ಉಸಿರಾಟ ವಿಶ್ಲೇಷಕ ಉಪಕರಣಗಳು ದೋಷರಹಿತವಾಗಿವೆಯೇ? ಸಂಚಾರ ಪೊಲೀಸರಿಂದ ವಿವರಣೆ ಕೇಳಿದ ಹೈಕೋರ್ಟ್
- by Jagan Ramesh
- August 28, 2025
- 7 Views

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಪರೀಕ್ಷಿಸುವ ಉಸಿರಾಟ ವಿಶ್ಲೇಶಕ ಉಪಕರಣಗಳು (Breathalyzer) ದೋಷರಹಿತವೆಂದು ಖಾತ್ರಿಪಡಿಸುವಿರೇ ಎಂದು ನಗರ ಸಂಚಾರಿ ಪೊಲೀಸರನ್ನು ಮೌಖಿಕವಾಗಿ ಪ್ರಶ್ನಿಸಿರುವ ಹೈಕೋರ್ಟ್, ಈ ಉಪಕರಣಗಳು ದೋಷರಹಿತವಾಗಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಯಾವ ಕಾರ್ಯವಿಧಾನವನ್ನು ಜಾರಿಗೆ ತರಲಾಗಿದೆ ಎಂಬ ಬಗ್ಗೆ ವಿವರಣೆ ಕೇಳಿದೆ.
ಮದ್ಯ ಸೇವನೆ ಮಾಡದಿದ್ದರೂ ಉಪಕರಣದಲ್ಲಿ ಮದ್ಯಪಾನ ಮಾಡಲಾಗಿದೆ ಎಂದು ತೋರಿಸಿದ ಪರಿಣಾಮ 10 ಸಾವಿರ ರೂ. ದಂಡ ವಿಧಿಸಿದ್ದ ಪೊಲೀಸರ ಕ್ರಮ ಪ್ರಶ್ನಿಸಿ ನಗರದ ಸಿ. ಅಜಯ್ ಕುಮಾರ್ ಕಶ್ಯಪ್ ಸಲ್ಲಿಸಿರುವ ಅರ್ಜಿ ಕುರಿತು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ವಾಹನ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಸಂಚಾರ ಪೊಲೀಸರು ಬಳಸುವ ಉಪಕರಣಗಳು ಯಾವುದೇ ರೀತಿಯಲ್ಲಿ ತಿರುಚಬಾರದು ಎಂದು ಹೇಳಿತಲ್ಲದೆ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಮಧ್ಯಂತರ ಆದೇಶ ನೀಡಿತು. ಜತೆಗೆ, ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಸಂಚಾರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಿತು.
ದೋಷರಹಿತವಾಗಿವೆಯೇ?
ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಗೆ ಮೊದಲ ಬಾರಿಗೆ 10 ಸಾವಿರ ರೂ. ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ ಮತ್ತು ಎರಡನೇ ಬಾರಿ ಅಪರಾಧ ಎಸಗಿದರೆ 15 ಸಾವಿರ ರೂ. ದಂಡದಂತಹ ಗಂಭೀರ ಪರಿಣಾಮಗಳಿವೆ. ಉಸಿರಾಟ ವಿಶ್ಲೇಷಕ ಉಪಕರಣಗಳು ದೋಷದಿಂದ ಕೂಡಿವೆ ಎಂದು ಅರ್ಜಿದಾರರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಕರಣಗಳು ದೋಷರಹಿತವಾಗಿವೆ ಎಂದು ಖಚಿತಪಡಿಸಿಕೊಳ್ಳಲು ಪೊಲೀಸ್ ಇಲಾಖೆಯಲ್ಲಿ ಜಾರಿಯಲ್ಲಿರುವ ಕಾರ್ಯವಿಧಾನದ ಬಗ್ಗೆ ಲಿಖಿತ ವಿವರಣೆ ಬಯಸುತ್ತೇವೆ ಎಂದಿರುವ ನ್ಯಾಯಾಲಯ, ಈ ಉಸಿರಾಟದ ವಿಶ್ಲೇಷಕಗಳನ್ನು ಸರಿಯಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆಯೇ ಹಾಗೂ ಅವು ದೋಷರಹಿತವಾಗಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಯಾವ ಕಾರ್ಯವಿಧಾನವನ್ನು ಜಾರಿಗೆ ತರಲಾಗಿದೆಯೋ ಆ ಬಗ್ಗೆ ವಿವರ ನೀಡಿ ಎಂದು ಕೇಳಿದೆ.
ಪ್ರಕರಣವೇನು?
ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ಪರಿಶೀಲಿಸಲು ಅರ್ಜಿದಾರರ ಕಾರನ್ನು ಸಂಚಾರ ಪೊಲೀಸರು ತಡೆದಿದ್ದರು. ಮೊದಲ ಎರಡು ಬಾರಿ ಉಪಕರಣವು ನಕಾರಾತ್ಮಕ ಫಲಿತಾಂಶ ನೀಡಿತ್ತು. ಆಗ ಪೊಲೀಸರು ಮತ್ತೆ ಉಸಿರು ಊದುವಂತೆ ಅರ್ಜಿದಾರರನ್ನು ಕೇಳಿದ್ದರು. ಮೂರನೇ ಬಾರಿ ಉಪಕರಣದಲ್ಲಿ, ಮದ್ಯಪಾನ ಮಾಡಿರುವುದಾಗಿ ತೋರಿಸಿತ್ತು. ಅರ್ಜಿದಾರರು ತಾವು ಮದ್ಯಪಾನ ಮಾಡಿಲ್ಲ ಎಂದು ಹೇಳಿದರೂ ಪೊಲೀಸರು ಅವರಿಗೆ 10 ಸಾವಿರ ದಂಡವನ್ನು ವಿಧಿಸಿದ್ದರು.
ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಸಂಚಾರ ಪೊಲೀಸರು ನನ್ನನ್ನು ಪರೀಕ್ಷಿಸುವ ಮೊದಲು ಉಪಕರಣವನ್ನು ಪರೀಕ್ಷೆಗೆ ಒಳಪಡಿಸಿಲ್ಲ. ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಲು ನನ್ನೊಂದಿಗೆ ಬರುವಂತೆ ಕರೆದರೂ ನಿರಾಕರಿಸಿದ್ದ ಪೊಲೀಸರು, ದಂಡ ವಿಧಿಸಿ ವಾಹನ ವಶಪಡಿಸಿಕೊಂಡರು ಎಂದು ಆರೋಪಿಸಿದ್ದಾರೆ.
ಘಟನೆಯ ನಂತರ ಖಾಸಗಿ ಲ್ಯಾಬ್‌ಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಂಡಾಗ ಮದ್ಯದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ವಿಚಾರಣೆಯ ಸಮಯದಲ್ಲಿ ನನ್ನ ಬಳಿ ವೈದ್ಯಕೀಯ ಪ್ರಮಾಣಪತ್ರ ಇದೆ ಎಂದು ಹೇಳಿದರೂ ಸಹ ಪೊಲೀಸರು ವಿಚಾರಣೆಗಾಗಿ ಪದೇಪದೆ ಕರೆಸಿಕೊಳ್ಳುತ್ತಿದ್ದರು ಎಂದು ಅರ್ಜಿದಾರರು ಆರೋಪಿಸಿದ್ದಾರೆ.
Related Articles
Thank you for your comment. It is awaiting moderation.
Comments (0)