ಬಿಕ್ಲು ಶಿವ ಕೊಲೆ ಆರೋಪಿಗೆ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಆರೋಪ; ವೈದ್ಯಕೀಯ ಪರೀಕ್ಷೆಗೊಳಪಡಿಸಲು ಹೈಕೋರ್ಟ್ ನಿರ್ದೇಶನ
- by Ramya B T
- July 21, 2025
- 32 Views

ಬೆಂಗಳೂರು: ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ್ ಆರೋಪಿಯಾಗಿರುವ ರೌಡಿ ಶೀಟರ್ ಶಿವ ಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕಿರಣ್‌ಗೆ ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿರುವ ಆರ ಹಿನ್ನೆಲೆಯಲ್ಲಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಮತ್ತು ವರದಿಯೊಂದಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸುವಂತೆ ತನಿಖಾಧಿಕಾರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಪೊಲೀಸರು ವಿಚಾರಣೆ ವೇಳೆ ಹಲ್ಲೆ ನಡೆಸಿ, ಶಾಕ್ ಟ್ರೀಟ್ಮೆಂಟ್ ನೀಡುವ ಮೂಲಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿರುವ ಜತೆಗೆ ತನ್ನನ್ನು ಕೂಡಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಬೇಕು ಎಂದು ಕೋರಿ ಕಿರಣ್ (ಪತ್ನಿ ಮೂಲಕ) ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಆರೋಪಿ ಕಿರಣ್‌ನನ್ನು ಪೊಲೀಸರು ಬೌರಿಂಗ್ ಆಸ್ಪತ್ರೆ ಹೊರತುಪಡಿಸಿ ಇತರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ವೈದ್ಯಕೀಯ ವರದಿ ಪಡೆದು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು. ನಂತರ ಆತನನ್ನು ನ್ಯಾಯಾಂಗ ಬಂಧನದ ಸುಪರ್ದಿಗೆ ನೀಡಬೇಕೆಂಬ ಮನವಿ ಕುರಿತು ವಾದ-ಪ್ರತಿವಾದ ಆಲಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಕ್ತ ಆದೇಶ ಹೊರಡಿಸಬೇಕು. ಪೊಲೀಸರು ಕಿರಣ್‌ಗೆ ಯಾವುದೇ ರೀತಿ ಕಿರುಕುಳ ನೀಡಬಾರದು ಎಂದು ನಿರ್ದೇಶಿಸಿದ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ವಿಸಿ ಮೂಲಕ ವಿಚಾರಣೆಗೆ ಹಾಜರಾದ ಎಸಿಪಿ:
ಇದಕ್ಕೂ ಮುನ್ನ ಸೋಮವಾರ ಬೆಳಗ್ಗೆ ದಿನದ ಕಲಾಪ ಆರಂಭವಾದಾಗ ಕಿರಣ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಹಾಜರಾಗಿ, ಅರ್ಜಿದಾರರು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ವಿಚಾರಣೆ ವೇಳೆ ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿ, ಕಿರುಕುಳ ನೀಡಿದ್ದಾರೆ. ಎಲೆಕ್ಟ್ರಿಕಲ್ ಶಾಕ್ ಸೇರಿ ಇನ್ನಿತರ ವಿಧಾನಗಳ ಮೂಲಕ ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ನೀಡಿದ್ದಾರೆ. ಇದರಿಂದ, ಕಿರಣ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕೋರಿ ಅರ್ಜಿ ಸಲ್ಲಿಸಿದ್ದು, ಅದನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು.
ಅದಕ್ಕೆ ನ್ಯಾಯಪೀಠ, ಮಧ್ಯಾಹ್ನ 2.30ಕ್ಕೆ ತನಿಖಾಧಿಕಾರಿ ಮತ್ತು ಕಿರಣ್ ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿತು. ಸಂಜೆ 5 ಗಂಟೆಗೆ ಅರ್ಜಿ ವಿಚಾರಣೆಗೆ ತೆಗೆದುಕೊಂಡಾಗ ಪ್ರಕರಣದ ತನಿಖಾಧಿಕಾರಿ ಎಸಿಪಿ ಪ್ರಕಾಶ್ ರಾಥೋಢ್ ಮತ್ತು ಬಂಧಿತ ಆರೋಪಿ ಕಿರಣ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು.
ಆಗ ನ್ಯಾಯಮೂರ್ತಿಗಳು ಎಸಿಪಿಯನ್ನು ಉದ್ದೇಶಿಸಿ, ಕಿರಣ್‌ಗೆ ತೊಂದರೆ ಕೊಟ್ಟಿದ್ದೀರಾ? ಎಂದು ಕೇಳಿದರು. ಅದಕ್ಕೆ ಎಸಿಪಿ ಇಲ್ಲ ಎಂದು ಉತ್ತರಿಸಿದರು. ಬಳಿಕ ಪೊಲೀಸರು ತೊಂದರೆ ಕೊಟ್ಟಿದ್ದಾರೆಯೇ ಎಂದು ನ್ಯಾಯಮೂರ್ತಿಗಳು ಕೇಳಿದ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ ಕಿರಣ್, ಎಸಿಪಿ ಅವರು ನನಗೆ ಯಾವುದೇ ತೊಂದರೆ ನೀಡಿಲ್ಲ. ಇತರ ಪೊಲೀಸರು ತೊಂದರೆ ಕೊಟ್ಟಿದ್ದಾರೆ ಎಂದು ತಿಳಿಸಿದ.
ಕಿರಣ್ ಪರ ವಕೀಲರು, ಶಾಕ್ ಟ್ರೀಟ್‌ಮೆಂಟ್ ನೀಡಲಾಗಿದೆ. ಅರ್ಜಿದಾರಿಗೆ ಪ್ರಾಣ ಬೆದರಿಕೆಯಿದೆ. ಕೂಡಲೇ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ಕೋರಿದರು. ಈ ಮನವಿಗೆ ಆಕ್ಷೇಪಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ತನಿಖೆ ನಡೆಸಲಾಗದು. ಈ ಘಟನೆ ಕುರಿತಂತೆ ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಲಿ ಎಂದರು.
Related Articles
Thank you for your comment. It is awaiting moderation.
Comments (0)