ಭಾರತ್ ಮಾತಾ ಕಿ ಜೈ ಘೋಷಣೆ ವೈಷಮ್ಯ ಹರಡುವುದಿಲ್ಲ; ಹಿಂದು ಕಾರ್ಯಕರ್ತರ ವಿರುದ್ಧದ ಕೇಸ್ ರದ್ದುಪಡಿಸಿದ ಹೈಕೋರ್ಟ್
- by Jagan Ramesh
- September 28, 2024
- 197 Views
ಬೆಂಗಳೂರು: “ಭಾರತ್ ಮಾತಾ ಕಿ ಜೈ” ಘೋಷಣೆ ಸಾಮರಸ್ಯವನ್ನು ಉತ್ತೇಜಿಸುತ್ತದೆಯೇ ಹೊರತು ವೈಷಮ್ಯ ಹರಡುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಸೀದಿ ಮುಂದೆ ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದ್ದರೆಂಬ ಕಾರಣಕ್ಕೆ ಐವರು ಹಿಂದು ಕಾರ್ಯಕರ್ತರ ವಿರುದ್ಧ ಧರ್ಮಗಳ ನಡುವೆ ದ್ವೇಷ ಹರಡುವ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದೆ.
ಪ್ರಕರಣ ರದ್ದು ಕೋರಿ ಮಂಗಳೂರಿನ ಸುರೇಶ್, ಎಂ.ವಿನಯ್ ಕುಮಾರ್, ಸುಭಾಷ್, ರಂಜನ್ ಅಲಿಯಾಸ್ ರಂಜಿತ್ ಮತ್ತು ಧನಂಜಯ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಅರ್ಜಿದಾರರು ಹೂಡಿದ್ದ ಪ್ರಕರಣಕ್ಕೆ ಪ್ರತಿಯಾಗಿ ಈ ಪ್ರಕರಣ ಹೂಡಲಾಗಿದೆ. ಇದರಲ್ಲಿ ಸೆಕ್ಷನ್ 153ಎ ಅನ್ವಯವಾಗುವ ಒಂದೇ ಒಂದು ಅಂಶವೂ ಇಲ್ಲ. ವಾಸ್ತವವಾಗಿ ಧರ್ಮ, ಭಾಷೆ ಸೇರಿ ನಾನಾ ಅಂಶಗಳನ್ನು ಮುಂದಿಟ್ಟುಕೊಂಡು ಬೇರೆ ಬೇರೆ ಗುಂಪುಗಳ ನಡುವೆ ದ್ವೇಷ ಭಾವನೆ ಮೂಡಿಸುವ ಘಟನೆ ನಡೆದಿರಬೇಕಾಗುತ್ತದೆ. ಆದರೆ, ಇಲ್ಲಿ ಅಂತಹ ಘಟನೆ ನಡೆದಿಲ್ಲ. ಈ ಪ್ರಕರಣ ಐಪಿಸಿ ಸೆಕ್ಷನ್ 153 ದುರ್ಬಳಕೆಗೆ ಉತ್ತಮ ಉದಾಹರಣೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದೊಂದು ದೂರು-ಪ್ರತಿದೂರಿನ ಪ್ರಕರಣವಾಗಿದ್ದು, ಅರ್ಜಿದಾರರು ಕೇವಲ “ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗಿದ್ದಾರೆ ಹಾಗೂ ಪ್ರಧಾನಮಂತ್ರಿಯನ್ನು ಹೊಗಳಿದ್ದಾರೆ. ದೂರಿನಲ್ಲೂ ಕೂಡ ಯಾವ ಅಂಶಗಳನ್ನೂ ಉಲ್ಲೇಖಿಸಿಲ್ಲ ಎಂದಿರುವ ನ್ಯಾಯಾಲಯ, ಸುಪ್ರೀಂಕೋರ್ಟ್ನ ಹಲವು ತೀರ್ಪುಗಳನ್ನು ಉಲ್ಲೇಖಿಸಿ, ವಾಸ್ತವ ಅಂಶಗಳನ್ನು ಪರಿಗಣಿಸಿದರೆ “ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗಿರುವುದು ಕೇವಲ ಸಾಮರಸ್ಯ ಉತ್ತೇಜಿಸುತ್ತದೆಯೇ ಹೊರತು ದ್ವೇಷವನ್ನಲ್ಲ ಎಂದು ತಿಳಿಸಿ,ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.
ಪ್ರಕರಣವೇನು?
ಕಳೆದ ಜೂನ್ 9ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕಾರ ಸ್ವೀಕಾರ ಸಮಾರಂಭ ವೀಕ್ಷಿಸಿ ಹಿಂದಿರುಗುತ್ತಿದ್ದಾಗ ಒಂದು ಗುಂಪು ಅರ್ಜಿದಾರರನನ್ನು ತಡೆದು “ಭಾರತ್ ಮಾತಾ ಕಿ ಜೈ” ಎಂದು ಏಕೆ ಘೋಷಣೆ ಕೂಗುತ್ತಿದ್ದೀರಿ ಎಂದು ಆಕ್ಷೇಪಣೆ ಎತ್ತಿತ್ತು. ಆ ಸಂದರ್ಭದಲ್ಲಿ ಸುಮಾರು 25 ವ್ಯಕ್ತಿಗಳು ಅಲ್ಲಿದ್ದರು. ಅವರ ಪೈಕಿ ಒಬ್ಬರು ಅರ್ಜಿದಾರರ ಗುಂಪಿನಲ್ಲಿದ್ದ ಇಬ್ಬರಿಗೆ ಚಾಕುವಿಂದ ಇರಿದಿದ್ದರು. ಆದರೆ, ಮರುದಿನ ಪಿ.ಕೆ.ಅಬ್ದುಲ್ಲಾ ಎಂಬುವರು, ಅರ್ಜಿದಾರರು ಮಸೀದಿ ಮುಂದೆ ಬಂದು ಬೆದರಿಕೆ ಹಾಕಿದರು ಎಂದು ಆರೋಪಿಸಿ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಐಪಿಸಿ ಸೆಕ್ಷನ್ 153 ಎ ಸೇರಿ ಹಲವು ಸೆಕ್ಷನ್ಗಳ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿ ಎಫ್ಐಆರ್ ಮಾಡಿದ್ದರು. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
Related Articles
Thank you for your comment. It is awaiting moderation.
Comments (0)