಹಾಗೂ ಕೊಕಾ ನಿಯಮಗಳನ್ನು ಹೇರಿದ್ದನ್ನು ರದ್ದುಪಡಿಸಲು ಕೋರಿದ ಅರ್ಜಿ ಸಂಬಂಧ ಹೈಕೋರ್ಟ್‌ ಹೊರಡಿಸಿರುವ ಆದೇಶಗಳನ್ನು ಮರೆ ಮಾಚಲಾಗಿದೆ. ಸೆಷನ್ಸ್‌ ನ್ಯಾಯಾಲಯ ಜಾಮೀನು ತಿರಸ್ಕರಿಸಿದ ನಂತರ ಅರ್ಜಿ ಸಲ್ಲಿಸಲಾಗಿದೆ. ಡಿಸೆಂಬರ್ 26ರಂದು ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ನಿಗದಿಯಾಗಿರುವ ಬಗ್ಗೆ ನನಗೆ ಮಾಹಿತಿಯೇ ಇಲ್ಲ. ಆ ವೇಳೆ ನಾನು ಹೊರದೇಶದಲ್ಲಿದ್ದೆ. ನನ್ನ ಸಹ ಸಹದ್ಯೋಗಿಯು ಎಸ್‌ಪಿಪಿ ವಿಚಾರಣೆಗೆ ಹಾಜರಾಗಲು ಮತ್ತು ಆಕ್ಷೇಪಣೆ ಸಲ್ಲಿಸಲ ಕಾಲಾವಕಾಶ ಕೋರಿದ್ದರು. ನನ್ನ ಸಹದ್ಯೋಗಿ ಮಾಹಿತಿ ನೀಡಿದಾಗಲೇ ನನಗೆ ಅರ್ಜಿ ವಿಚಾರಣೆಗೆ ಬಂದಿರುವುದು ನನಗೆ ತಿಳಿಯಿತು. ಆಗ ಡಿಸೆಂಬರ್ 30ರಂದು ಸಂಜೆ ನಾನು ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದೆ. ನನ್ನ ವಾದ ಆಲಿಸದೆ ಮಧ್ಯಂತರ ಜಾಮೀನು ನೀಡಲಾಗಿದೆ ಎಂದು ವಿವರಿಸಿದರು.

ಪ್ರಕರಣಕ್ಕೆ ಸಂಬಂಧಿಸಿದ ಹಲವು ಕಾನೂನಾತ್ಮಕ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ (ಬಿಎನ್‌ಎಸ್‌ಎಸ್‌) ಮಧ್ಯಂತರ ನಿರೀಕ್ಷಣಾ ಜಾಮೀನು ಕೋರುವ ಅವಕಾಶವನ್ನು ತೆಗೆದುಹಾಕಲಾಗಿದೆ. ಈ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ಆದ್ದರಿಂದ, ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣೆಗೆ ಕೋರಿರುವುದೇ ತಪ್ಪು ಎಂದರು.

ಮುಂದುವರಿದು, ಎಫ್‌ಐಆರ್‌ ದಾಖಲಾಗಿರುವುದು ಬಿಟ್ಟರೆ ಮತ್ಯಾವುದೇ ಮಾಹಿತಿ ಇಲ್ಲ, ದೋಷಾರೋಪ ಪಟ್ಟಿ ತಮಗೆ ನೀಡಿಲ್ಲ ಎಂದು ಬಸವರಾಜ್‌ ಹೇಳಿದ್ದಾರೆ. ಆದರೆ, ದೋಷಾರೋಷ ಪಟ್ಟಿ ನೀಡುವ ಅಗತ್ಯವೇ ಇಲ್ಲ. ರಿಮ್ಯಾಂಡ್ ಅರ್ಜಿಯಲ್ಲಿ ಎಲ್ಲ ಸೆಕ್ಷನ್‌ಗಳನ್ನು ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ. ಆ ಅರ್ಜಿಗಳನ್ನು ಅವರೇ ಈ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಹೈಕೊರ್ಟ್‌ ಈ ಹಿಂದೆ ನಿರೀಕ್ಷಣಾ ಜಾಮೀನು ತಿರಸ್ಕರಿಸುವುದನ್ನೂ ಹೇಳಿಲ್ಲ ಎಂದು ತಿಳಿಸಿದರಲ್ಲದೆ, ಬುಧವಾರ ಮೆರಿಟ್‌ ಆಧಾರದಲ್ಲಿ ವಾದ ಮಂಡಿಸುವುದಾಗಿ ತಿಳಿಸಿದರು.

ಈ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಬುಧವಾರಕ್ಕೆ (ಜನವರಿ 21) ಮುಂದೂಡಿತು.

Related Articles

Comments (0)

Leave a Comment