ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ; ಕಾಯ್ದೆ ರೂಪಿಸುವವರೆಗೆ ಎಸ್ಒಪಿ ಜಾರಿಗೆ ನಿರ್ದೇಶಿಸಿ ಪಿಐಎಲ್ ಇತ್ಯರ್ಥಪಡಿಸಿದ ಹೈಕೋರ್ಟ್
- by Prashanth Basavapatna
- February 23, 2026
- 51 Views
ಬೆಂಗಳೂರು: ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮ ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿಯಂತ್ರಣ) ಮಸೂದೆಯು ಕಾಯ್ದೆ ರೂಪ ಪಡೆಯಯವವರೆಗೆ ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪ್ರಮಾಣೀಕೃತ ಕಾರ್ಯವಿಧಾನ (ಎಸ್‌ಒಪಿ) ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿ, ಅರ್ಜಿ ವಿಲೇವಾರಿ ಮಾಡಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಸಾಕಷ್ಟು ಸಮಯ ತೆಗೆದುಕೊಂಡು ಎಸ್‌ಒಪಿ ಸಿದ್ದಪಡಿಸಿದ್ದೇವೆ ಎಂದು ತಿಳಿಸಿ, ಜನವರಿ 13ರಂದು ರೂಪಿಸಿರುವ ಎಸ್‌ಒಪಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಅಮೈಕಸ್ ಕ್ಯೂರಿ ಎಸ್. ಸುಶೀಲಾ ಅವರು, ಏನು ನಡೆಯಿತು ಎಂಬ ವಿಚಾರಕ್ಕೆ ನಾವು ಹೋಗುತ್ತಿಲ್ಲ. ನ್ಯಾಯಾಲಯ ಕೆಲವು ನಿರ್ದೇಶನಗಳನ್ನು ನೀಡಬೇಕು. ಈ ಅರ್ಜಿ ದಾಖಲಿಸಿಕೊಳ್ಳುವಾಗ ಒಂಬತ್ತು ಪ್ರಶ್ನೆಗಳನ್ನು ಎತ್ತಲಾಗಿತ್ತು. ಈ ಅರ್ಜಿಯ ಕುರಿತಾದ ಮಿತಿ ನನಗೆ ಅರವಿದೆ. ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮ ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿಯಂತ್ರಣ) ಮಸೂದೆಯು ಕಾಯ್ದೆಯಾಗಿ ಜಾರಿಯಾಗುವವರೆಗೆ ಎಸ್‌ಒಪಿ ಜಾರಿಗೊಳಿಸಬೇಕು ಎಂದರು.
ಆಗ ನ್ಯಾಯಪೀಠ, ಈಗ ಎಸ್‌ಒಪಿ ಸಿದ್ಧವಾಗಿದ್ದು, ಕಾನೂನು ಸದನ ಸಮಿತಿಯ ಮುಂದಿದೆ. ಇನ್ನೇನು ಬಾಕಿ ಇದೆ. ಕಾನೂನು ಜಾರಿಯಾದ ಮೇಲೆ ಅದು ಅಸ್ತಿತ್ವಕ್ಕೆ ಬರಲಿದೆ. ಅಲ್ಲಿಯವರೆಗೆ ಎಸ್‌ಒಪಿ ಪಾಲಿಸಬೇಕು. ಕಾಯ್ದೆ ಜಾರಿಯಾದ ಮೇಲೆ ಅಹವಾಲುಗಳಿದ್ದರೆ ಈ ಅರ್ಜಿಯನ್ನು ಮತ್ತೆ ತೆರೆಯಬಹುದು ಎಂದು ಹೇಳಿತು.
ವಕೀಲ ಜಿ.ಆರ್. ಮೋಹನ್ ಅವರು, ಮುಂದಿನ ತಿಂಗಳು ಐಪಿಎಲ್ ನಡೆಸುವುದಕ್ಕೆ ಸಂಬಂಧಿಸಿದಂತೆ ಸಮಿತಿಯು ವರದಿ ಸಲ್ಲಿಸಿದೆ. ಇದನ್ನು ಆಧರಿಸಿ ಸಂಪುಟದಲ್ಲಿ ನಿರ್ಧರಿಸಲಾಗಿದ್ದು, ಗೃಹ ಇಲಾಖೆ ಕ್ರಮಕೈಗೊಳ್ಳಲಿದೆ ಎಂದು ಹೇಳಲಾಗಿದೆ. ಈ ವರದಿಯನ್ನು ನ್ಯಾಯಾಲಯದ ಮುಂದೆ ಇಡಲು ಆದೇಶಿಸಬೇಕು ಎಂದು ಕೋರಿದರು.
ಅಂತಿಮವಾಗಿ ನ್ಯಾಯಪೀಠ, ಅಡ್ವೊಕೇಟ್ ಜನರಲ್ ಅವರು ಜನವರಿ 13ರಂದು ಜನಸಂದಣಿ ಮತ್ತು ಜನಸಮೂಹ ನಿಯಂತ್ರಣ ವ್ಯವಸ್ಥೆಗೆ ಸಂಬಂಧಿಸಿದ ಎಸ್‌ಒಪಿ ಸಲ್ಲಿಸಿದ್ದಾರೆ. ಅಮೈಕಸ್ ಕ್ಯೂರಿ ಅವರು ಎಸ್‌ಒಪಿಯಲ್ಲಿನ ಗಂಭೀರ ಅಂತರದತ್ತ ಬೆರಳು ಮಾಡಿದ್ದು, ಅದನ್ನು ಪರಿಗಣಿಸಲಾಗಿದೆ. ಮಸೂದೆಯೂ ಸದನ ಸಮಿತಿಯ ಪರಿಗಣನೆಗೆ ಸಲ್ಲಿಕೆಯಾಗಿದೆ. ಅಮೈಕಸ್ ಕ್ಯೂರಿ ಸಲಹೆಯನ್ನು ಸದನ ಸಮಿತಿಗೆ ತಿಳಿಸಲಾಗುವುದು ಎಂದು ಈ ಸಂಬಂಧ ಸರ್ಕಾರ ಮೆಮೊ ಸಲ್ಲಿಸಿದೆ. ಇದನ್ನು ಪರಿಗಣಿಸಿ, ಮಸೂದೆ ಜಾರಿಯಾಗುವವರೆಗೆ ಎಸ್‌ಒಪಿ ಜಾರಿಗೊಳಿಸಬೇಕು ಎಂದು ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.
Related Articles
Thank you for your comment. It is awaiting moderation.


Comments (0)