ಸಿಎಂ ಸಿದ್ದರಾಮಯ್ಯ ಪತ್ನಿಗೆ 2 ನಿವೇಶನಗಳ ಬದಲಿಗೆ 14 ಸೈಟ್; ತನಿಖೆ ನಡೆಯಲೇಬೇಕೆಂದ ಹೈಕೋರ್ಟ್
- by Jagan Ramesh
- September 25, 2024
- 273 Views
ಬೆಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪತ್ನಿ 40×60 ಚದರ ಅಡಿಯ ಎರಡು ನಿವೇಶನ ಪಡೆಯಲು ಅರ್ಹರಾಗಿದ್ದರೂ, 56 ಕೋಟಿ ಮೌಲ್ಯದ 14 ನಿವೇಶನಗಳನ್ನು ಪಡೆದಿಕೊಂಡಿರುವ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಕಾನೂನುಬಾಹಿರ ನಿರ್ಣಯದ ಆಧಾರದಲ್ಲಿ ಮುಡಾ ಮಂಜೂರು ಮಾಡಿರುವ ಈ 14 ಸೈಟ್‌ಗಳಿಗೆ ಏನಾಗಿದೆ ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣವನ್ನು ಎಲ್ಲ ಆಯಾಮಗಳಿಂದ ವಿಶ್ಲೇಷಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ, ಈ ಪ್ರಕರಣದಲ್ಲಿ ಫಲಾನುಭವಿಗಳು ಅಪರಿಚಿತರಲ್ಲ, ಮುಖ್ಯಮಂತ್ರಿಗಳ ಕುಟುಂಬಸ್ಥರೇ ಲಾಭ ಪಡೆದಿದ್ದಾರೆ. ನಿಗದಿತ ಅರ್ಹತೆ ಇಲ್ಲದಿದ್ದರೂ ಮುಖ್ಯಮಂತ್ರಿಗಳ ಪತ್ನಿ 56 ಕೋಟಿ ರೂ ಮೌಲ್ಯದ 14 ನಿವೇಶನಗಳ ಪಡೆದುಕೊಂಡು, ಅವುಗಳ ಹೆಮ್ಮೆಯ ಮಾಲಕಿ ಆಗಿದ್ದಾರೆ. ಇಂತಹ ಪ್ರಕರಣ ಬಿಟ್ಟು ಮತ್ಯಾವ ಪ್ರಕರಣ ತನಿಖೆ ನಡೆಸಬಹುದು ಎಂಬುದು ನನಗೆ ಅರ್ಥವಾಗುವುದಿಲ್ಲ. ಹಾಗಾಗಿ, ಪ್ರಕರಣದಲ್ಲಿ ತನಿಖೆಯ ಅಗತ್ಯವಿದೆ ಎಂನ್ನುವುದು ಸ್ಪಷ್ಟವಾಗಿ ಮನದಟ್ಟಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.
ಎರಡು ನಿವೇಶನಗಳಿಷ್ಟೇ ಅರ್ಹ:
ಮುಡಾದ ನಿಯಮಗಳ ಪ್ರಕಾರ ಬಡಾವಣೆ ಅಭಿವೃದ್ಧಿಗೆ ಮೂರು ಎಕರೆಗಿಂತ ಹೆಚ್ಚು ಜಮೀನು ಕಳೆದುಕೊಂಡ ವ್ಯಕ್ತಿ 4,800 ಚದರ ಅಡಿ ವಿಸ್ತೀರ್ಣದ 40×60 ಎರಡು ನಿವೇಶನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಪ್ರಕರಣದಲ್ಲಿ ಆ 2 ನಿವೇಶನಗಳು 14 ಆಗಿವೆ. ಅಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ 25,284 ಚದರ ಅಡಿ ನೀಡಲಾಗಿದೆ. 4,800 ಚದರ ಅಡಿ ವಿಸ್ತೀರ್ಣದ ಜಮೀನು ಪಡೆಯಲು ಅರ್ಹತೆ ಇದ್ದವರಿಗೆ ಇಷ್ಟೊಂದು ಜಮೀನು ನೀಡಲಾಗಿದೆ ಎಂಬ ವಿಚಾರ ನ್ಯಾಯಾಲಯದ ಪ್ರಜ್ಞೆಗೆ ಆಘಾತ ಮೂಡಿಸಿದೆ ಎಂದು ನ್ಯಾಯಪೀಠ ಹೇಳಿದೆ.
ಕೆಸರೆ ಗ್ರಾಮವು ಮೈಸೂರು ನಗರದಿಂದ 15 ಕಿಮೀ ದೂರದಲ್ಲಿದೆ. ಒಂದು ವೇಳೆ ಪರ್ಯಾಯ ನಿವೇಶನ ಹಂಚಬೇಕಿದ್ದರೆ ಕೆಸರೆಯಲ್ಲೇ ಅಥವಾ ಆ ಬಳಿಕ ನಿರ್ಮಾಣಗೊಂಡ ಯಾವುದಾದರೂ ಬಡಾವಣೆಯಲ್ಲಿ ನೀಡಬಹುದಿತ್ತೇ ಹೊರತು 1991ರಲ್ಲಿ ನಿರ್ಮಾಣವಾದ ಮೈಸೂರಿನ ಹೃದಯ ಭಾಗದಲ್ಲಿರುವ ವಿಜಯನಗರದ ಮೂರನೇ ಹಂತದಲ್ಲಿ ನೀಡುವುದಲ್ಲ. ಆದ್ದರಿಂದ, ಮುಖ್ಯಮಂತ್ರಿಗಳ ಅನುಕೂಲಕ್ಕಾಗಿ ಹೇಗೆ ಮತ್ತು ಯಾಕೆ ನಿಯಮವನ್ನು ಬಾಗಿಸಲಾಯಿತು ಎಂಬುದರ ಬಗ್ಗೆ ತನಿಖೆ ನಡೆಯುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
ಕೆಸರೆ ಗ್ರಾಮದಲ್ಲಿ ಜಮೀನು ಕಳೆದುಕೊಂಡ ವ್ಯಕ್ತಿಗಳಿಗೆ ಮೈಸೂರಿನ ಶ್ರೀಮಂತ ಬಡಾವಣೆಯಲ್ಲಿ ಜಮೀನು ನೀಡಿದ ಒಂದೇ ಒಂದು ಉದಾಹರಣೆ ಉಲ್ಲೇಖವಿಲ್ಲ. ಮುಖ್ಯಮಂತ್ರಿಗಳ ಪತ್ನಿಗೆ 50:50 ಅನುಪಾತ ಹಂಚಿಕೆ ಲಾಭ ದಕ್ಕುತ್ತಿದ್ದಂತೆ ಆ ನಿಯಮವನ್ನು ಹಿಂಪಡೆಯವ ಪ್ರಯತ್ನ ನಡೆದಿರುವುದು ಅಚ್ಚರಿಯ ಸಂಗತಿ. ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾದ ಬಳಿಕ 50:50 ಅನುಪಾತದಲ್ಲಿ ಪರಿಹಾರ ಭೂಮಿ ನೀಡುವ ನಿರ್ಣಯವನ್ನು ಮುಡಾ ಹಿಂತೆಗೆದುಕೊಂಡಿತ್ತು. ಆ ಸಭೆಯಲ್ಲಿ ಯತೀಂದ್ರ ಅವರು ಭಾಗಿಯಾಗಿದ್ದರು. ಕಾನೂನುಬಾಹಿರ ನಿರ್ಣಯದ ಆಧಾರದ ಮೇಲೆ ನೀಡಲಾಗಿರುವ 14 ಸೈಟ್‌ಗಳಿಗೆ ಏನಾಗಿದೆ ಎಂಬುದರ ಬಗ್ಗೆ ತನಿಖೆ ನಡೆಯಬೇಕು ಎಂದು ನ್ಯಾಯಪೀಠ ಹೇಳಿದೆ.
ಸಹಿ ಹಾಕಿಲ್ಲ, ಶಿಫಾರಸು ಮಾಡಿಲ್ಲ ಎಂಬ ವಾದ ಒಪ್ಪಲಾಗದು:
ಅರ್ಜಿದಾರರು ಅಧಿಕಾರ ಸ್ಥಾನದಲ್ಲಿ ಇಲ್ಲದಿದ್ದರೆ ಇಷ್ಟೊಂದು ಪ್ರಮಾಣದ ಅನುಕೂಲಗಳು ಅವರಿಗೆ ಆಗುತ್ತಿರಲಿಲ್ಲ. ಕಾಲ ಕಾಲಕ್ಕೆ ನಿಯಮಗಳನ್ನು ಬಾಗಿಸಿ ಪ್ರಯೋಜನ ಪಡೆಯುವುದು ಜನ ಸಾಮಾನ್ಯರಿಗೆ ಸಾಧ್ಯವಿಲ್ಲ. ಆದ್ದರಿಂದ, ನಿವೇಶನ ಮಂಜೂರಾತಿ ಆದೇಶಕ್ಕೆ ಸಹಿ ಹಾಕಿಲ್ಲ, ಶಿಫಾರಸು ಮಾಡಿಲ್ಲ ಅಥವಾ ತೀರ್ಮಾನ ತೆಗೆದುಕೊಂಡಿಲ್ಲ ಎಂಬ ಮುಖ್ಯಮಂತ್ರಿಗಳ ವಾದವನ್ನು ಒಪ್ಪಲಾಗದು. ಇಲ್ಲಿ ಲಾಭ ಪಡೆದವರು ಅವರ ಪತ್ನಿಯೇ ಆಗಿದ್ದಾರೆ ಎಂದು ಪೀಠ ಹೇಳಿದೆ.
ಮುಡಾ 69 ಕೋಟಿ ರೂ. ನೀಡಿದರೆ ಜಮೀನನ್ನು ವಾಪಾಸ್ ನೀಡುತ್ತೇನೆ ಎಂದು ಅರ್ಜಿದಾರರು ಬಹಿರಂಗವಾಗಿ ಹೇಳಿದ್ದಾರೆ. ತಮ್ಮ ಪತ್ನಿಯ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಏನೇನು ಅರಿವಿರಲಿಲ್ಲ ಎಂದು ಹೇಳಲಾಗದು. ಮೇಲ್ನೋಟಕ್ಕೆ ದೂರುದಾರರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿರುವುದು, ಪ್ರಭಾವ ಬಳಸಿರುವುದು ಕಂಡು ಬರುತ್ತದೆ. ಪ್ರಭಾವ ಬೀರುವುದಕ್ಕೆ ಯಾವುದೇ ಶಿಫಾರಸು ಮಾಡುವ ಅಥವಾ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಮುಡಾ ಸಭೆಯಲ್ಲಿ ಸಿಎಂ ಪುತ್ರ:
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ನಿ 50:50 ಅನುಪಾತದಲ್ಲಿ ಪರಿಹಾರ ಅಥವಾ ಪರಿಹಾರ ನಿವೇಶನ ನೀಡುವಂತೆ ಮುಡಾಕ್ಕೆ ಅರ್ಜಿ ಸಲ್ಲಿಸುತ್ತಾರೆ. ಈ ಮಾದರಿಯಲ್ಲಿ ಪರಿಹಾರ ಪ್ರಕಟಿಸುವಾಗಲು ನಿಯಮಗಳ ಉಲ್ಲಂಘನೆಯಾಗಿದೆ. 50:50 ಅನುಪಾತದಲ್ಲಿ ಪರಿಹಾರ ನೀಡುವ ಬಗ್ಗೆ ನಡೆದ ಮುಡಾ ಸಭೆಯಲ್ಲಿ ಅರ್ಜಿದಾರರ ಮಗ ಡಾ. ಯತೀಂದ್ರ ಭಾಗಿಯಾಗಿದ್ದರು. ಆದರೆ, ಸಭೆಯಲ್ಲಿ ಡಾ.ಯತೀಂದ್ರ ಮೌನವಾಗಿದ್ದರು ಎಂದು ಸಿಎಂ ಪರ ವಕೀಲರು ವಾದಿಸಿದ್ದಾರೆ. ಒಬ್ಬ ಶಾಸಕ, ಕಾನೂನು ನಿರ್ಮಾತೃ, ಮುಖ್ಯಮಂತ್ರಿಯ ಮಗ ಮತ್ತು ಸಭೆ ನಡೆದ ದಿನದಂದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ಪುತ್ರ ನಿವೇಶನ ಹಂಚಿಕೆ ಬಗ್ಗೆ ಚರ್ಚೆ ನಡೆಯುವಾಗ ಮೌನವಾಗಿದ್ದರು ಎಂಬ ವಾದ ನಿಜಕ್ಕೂ ಹಾಸ್ಯಾಸ್ಪದ. ಇಲ್ಲಿ ಫಲಾನುಭವಿ ಅವರ ತಾಯಿಯಾಗಿದ್ದರು ಎಂಬುದನ್ನು ಮರೆಯಬಾರದು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಹಕ್ಕು ಇಲ್ಲದವರಿಂದ ಡಿನೋಟಿಫಿಕೇಷನ್‌ಗೆ ಅರ್ಜಿ:
ದೇವನೂರು ಬಡಾವಣೆಗೆ ವಶಪಡಿಸಿಕೊಂಡ ತಮ್ಮ ಜಮೀನನ್ನು ಭೂಸ್ವಾಧೀನದಿಂದ ಕೈ ಬಿಡಬೇಕು ಎಂದು ಜಮೀನಿನ ಮಾಲೀಕರೇ ಅಲ್ಲದ ದೇವರಾಜು ಎಂಬುವವರು ಮುಡಾಗೆ ಅರ್ಜಿ ಸಲ್ಲಿಸಿದ್ದರು. ತನ್ನ ಸೋದರ ಮೈಲಾರಪ್ಪ ಅವರಿಗೆ ಜಮೀನಿನ ಹಕ್ಕನ್ನು ಬಿಟ್ಟುಕೊಟ್ಟಿದ್ದ ದೇವರಾಜು ಅವರೇ ಆ ಬಳಿಕ ಡಿನೋಟಿಫಿಕೇಷನ್‌ಗೆ ಅರ್ಜಿ ಸಲ್ಲಿಸುತ್ತಾರೆ. ಅವರು ಈ ಜಮೀನಿನ ಹೊರತು ಬೇರೆ ಆದಾಯ ಮೂಲಗಳಿಲ್ಲ ಎಂದು ಮುಡಾಕ್ಕೆ ತಿಳಿಸಿದ್ದರು. ಆದರೆ, ಅವರು ಸರ್ಕಾರಿ ಶಿಕ್ಷಕರಾಗಿದ್ದರು. ಸುಳ್ಳು ಮಾಹಿತಿ ನೀಡಿ ಡಿನೋಟಿಫಿಕೇಶನ್‌ಗೆ ಅರ್ಜಿ ಸಲ್ಲಿಸಿದ್ದರು. ಇನ್ನೂ ಸಿವಿಲ್ ಕೋರ್ಟ್‌ನಲ್ಲಿ ಹಣ ಠೇವಣಿ ಇಡಲು ಆದೇಶ ಪ್ರಕಟಗೊಂಡ ಬಳಿಕ ನಡೆದ ಈ ಜಮೀನನ್ನು ಡಿನೋಟಿಫಿಕೇಷನ್ ಮಾಡಿರುವುದು ನಿಯಮ ಬಾಹಿರವಾಗಿದೆ ಎಂದು ನ್ಯಾಯಾಲಯ ವಿಶ್ಲೇಷಿಸಿದೆ.
ಆ ಜಮೀನಿನಲ್ಲಿ ಬಡಾವಣೆ ನಿರ್ಮಾಣವಾಗಿದ್ದರೂ ಸಹ ದೇವರಾಜು ಜಮೀನನ್ನು ಮುಖ್ಯಮಂತ್ರಿಗಳ ಪತ್ನಿಯ ಸೋದರ ಕೆ. ಬಿ. ಮಲ್ಲಿಕಾರ್ಜುನಸ್ವಾಮಿಗೆ ಮಾರಾಟ ಮಾಡುತ್ತಾರೆ. ಮುಡಾ ಈಗಾಗಲೇ ಬಡಾವಣೆ ಮಾಡಿರುವ ಜಮೀನನ್ನು ಮಲ್ಲಿಕಾರ್ಜುನಸ್ವಾಮಿ ಹೇಗೆ ಖರೀದಿಸುತ್ತಾರೆ ಎನ್ನುವುದೇ ಅಚ್ಚರಿಯ ಸಂಗತಿಯಾಗಿದೆ. ಸಿದ್ದರಾಮಯ್ಯ ಅವರ ಬಾವ ಕೃಷಿ ಜಮೀನನ್ನು ವಸತಿ ಭೂಮಿಯಾಗಿ ಪರಿವರ್ತಿಸುವಂತೆ ಅರ್ಜಿ ಸಲ್ಲಿಸುತ್ತಾರೆ. ತಹಶೀಲ್ದಾರ್, ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಜಮೀನು ಅಭಿವೃದ್ಧಿಗೊಂಡಿಲ್ಲ ಎಂದು ಹೇಳಿ ಕೃಷಿ ಭೂಮಿಯನ್ನು ವಸತಿ ಭೂಮಿಯನ್ನಾಗಿ ಪರಿವರ್ತಿಸಬಹುದು ಎಂದು ವರದಿ ನೀಡುತ್ತಾರೆ. ಭೂಮಿ ಪರಿವರ್ತನೆ ಆಗುತ್ತದೆ. ಮೇಲ್ನೋಟಕ್ಕೆ ಕಂದಾಯ ನಿರೀಕ್ಷಕ, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ತಮ್ಮ ಚೇಂಬರ್‌ನಲ್ಲಿ ಕೂತು ವರದಿ ಸಲ್ಲಿಸಿದಂತಿದೆ. ಭೂ ಪರಿವರ್ತನೆಯಾದ ಬಳಿಕ ದೂರುದಾರರ ಪತ್ನಿಗೆ ಗಿಫ್ಟ್ ಡೀಡ್ ಮೂಲಕ 2010ರಲ್ಲಿ ಭೂಮಿಯ ಮಾಲೀಕತ್ವ ಹಸ್ತಾಂತರಗೊಳ್ಳುತ್ತದೆ. 2014ರಂದಲೂ ಸಿದ್ದರಾಮಯ್ಯ ಒಂದಲ್ಲಾ ಒಂದು ಹುದ್ದೆಯಲ್ಲಿ ಅಧಿಕಾರದಲ್ಲಿದ್ದಾರೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.
Related Articles
Thank you for your comment. It is awaiting moderation.
Comments (0)