ವಕೀಲರ ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಿಸಿಐಗೆ ಇಲ್ಲ – ಕರ್ನಾಟಕ ಹೈಕೋರ್ಟ್

ಬೆಂಗಳೂರು: ವಕೀಲರ ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸುವಂತಹ ಆದೇಶಗಳನ್ನು ಹೊರಡಿಸುವ ಅಧಿಕಾರ ಭಾರತೀಯ ವಕೀಲರ ಪರಿಷತ್‌‌ಗೆ (ಬಿಸಿಐ) ಇಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನಲ್ಲಿ (ಕೆ‌ಎಸ್‌ಬಿಸಿ) ನಡೆದಿದೆ ಎನ್ನಲಾದ ಹಣ ದುರ್ಬಳಕೆ ಬಗ್ಗೆ ಧ್ವನಿ ಎತ್ತಿದ್ದ ಹಿರಿಯ ವಕೀಲ ಎಸ್‌. ಬಸವರಾಜು ಅವರ ವಿರುದ್ಧ ಬಿಸಿಐ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ.

ಬಿಸಿಐ 2024ರ ಏಪ್ರಿಲ್ 12ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ವಕೀಲ ಎಸ್‌. ಬಸವರಾಜ್‌ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಾತನಾಡುವುದು ವಕೀಲರ ಮೂಲಭೂತ ಹಕ್ಕಾಗಿದೆ. ಬಿಸಿಐ ಅಧ್ಯಕ್ಷರು ಮೇಲ್ನೋಟಕ್ಕೆ ಯಾವುದೇ ವಕೀಲರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವಂತಹ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಮಾಡಿರುವಂತೆ ಸಕ್ಷಮ ಸಿವಿಲ್‌ ನ್ಯಾಯಾಲಯ ಅಥವಾ ಸಾಂವಿಧಾನಿಕ ನ್ಯಾಯಾಲಯಗಳ ಅಧಿಕಾರವನ್ನು ಬಿಸಿಐ ಅಧ್ಯಕ್ಷರು ಕಿತ್ತುಕೊಳ್ಳಲು ಅನುಮತಿ ನೀಡಲಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಬಿಸಿಐನ ಆದೇಶ ಯಾವುದೇ ವ್ಯಕ್ತಿಯ ವಿರುದ್ಧವಲ್ಲ,ಇಡೀ ವಕೀಲರ ಸಮುದಾಯದ ವಿರುದ್ಧವಾಗಿದೆ. ವಕೀಲರ ಕಾಯ್ದೆ ಸೆಕ್ಷನ್‌ 7(1)(ಜಿ) ಪ್ರಕಾರ, ರಾಜ್ಯಗಳ ವಕೀಲರ ಷರಿಷತ್‌ನ ಚಟುವಟಿಕೆ ಮೇಲೆ ಬಿಸಿಐ ನಿಗಾ ಇಡಬಹುದಾಗಿದೆ. ಆದರೆ, ವಕೀಲರು ಮಾತನಾಡದಂತೆ ನಿರ್ಬಂಧಿಸುವ ಆದೇಶ ಹೊರಡಿಸುವ ಅಧಿಕಾರ ಬಿಸಿಐ ಅಧ್ಯಕ್ಷರಿಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣವೇನು?
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನಡೆದಿದೆ ಎನ್ನಲಾದ ಹಣ ದುರ್ಬಳಕೆ ಕುರಿತು ಹಿರಿಯ ವಕೀಲ ಎಸ್‌. ಬಸವರಾಜ್‌ ಪ್ರಕರಣ ದಾಖಲಿಸಿದ್ದರು. ಆ ವಿಚಾರವನ್ನು ಪದಾಧಿಕಾರಿಗಳು ಬಿಸಿಐ ಗಮನಕ್ಕೆ ತಂದಿದ್ದರು. ಆಗ ಬಿಸಿಐ ಹಣಕಾಸು ವಹಿವಾಟುಗಳ ಬಗ್ಗೆ ಸ್ವೀಕೃತಿಗಳು ಸೇರಿ ಎಲ್ಲ ದಾಖಲೆಗಳು 15 ದಿನಗಳಲ್ಲಿ ಒದಗಿಸುವಂತೆ ಕೆಎಸ್‌ಬಿಸಿ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು.

ಆ ಕುರಿತು ವಿಚಾರಣಾ ಪ್ರಕ್ರಿಯೆ ಬಾಕಿ ಇರುವಾಗಲೇ ಬಿಸಿಐ ಅಧ್ಯಕ್ಷರು, ಹಣ ದುರ್ಬಳಕೆ ಪ್ರಕರಣದ ಬಗ್ಗೆ ಪರಿಷತ್‌ನ ಸದಸ್ಯರು ಸೇರಿ ಯಾವುದೇ ವಕೀಲರು ಸಾರ್ವಜನಿಕ ಹೇಳಿಕೆ ನೀಡಬಾರದು ಮತ್ತು ಎಲ್ಲೂ ಮಾತನಾಡಬಾರದು ಎಂದು ಆದೇಶ ಹೊರಡಿಸಿದ್ದರು. ಅದನ್ನು ಪ್ರಶ್ನಿಸಿ ಬಸವರಾಜ್ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

Related Articles

Comments (0)

Leave a Comment