ಬಿಕ್ಲು ಶಿವ ಕೊಲೆ ಪ್ರಕರಣ; ನಾಲ್ವರು ಆರೋಪಿಗಳಿಗೆ ಹೈಕೋರ್ಟ್‌ನಿಂದ ಡಿಫಾಲ್ಟ್ ಜಾಮೀನು
- by Prashanth Basavapatna
- March 13, 2026
- 7 Views
ಬೆಂಗಳೂರು: ಶಾಸಕ ಬೈರತಿ ಬಸವರಾಜ್ ಆರೋಪಿಯಾಗಿರುವ ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಇತರ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಶುಕ್ರವಾರ ಷರತ್ತುಬದ್ಧ ಡಿಫಾಲ್ಟ್ (ಸ್ವನಿರ್ದೇಶಿತ) ಜಾಮೀನು ಮಂಜೂರು ಮಾಡಿದೆ.
ನಿಗದಿತ ಅವಧಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ಸಿಐಡಿ ಪೊಲೀಸರು ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಡಿಫಾಲ್ಟ್ ಜಾಮೀನು ನೀಡುವಂತೆ ಕೋರಿ ಆರೋಪಿಗಳಾದ ಪಿ. ಜಗದೀಶ್ ಅಲಿಯಾಸ್ ಜಗ್ಗ, ಕೆ. ಕಿರಣ್, ಬಿ. ವಿಮಲ್ ರಾಜ್ ಹಾಗೂ ಆರ್. ಮದನ್ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಆರೋಪಿಗಳು ತಲಾ 1 ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ಒದಗಿಸಬೇಕು, ತನಿಖೆಗೆ ಸಹಕರಿಸಬೇಕು, ಸಾಕ್ಷ್ಯ ನಾಶಪಡಿಸಬಾರದು ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ನಿವಾಸ ಬದಲಿಸಿದರೆ ಅದರ ವಿಳಾಸವನ್ನು ತನಿಖಾಧಿಕಾರಿಗೆ ಒದಗಿಸಬೇಕು. ಸಕ್ಷಮ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ರಾಜ್ಯ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿರುವ ಹೈಕೋರ್ಟ್, ಇವುಗಳಲ್ಲಿ ಯಾವುದಾದರೂ ಒಂದು ಷರತ್ತು ಉಲ್ಲಂಘನೆಯಾದರೂ ಜಾಮೀನು ರದ್ದಾಗಲಿದೆ ಎಂದು ಆದೇಶದಲ್ಲಿ ಹೇಳಿದೆ.
ಸುಪ್ರೀಂ ತೀರ್ಪಿಗೆ ಒಳಪಡಲಿದೆ ಆರೋಪಿಗಳ ಜಾಮೀನು:
ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರ ಕೊಕಾ ಅನ್ವಯಿಸಿದ್ದ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಆರೋಪಿಗಳು ಜಾಮೀನು ಕೋರಿದ್ದರು. ಆರೋಪಿಗಳ ವಿರುದ್ಧ ಕೊಕಾ ಕಾಯ್ದೆ ಅನ್ವಯ ಆದೇಶ ವಜಾಗೊಳಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯು ಸುಪ್ರೀಂಕೋರ್ಟ್ ವಿಚಾರಣೆಗೆ ಬಾಕಿ ಇದೆ. ಈ ನಡುವೆ ಮಾರ್ಚ್ 3ರಂದು ಅರ್ಜಿದಾರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಪೂರ್ಣಗೊಂಡಿದ್ದು, ಅದನ್ನು ಪದೇಪದೆ ಮುಂದೂಡುವುದರಿಂದ ಆರೋಪಿಗಳು ಜೈಲಿನಲ್ಲೇ ಉಳಿಯುವಂತಾಗಲಿದೆ. ಆದ್ದರಿಂದ, ಕೊಕಾ ಅನ್ವಯಿಸಿರುವ ಸರ್ಕಾರದ ಆದೇಶವನ್ನು ಒಂದೊಮ್ಮೆ ಸುಪ್ರೀಂಕೋರ್ಟ್ ಎತ್ತಿಹಿಡಿದರೆ ಮುಂದಿನ ಪ್ರಕ್ರಿಯೆಯನ್ನು ಅರ್ಜಿದಾರರು/ಆರೋಪಿಗಳು ಪಾಲಿಸಬೇಕು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸುಪ್ರೀಂಕೋರ್ಟ್ ನೀಡುವ ತೀರ್ಪಿಗೆ ಒಳಪಟ್ಟು, ಷರತ್ತುಗಳನ್ನು ವಿಧಿಸಿ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣವೇನು?
ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು 2025ರ ಜುಲೈನಲ್ಲಿ ಬಿಕ್ಲು ಶಿವನ ಕೊಲೆಯಾಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಶಿವಪ್ರಕಾಶ್ ತಾಯಿ ವಿಜಯಲಕ್ಷ್ಮೀ ನೀಡಿದ ದೂರಿನ ಆಧಾರದಲ್ಲಿ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಬೈರತಿ ಬಸವರಾಜ್ ವಿರುದ್ಧ ಭಾರತಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ನಂತರ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆಗೊಂಡಿತ್ತು. ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಐದನೇ ಆರೋಪಿಯಾಗಿರುವ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಗುರುವಾರವಷ್ಟೇ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವುದನ್ನು ಸ್ಮರಿಸಬಹುದು.
Related Articles
Thank you for your comment. It is awaiting moderation.


Comments (0)