ಸ್ಮಾರ್ಟ್ ವಿದ್ಯುತ್ ಮೀಟರ್ ಟೆಂಡರ್‌ನಲ್ಲಿ ಅಕ್ರಮ ಆರೋಪ: ಲೋಕಾಯುಕ್ತ ಪೊಲೀಸರಿಂದ ವರದಿ ಕೇಳಿದ್ದ ವಿಶೇಷ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತಡೆ
- by Jagan Ramesh
- August 6, 2025
- 438 Views

ಬೆಂಗಳೂರು: ರಾಜ್ಯದಲ್ಲಿ ಸ್ಮಾರ್ಟ್ ವಿದ್ಯುತ್ ಮೀಟರ್‌ಗಳ ಖರೀದಿ ಮತ್ತು ಅಳವಡಿಕೆಗೆ ಸಂಬಂಧಿಸಿದ ಟೆಂಡರ್‌ನಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಇತರ ಅಧಿಕಾರಿಗಳ ವಿರುದ್ಧ ಬಿಜೆಪಿ ನಾಯಕರು ಸಲ್ಲಿಸಿದ್ದ ಖಾಸಗಿ ದೂರಿನ ಕುರಿತು ಲೋಕಾಯುಕ್ತ ಪೊಲೀಸರಿಂದ ವರದಿ ಕೇಳಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದಿರುವ ಖಾಸಗಿ ದೂರು ರದ್ದು ಕೋರಿ ಸಚಿವ ಕೆ.ಜೆ. ಜಾರ್ಜ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ಅರ್ಜಿಯ ಮುಂದಿನ ವಿಚಾರಣೆವರೆಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿತು.
ಜತೆಗೆ, ಪ್ರತಿವಾದಿಗಳಾದ ಲೋಕಾಯುಕ್ತ, ಸಿ.ಎನ್. ಅಶ್ವಥ್ ನಾರಾಯಣ್, ಎಸ್.ಆರ್. ವಿಶ್ವನಾಥ್ ಹಾಗೂ ಧೀರಜ್ ಮುನಿರಾಜು ಅವರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ಅರ್ಜಿ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿತು.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ಪ್ರಕರಣದಲ್ಲಿ ಸಚಿವರು ಸೇರಿ ಸಾರ್ವಜನಿಕ ಸೇವಕರು ಆರೋಪಿಗಳಾಗಿದ್ದಾರೆ. ಪ್ರಾಸಿಕ್ಯೂಷನ್ ಆರಂಭಿಸಿ, ಸಂಜ್ಞೇ (ಕಾಗ್ನೈಜೆನ್ಸ್) ಪರಿಗಣಿಸಿದಾಗ ಸಾರ್ವಜನಿಕ ಸೇವಕರಿಗೆ ಎರಡು ಹಂತದಲ್ಲಿ ರಕ್ಷಣೆ ಇರುತ್ತದೆ. ಸಾರ್ವಜನಿಕ ಸೇವಕರಿಗೆ ಭ್ರಷ್ಟಾಚಾರ ನಿಗ್ರಹ (ಪಿಸಿ) ಕಾಯ್ದೆ ಸೆಕ್ಷನ್ 17A ಅಡಿ ರಕ್ಷಣೆ ಇರುತ್ತದೆ. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಆಕ್ಷೇಪಾರ್ಹವಾದ ಆದೇಶವನ್ನು ಮಾಡುವಂತೆಯೇ ಇಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಆರೋಪಿತರಿಗಿಂತ ಮೇಲಿನ ಶ್ರೇಣಿಯಲ್ಲಿರುವವರಿಂದ ವರದಿ ಪಡೆಯಬೇಕು. ಮೇಲಿನ ಶ್ರೇಣಿಯ ಅಧಿಕಾರಿಯ ಬದಲಿಗೆ ಪೊಲೀಸ್ ಅಧಿಕಾರಿಯಿಂದ ವರದಿ ಕೇಳಲಾಗಿದೆ. ಆದರೆ, ಪಿಸಿ ಕಾಯ್ದೆ ಸೆಕ್ಷನ್ 17A ಅಡಿ ಪೂರ್ವಾನುಮತಿ ಇಲ್ಲದೇ ಸಾರ್ವಜನಿಕ ಸೇವಕ ವಿರುದ್ಧ ಯಾವುದೇ ಪೊಲೀಸ್ ಅಧಿಕಾರಿ ತನಿಖೆ ನಡೆಸುವಂತಿಲ್ಲ ಎಂದು ಹೇಳಲಾಗಿದೆ. ಇಲ್ಲಿ ವಿಚಾರಣಾ ನ್ಯಾಯಾಲಯ ಅವಕಾಶ ಇಲ್ಲದಿದ್ದರೂ ವರದಿ ಕೇಳಿದೆ ಎಂದು ಆಕ್ಷೇಪಿಸಿದರು.
ಖಾಸಗಿ ದೂರುದಾರರಾದ ಬಿಜೆಪಿ ನಾಯಕರ ಪರ ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ್ ವಾದ ಮಂಡಿಸಿ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ವರದಿ ನೀಡಿದ ಬಳಿಕ ಮ್ಯಾಜಿಸ್ಟ್ರೇಟ್ ಅವರು ಮೇಲಿನ ಶ್ರೇಣಿಯ ಅಧಿಕಾರಿಗಳಿಂದ ವರದಿ ಕೇಳುತ್ತಾರೆ. ಇಲ್ಲಿ ವಿಚಾರಣಾ ನ್ಯಾಯಾಲಯವು ವರದಿ ನೀಡುವಂತಷ್ಟೇ ಆದೇಶಿಸಿದೆ. ಇದು ಇನ್ನೂ ಪ್ರಾಥಮಿಕ ಹಂತದ ಪ್ರಕ್ರಿಯೆಯಾಗಿದೆ. ಆದ್ದರಿಂದ, ತಡೆ ನೀಡಬಾರದು ಎಂದು ಕೋರಿದರು.
ಪ್ರಕರಣವೇನು?
ರಾಜ್ಯದಲ್ಲಿ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆಗೆ ಸಂಬಂಧಿಸಿದ ಟೆಂಡರ್ ಕಾನೂನುಬಾಹಿರವಾಗಿದೆ ಮತ್ತು ಈ ಟೆಂಡರ್ ನೀಡಿಕೆಯಿಂದ ಅಂದಾಜು 16 ಸಾವಿರ ಕೋಟಿ ರೂ. ಮೊತ್ತದ ದುರ್ಲಾಭ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿಯ ಶಾಸಕರಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಎಸ್.ಆರ್. ವಿಶ್ವನಾಥ್ ಮತ್ತು ಧೀರಜ್ ಮುನಿರಾಜು ಅವರು ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಸ್ಮಾರ್ಟ್ ಮೀಟರ್ ಸೇವೆ ಒದಗಿಸುವ ನಿಟ್ಟಿನಲ್ಲಿ 2024ರ ಸೆಪ್ಟೆಂಬರ್ 26ರಂದು ಟೆಂಡರ್ ಕರೆಯಲಾಗಿತ್ತು. ಬಿಡ್‌ದಾರರಾದ ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್ ಎಂಬ ಶೆಲ್ ಕಂಪನಿಗೆ ಟೆಂಡರ್ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಈ ಟೆಂಡರ್ ಅನ್ನು ರಾಜ್ಯದಲ್ಲಿ ವಿವಿಧ ಭಾಗಗಳ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪ್ರತ್ಯೇಕ ಟೆಂಡರ್ ಕರೆಯದೆ ಬೆಸ್ಕಾಂ ಕಂಪನಿ ಮೂಲಕವೇ ನೇರವಾಗಿ ಟೆಂಡರ್ ನೀಡಲಾಗಿದೆ. ಇದರಿಂದ, ಅಂದಾಜು 16 ಸಾವಿರ ಕೋಟಿ ರೂ. ಮೊತ್ತವನ್ನು ಪಡೆಯುವ ಅಕ್ರಮ ನಡೆದಿದೆ. ಕಾನೂನು ಬಾಹಿರವಾದ ಈ ಪ್ರಕ್ರಿಯೆ ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಅಧಿನಿಯಮ-2000 ಹಾಗೂ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿತ್ತು.
ಇಂಧನ ಸಚಿವ ಕೆ.ಜೆ. ಜಾರ್ಜ್, ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಬೆಸ್ಕಾಂನ ತಾಂತ್ರಿಕ ನಿರ್ದೇಶಕ ಎಚ್.ಜೆ. ರಮೇಶ್ ಅವರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ವಿಚಾರಣಾಧೀನ ನ್ಯಾಯಾಲಯ ಖಾಸಗಿ ದೂರು ದಾಖಲಿಸಿಕೊಂಡು, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ ವರದಿ ನೀಡುವಂತೆ ಜುಲೈ 23ರಂದು ಆದೇಶಿಸಿತ್ತು. ಇದರಿಂದ, ಖಾಸಗಿ ದೂರು ಹಾಗೂ ವಿಶೇಷ ನ್ಯಾಯಾಲಯದ ಆದೇಶ ರದ್ದುಕೋರಿ ಸಚಿವ ಜಾರ್ಜ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Related Articles
Thank you for your comment. It is awaiting moderation.
Comments (0)