ಬಿಕ್ಲು ಶಿವ ಕೊಲೆ ಪ್ರಕರಣ; ಕೊಕಾ ಹೇರಿಕೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಬೈರತಿ ಬಸವರಾಜ್
- by Jagan Ramesh
- October 16, 2025
- 7 Views

ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ‘ಕರ್ನಾಟಕ ರಾಜ್ಯ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ’ (ಕೊಕಾ) ನಿಯಮಗಳನ್ನು ಹೇರಿರುವ ಅಪರಾಧ ತನಿಖಾ ದಳ (ಸಿಐಡಿ) ಪೊಲೀಸರ ಕ್ರಮ ಪ್ರಶ್ನಿಸಿ ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕೊಕಾ ಕಾಯ್ದೆಯ ಸೆಕ್ಷನ್ 3 (ಸಂಘಟಿತ ಅಪರಾಧ ಕೃತ್ಯ ಎಸಗಿ, ಜೀವಹಾನಿ ಮಾಡಿರುವರಿಗೆ ಒಂದು ಲಕ್ಷ ರೂ.ದಂಡದೊಂದಿಗೆ ಗರಿಷ್ಠ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವ) ಹಾಗೂ ಸೆಕ್ಷನ್ 4 (ಸಂಘಟಿತ ಅಪರಾಧ ಗುಂಪಿನ ಸದಸ್ಯರ ಪರವಾಗಿ ಲೆಕ್ಕಕ್ಕೆ ಸಿಗದ ಸಂಪತ್ತು ಹೊಂದಿರುವ) ಹೇರಲು ಸಿಐಡಿ ಉಪ ಅಧೀಕ್ಷಕರಿಗೆ ಅನುಮತಿ ನೀಡಿ ಸಿಐಡಿ ಪೊಲೀಸ್ ಮಹಾ ನಿರ್ದೇಶಕರು 2025ರ ಆ.12ರಂದು ಆದೇಶ ಹೊರಡಿಸಿದ್ದರು.
ಈ ಆದೇಶ ರದ್ದು ಕೋರಿ ಪ್ರಕರಣದ 5ನೇ ಆರೋಪಿಯಾದ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ (ಬಿ.ಎ. ಬಸವರಾಜ) ಸಲ್ಲಿಸಿರುವ ರಿಟ್ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಕೆಲ ಕಾಲ ಅರ್ಜಿ ಆಲಿಸಿ, ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ನಿಗದಿಪಡಿಸಿತು.
ಇದಕ್ಕೂ ಮುನ್ನ ಬೈರತಿ ಬಸವರಾಜ್ ಪರ ಹಿರಿಯ ವಕೀಲ ಸಂದೇಶ್ ಚೌಟ ಹಾಜರಾಗಿ, ಪ್ರಕರಣದಲ್ಲಿ ಈಗಾಗಲೇ ಅರ್ಜಿದಾರರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ಸೂಚಿಸಿ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ. ನಂತರ ಪ್ರಕರಣದಲ್ಲಿ ಸಿಐಡಿ ತನಿಖಾಧಿಕಾರಿಗಳು ಕೊಕಾ ಕಾಯ್ದೆಯ ನಿಯಮಗಳನ್ನು ಹೇರಿದ್ದಾರೆ. ಕೊಕಾ ಕಾಯ್ದೆ ಹೇರಿದರೆ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶವಿಲ್ಲ. ರಾಜಕೀಯ ದ್ವೇಷದಿಂದ ತನಿಖಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದರು.
ಸಂಘಟಿತ ಅಪರಾಧಗಳನ್ನು ನಡೆಸುವ ತಂಡವಿದ್ದರೆ (ಸಿಂಡಿಕೇಟ್) ಮಾತ್ರ ಕೊಕಾ ಕಾಯ್ದೆ ಅನ್ವಯಿಸಬೇಕು. ತಂಡದ ಸದಸ್ಯರ ವಿರುದ್ಧ ಎರಡಕ್ಕಿಂತ ಹೆಚ್ಚು ಕ್ರಿಮಿನಲ್ ಕೇಸ್‌ಗಳಿರಬೇಕು. ಮೂರಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆ ವಿಧಿಸುವ ಅಪರಾಧ ನಡೆಸಿರಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಶಾಸಕರ ವಿರುದ್ಧ ಕೊಕಾ ಅನ್ವಯಿಸಲಾಗಿದೆ. ಆದ್ದರಿಂದ, ಪ್ರಕರಣದಲ್ಲಿ ಕೋಕಾ ನಿಯಮಗಳನ್ನು ಹೇರಲು ಅನುಮತಿ ನೀಡಲಾಗಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿದರು.
Related Articles
Thank you for your comment. It is awaiting moderation.
Comments (0)