- ಪ್ರಮುಖ ಸಮಾಚಾರಗಳು
- ಹೈಕೋರ್ಟ್
- Like this post: 12
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 35 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥ; ನ್ಯಾ. ಕಾಮೇಶ್ವರ ರಾವ್ ಮಾಹಿತಿ
- by Jagan Ramesh
- September 20, 2024
- 174 Views
ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ವತಿಯಿಂದ ರಾಜ್ಯದಾದ್ಯಂತ ಸೆಪ್ಟೆಂಬರ್ 14ರಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳೂ ಸೇರಿ 35 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದ್ದು, ಒಟ್ಟು 2,402 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ.
ಹೈಕೋರ್ಟ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಎಲ್‌ಎಸ್‌ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಅವರು ಲೋಕ ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳು ಹಾಗೂ ಪರಿಹಾರದ ಅಂಕಿ-ಅಂಶಗಳ ಕುರಿತ ಮಾಹಿತಿ ನೀಡಿದರು.
ಲೋಕ ಅದಾಲತ್‌ನಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯ ಹೈಕೋರ್ಟ್ ಪೀಠಗಳು ಸೇರಿ ರಾಜ್ಯದ ವಿವಿಧ ನ್ಯಾಯಾಲಯಗಳ ಒಟ್ಟು 1,008 ಪೀಠಗಳು ಕಾರ್ಯ ನಿರ್ವಹಿಸಿ, ಕೋರ್ಟ್‌ಗಳಲ್ಲಿ ಬಾಕಿಯಿದ್ದ 2,00,083 ಪ್ರಕರಣಗಳು ಹಾಗೂ 33,84,347 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 35,84,430 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಾಗಿದೆ. ಆ ಮೂಲಕ 2,402 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಅದಾಲತ್‌ನಲ್ಲಿ ಒಟ್ಟು 1,669 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ, 248 ದಂಪತಿಯನ್ನು ಮತ್ತೆ ಒಂದು ಮಾಡಲಾಗಿದೆ. 2,696 ವಿಭಾಗ ದಾವೆಗಳು, 3,621 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳು, 8,517 ಚೆಕ್ ಬೌನ್ಸ್ ಪ್ರಕರಣಗಳು, 389 ಎಲ್ಎಸಿ ಅಮಲ್ಜಾರಿ ಪ್ರಕರಣಗಳು, 623 ಎಂವಿಸಿ ಅಮಲ್ಜಾರಿ ಪ್ರಕರಣಗಳು ಹಾಗೂ ಇತರ 2,598 ಅಮಲ್ಜಾರಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿ 108 ಕೋಟಿ ರೂ. ಮೊತ್ತದ ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.
ಐದು ವರ್ಷಗಳಿಗಿಂತ ಹಳೆಯದಾದ 1,022 ಪ್ರಕರಣಗಳು, 10 ವರ್ಷಗಳಿಗೂ ಹಳೆಯದಾದ 277 ಪ್ರಕರಣಗಳು ಮತ್ತು 15 ವರ್ಷಗಳಿಗೂ ಹಳೆಯದಾದ 144 ಪ್ರಕರಣಗಳು ಸೇರಿ 1,443 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ 26 ವರ್ಷಗಳಿಂದ ಬಾಕಿಯಿದ್ದ ನಂಜಪ್ಪ ಮತ್ತು ಅಕ್ರಂ ನಡುವಿನ ಪ್ರಕರಣ ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ರಿಲಯನ್ಸ್ ಹೋಮ್ ಫೈನಾನ್ಸ್ ಹಾಗೂ ಸೈಕಾನ್ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ನಡುವಿನ ಪ್ರಕರಣ ಇತ್ಯರ್ಥಪಡಿಸಿ, 20 ಕೋಟಿ ರೂ.ಗಳ ಪರಿಹಾರ ಕಲ್ಪಿಸಲಾಗಿದೆ. ಅಪರ್ಣ ರಾಮಕೃಷ್ಣ ಹಾಗೂ ರಾಯಲ್ ಸುಂದರಂ ವಿಮಾ ಕಂಪನಿ ನಡುವಿನ ಪ್ರಕರಣದಲ್ಲಿ 3.75 ಕೋಟಿ ರೂ. ಪರಿಹಾರ ಕಲ್ಪಿಸಲಾಗಿದೆ. ಕರ್ನಾಟಕ ಪುರಸಭೆ ಕಾಯ್ದೆ ಸೆಕ್ಷನ್ 103ರ ಅಡಿಯಲ್ಲಿ 5,95,892 ಪ್ರಕರಣಗಳಲ್ಲಿ ಆಸ್ತಿ ತೆರಿಗೆ ಪ್ರಕರಣ ಇತ್ಯರ್ಥಪಡಿಸಿರುವುದರಿಂದ 653 ಕೋಟಿ ರೂ. ಸರ್ಕಾರದ ಖಜಾನೆಗೆ ಜಮೆಯಾಗಿದೆ ಎಂದು ತಿಳಿಸಿದರು.
ಡಿ.14ಕ್ಕೆ ಮುಂದಿನ ಲೋಕ ಅದಾಲತ್:
2024ನೇ ಸಾಲಿನ ನಾಲ್ಕನೇ ಹಾಗೂ ಕೊನೆಯ ಲೋಕ ಅದಾಲತ್ ಡಿ.14ರಂದು ನಡೆಯಲಿದ್ದು, ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇದರಿಂದ, ಜನರ ಹಣ ಹಾಗೂ ಸಮಯ ಉಳಿತಾಯವಾಗಲಿದೆ ಎಂದು ನ್ಯಾಯಮೂರ್ತಿ ಕಾಮೇಶ್ವರ್ ರಾವ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯ (ಎಚ್‌ಸಿಎಲ್‌ಎಸ್‌ಸಿ) ಅಧ್ಯಕ್ಷರಾದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.
Comments (0)