ಬೆಂಗಳೂರು ಕಾಲ್ತುಳಿತ; ನ್ಯಾ. ಕುನ್ಹಾ ವರದಿ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಡಿಎನ್‌ಎ

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ಸಂಬಂಧ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್‌ ಕುನ್ಹಾ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ನೀಡಿರುವ ತನಿಖಾ ವರದಿ ರದ್ದುಕೋರಿ ಕಾರ್ಯಕ್ರಮ ಆಯೋಜನೆ ಹೊಣೆ ಹೊತ್ತಿದ್ದ ಡಿಎನ್‌ಎ ಎಂಟರ್ಟೇನ್ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹೈಕೋರ್ಟ್‌ ಮೇಟ್ಟಿಲೇರಿದೆ.

ಸರ್ಕಾರಕ್ಕೆ ಜುಲೈ 11ರಂದು ವಿಚಾರಣಾ ಆಯೋಗ ಸಲ್ಲಿಸಿರುವ ವರದಿ ಪ್ರಶ್ನಿಸಿ ಡಿಎನ್‌ಎ ಎಂಟರ್ಟೇನ್ಮೆಂಟ್‌ನ ನಿರ್ದೇಶಕ ಸುನೀಲ್‌ ಮ್ಯಾಥ್ಯೂ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿಯು ಶುಕ್ರವಾರ (ಜುಲೈ 25) ವಿಚಾರಣೆಗೆ ನಿಗದಿಯಾಗಿದೆ.

ಮನವಿ ಏನು?
ವಿಚಾರಣಾ ಆಯೋಗ ದಾಖಲಿಸಿರುವ ಸಾಕ್ಷಿಗಳ ಪಾಟೀ ಸವಾಲಿಗೆ ವಿಚಾರಣಾ ಆಯೋಗ ಕಾಯ್ದೆ 1952ರಲ್ಲಿ ಅವಕಾಶವಿದೆ. ಅರ್ಜಿದಾರರ ಹಿತಾಸಕ್ತಿಗೆ ವಿರುದ್ಧವಾಗಿ ಸಾಕ್ಷಿ ನೀಡಿರುವವರ ಪಾಟೀ ಸವಾಲಿಗೆ ಅರ್ಜಿದಾರರು ಕೋರಿದ್ದು, ಇದಕ್ಕೆ ಕುನ್ಹಾ ಆಯೋಗ ನಿರಾಕರಿಸಿದೆ. ತನ್ನ ಸಾಕ್ಷಿಗಳು ಮತ್ತು ಇತರ ಸಾಕ್ಷಿಗಳು ದಾಖಲಿಸಿರುವ ಪ್ರತಿಯನ್ನು ಕೋರಲಾಗಿದ್ದು, ಅದನ್ನು ಆಯೋಗ ನಿರಾಕರಿಸಿದೆ. ತಪ್ಪಾಗಿ ದಾಖಲಿಸಿರುವ ಉತ್ತರಗಳನ್ನು ತೋರಿಸಲು ಪ್ರತಿ ಕೇಳಲಾಗಿದ್ದು, ಅದಕ್ಕೆ ನಿರಾಕರಿಸಲಾಗಿದೆ. ಇಡೀ ವಿಚಾರಣಾ ವರದಿಯು ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿದ್ದು, ಆಕ್ಷೇಪಾರ್ಹ ವರದಿಯನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಮಧ್ಯಂತರ ತಡೆಗೆ ಮನವಿ:
ಸರ್ಕಾರದ ಅನುಮತಿ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಒಂದೊಮ್ಮೆ ಅನುಮತಿ ನಿರಾಕರಿಸಿದ್ದರೆ, ಪೊಲೀಸರು ಕಾರ್ಯಕ್ರಮ ಆಯೋಜನೆಗೆ ತಡೆಯೊಡ್ಡಬೇಕಿತ್ತು. ಆದರೆ, ಬಂದೋಬಸ್ತ್‌ ಕಲ್ಪಿಸಿ, ಶುಲ್ಕ ಸಂಗ್ರಹಿಸುವುದು ಸೇರಿ ಹಲವು ಕ್ರಮಕೈಗೊಳ್ಳನ್ನು ಅವರು ಕೈಗೊಂಡಿದ್ದರು. ಸರ್ಕಾರದ ಪ್ರಮುಖರ ಸಮ್ಮುಖದಲ್ಲಿ ವಿಧಾನಸೌಧದ ಎದುರು ಕಾರ್ಯಕ್ರಮ ನಡೆದಿದೆ. ಆನಂತರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆದಿದೆ. ಸರ್ಕಾರ ಹಾಗೂ ಪೊಲೀಸರು ಮಾಡಿರುವ ಟ್ವೀಟ್‌‌ಗಳು, ಸಂಚಾರ ದಟ್ಟಣೆಯ ಸೂಚನೆಗಳು, ಅಗ್ನಿಶಾಮಕ ದಳದ ಉಪಸ್ಥಿತಿ, ಶುಲ್ಕ ವಸೂಲಿ ಇತ್ಯಾದಿ ಅದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ, ಆಯೋಗದ ವರದಿ ಆಧರಿಸಿ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ತಡೆ ನೀಡಬೇಕು ಎಂದು ಅರ್ಜಿತಲ್ಲಿ ಮಧ್ಯಂತರ ಮನವಿ ಮಾಡಲಾಗಿದೆ.

ಮುಂಗಾರು ಅಧಿವೇಶನದಲ್ಲಿ ಆಯೋಗದ ವರದಿ ಮಂಡಿಸಲಾಗುತಿದ್ದು, ಮಧ್ಯಂತರ ಮನವಿ ಪರಿಗಣಿಸದಿದ್ದರೆ ನಮ್ಮ ಮತ್ತು ನಮ್ಮ ಅಧಿಕಾರಿಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಲಿದೆ. ಇದರಿಂದ, ಉಂಟಾಗಬಹುದಾದ ನಷ್ಟವನ್ನು ಯಾವುದೇ ರೀತಿಯಲ್ಲೂ ತುಂಬಿಕೊಡಲಾಗುವುದಿಲ್ಲ ಎಂದು ಡಿಎನ್‌ಎ ತನ್ನ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

ಅರ್ಜಿದಾರರ ಆಕ್ಷೇಪವೇನು?
• ವಿಚಾರಣಾ ಆಯೋಗ ಕಾಯ್ದೆಯ ಪ್ರಕಾರ ವೈಯಕ್ತಿಕವಾಗಿ ವಾದ ಆಲಿಸಲು ಅವಕಾಶ ನೀಡಬೇಕು. ಇದಕ್ಕೆ ಅನುಮತಿಸದೇ ಇರುವುದರಿಂದ ಆಕ್ಷೇಪಾರ್ಹ ವರದಿಯು ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿದೆ.

• ವಿಚಾರಣಾ ಆಯೋಗ ಪೂರ್ವಾಗ್ರಹ ಪೀಡಿತವಾಗಿ ವರ್ತಿಸಿದ್ದು, ವಾಸ್ತವಿಕ ಅಂಶಗಳನ್ನು ಪತ್ತೆ ಮಾಡುವ ಆಯೋಗಕ್ಕೆ ಬದಲಾಗಿ ದೋಷ ಹುಡುಕುವ ಆಯೋಗದ ರೀತಿಯಲ್ಲಿ ಕೆಲಸ ಮಾಡಿದೆ.

• ವರದಿಯಲ್ಲಿ ನಮ್ಮ ಇಬ್ಬರು ನಿರ್ದೇಶಕರತ್ತ ಬೆರಳು ಮಾಡಲಾಗಿದೆ ಎಂದು ಮಾಧ್ಯಮ ವರದಿಯಿಂದ ತಿಳಿದುಬಂದಿದೆ. ಇದರಲ್ಲಿ ಒಬ್ಬ ನಿರ್ದೇಶಕರು ಸರಿಯಾದ ರೀತಿಯಲ್ಲಿ ಹೇಳಿಕೆ ದಾಖಲಿಸಿಲ್ಲ. ಅದರ ಪ್ರತಿ ನೀಡವುದಕ್ಕೂ ನಿರಾಕರಿಸಲಾಗಿದೆ.

• ಆಕ್ಷೇಪಾರ್ಹ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿ, ನಮಗೆ ನಿರಾಕರಿಸುವ ಮೂಲಕ ಪೂರ್ವ ನಿಯೋಜಿತವಾಗಿ ಆಯೋಗ ವರ್ತಿಸಿದೆ. ಈ ಮೂಲಕ ನಮ್ಮ ಮತ್ತು ನಮ್ಮ ಅಧಿಕಾರಿಗಳನ್ನು ಪ್ರಕರಣದಲ್ಲಿ ಸಿಲುಕಿಸುವ ಕೆಲಸ ಮಾಡಲಾಗಿದೆ.

• ಆಯೋಗವು ಆತುರದಿಂದ ತನಿಖೆ ನಡೆಸಿರುವುದನ್ನು ಗಮನಿಸಿದರೆ, ಸರ್ಕಾರ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದು, ಸಾಮಾನ್ಯ ಜನರ ಕಣ್ಣೊರೆಸಲು ಆಯೋಗ ರಚನೆ ಮಾಡಿದಂತಿದೆ.

• ಪೊಲೀಸರನ್ನು ನಿಯೋಜಿಸುವುದಕ್ಕೆ ಸಂಬಂಧಿಸಿದಂತೆ ಅದಾಗಲೇ ಹಣ ಪಾವತಿಸಲಾಗಿತ್ತು. ಐಪಿಎಲ್‌ ಪಂದ್ಯಕ್ಕೆ ಬಂದೋಬಸ್ತ್‌ ನೀಡಲು ಪೊಲೀಸರು ಹಣ ಸಂಗ್ರಹಿಸಿದ್ದು, ಆ ಪಂದ್ಯವು ಲಖನೌಗೆ ಸ್ಥಳಾಂತರಗೊಂಡಿತ್ತು ಎಂಬ ಮಾಧ್ಯಮ ವರದಿಯನ್ನು ಆಯೋಗ ಪರಿಗಣಿಸಿಲ್ಲ.

• ನ್ಯಾ. ಕುನ್ಹಾ ಅವರಿಗೆ ಜೂನ್‌ 5ರಿಂದ ಅನ್ವಯಿಸುವಂತೆ ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಸರ್ಕಾರ ಆದೇಶಿಸಿತ್ತು. ಆನಂತರ, ಸಮಯ ವಿಸ್ತರಿಸಿರಲಿಲ್ಲ. ಅದಾಗ್ಯೂ, ಸಮಯ ಮೀರಿ ಕುನ್ಹಾ ಅವರು ಜುಲೈ 11ರಂದು ವರದಿ ಸಲ್ಲಿಸಿದ್ದಾರೆ. ಈ ಎಲ್ಲ ಕಾರಣಗಳಿಗೆ ವರದಿ ರದ್ದುಪಡಿಸಬೇಕು.

Related Articles

Comments (0)

Leave a Comment