ಅನಂತಪದ್ಮನಾಭ ದೇವಸ್ಥಾನ ನಗಾರಿ ಗೋಪುರದ ಶಿಲಾನ್ಯಾಸ; ಒಟ್ಟಾಗಿ ಕಾರ್ಯ ನೆರವೇರಿಸಲು ಹಾಲಿ, ಹಿಂದಿನ ವ್ಯವಸ್ಥಾಪನಾ ಸಮಿತಿಗಳಿಗೆ ಹೈಕೋರ್ಟ್ ಸಲಹೆ

ಬೆಂಗಳೂರು: ಮಹತೋಭಾರ ಅನಂತಪದ್ಮನಾಭ ದೇವಸ್ಥಾನ, ಶ್ರೀಕ್ಷೇತ್ರ ಪೆರ್ಡೂರು ಇದರ ನಗಾರಿ ಗೋಪುರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ವಿಚಾರದಲ್ಲಿ ಹಿಂದಿನ ವ್ಯವಸ್ಥಾಪನಾ ಸಮಿತಿ ಹಾಗೂ ಹಾಲಿ ವ್ಯವಸ್ಥಾಪನಾ ಸಮಿತಿ ನಡುವಿನ ವಿವಾದಕ್ಕೆ ಪರಿಹಾರ ಸೂತ್ರ ನೀಡಿರುವ ಹೈಕೋರ್ಟ್, ಎರಡೂ ಸಮಿತಿಗಳು ಸೇರಿ ದೇವರ ಕಾರ್ಯ ನೆರವೇರಿಸುವಂತೆ ಸಲಹೆ ನೀಡಿದೆ.

ದೇವಸ್ಥಾನದ ಶಿಥಿಲಗೊಂಡ ಭಾಗ ತೆರವುಗೊಳಿಸುವ ಸಂಬಂಧ 2025ರ ಮೇ 22ರಂದು ಉಡುಪಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶ ಪ್ರಶ್ನಿಸಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಸುರೇಶ್ ಶೆರಿಗಾರ್ ಹಾಗೂ ಇತರರು ಸಲ್ಲಿಸಿರುವ ಅರ್ಜಿಯಲ್ಲಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬೇಕು ಎಂಬುದು ನಮ್ಮ ಉದ್ದೇಶವಲ್ಲ. ದೇವರ ಕಾರ್ಯ ಎಲ್ಲರೂ ಸೇರಿ ಮಾಡುವಂತಹದ್ದು. ಆದ್ದರಿಂದ, ಹಿಂದಿನ ವ್ಯವಸ್ಥಾಪನಾ ಸಮಿತಿಯವರನ್ನೂ ಸೇರಿಸಿಕೊಂಡು ಕಾರ್ಯಕ್ರಮ ಮಾಡಲಿ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಇದನ್ನು ಪರಿಗಣಿಸಿದ‌ ನ್ಯಾಯಪೀಠ, ಜುಲೈ 13ರ ಶಿಲಾನ್ಯಾಸ ಕಾರ್ಯಕ್ರಮ ನಿಗದಿಯಂತೆ ನೆರವೇರಲಿ. ಹಿಂದಿನ ವ್ಯವಸ್ಥಾಪನಾ ಸಮಿತಿಯವರನ್ನೂ ಸೇರಿಸಿಕೊಂಡು ಕಾರ್ಯಕ್ರಮ ನಡೆಸಬೇಕು ಎಂದು ಹಾಲಿ ವ್ಯವಸ್ಥಾಪನಾ ಸಮಿತಿಗೆ ನಿರ್ದೇಶನ ನೀಡಿತು. ಜತೆಗೆ, ಈ ವಿಚಾರವನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಗಮನಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿತು.

ಅರ್ಜಿದಾರರ ಪರವಾಗಿ ವಕೀಲ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದಾರೆ.

Related Articles

Comments (0)

Leave a Comment