ಸ್ಯಾನಿಟರಿ ಪ್ಯಾಡ್ ಮೇಲೆ ರಾಹುಲ್ ಗಾಂಧಿ ಫೋಟೋ; ಆರೋಪಿಗಳ ವಿರುದ್ಧ ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್
- by Legal Samachar Desk
- July 19, 2025
- 9 Views

ಬೆಂಗಳೂರು: ಮುಂಬರಲಿರುವ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆೆಸ್ ಪಕ್ಷದ ‘ಪ್ರಿಯದರ್ಶಿನಿ ಉಡಾನ್ ಯೋಜನೆ’ ಅಡಿ ಹೆಣ್ಣು ಮಕ್ಕಳಿಗೆ ಹಂಚಲಾಗುತ್ತಿರುವ ಸ್ಯಾನಿಟರಿ ಪ್ಯಾಡ್ ಮೇಲೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಫೋಟೋ ಹಾಕಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ (ವೈರಲ್) ಹರಿಬಿಟ್ಟ ಆರೋಪದಲ್ಲಿ ಬಿಹಾರ ಮೂಲದ ರತನ್ ರಂಜನ್ ಹಾಗೂ ಅರುಣ್ ಕುಮಾರ್ ಕೋಶಿಲ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ನಿರ್ದೇಶಿಸಿದೆ.
ಯುವ ಕಾಂಗ್ರೆಸ್ ಕಾರ್ಯಕರ್ತೆ ಪ್ರಿಯಾಂಕಾದೇವಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ರದ್ದು ಕೋರಿ ರತನ್ ರಂಜನ್ ಹಾಗೂ ಅರುಣ್ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.
ಇದಕ್ಕೂ ಮುನ್ನ ನ್ಯಾಯಪೀಠ, ರಾಹುಲ್ ಗಾಂಧಿ ಅವರ ಚಿತ್ರವನ್ನು ಮಾರ್ಫಿಂಗ್ ಮಾಡಿ ಸ್ಯಾನಿಟರಿ ಪ್ಯಾಾಡ್ಗಳಲ್ಲಿ ಅಳವಡಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೆಲ್ಲ ಏಕೆ ಮಾಡುತ್ತೀರಿ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.
ಅದಕ್ಕೆ ಉತ್ತರಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್, ಫೋಟೋಗಳನ್ನು ಹಾಕಿರುವುದು ಅವರ ಪಕ್ಷದವರೇ, ನಾವು ಮಾಡಿದ್ದಲ್ಲ ಎಂದರು. ಅದಕ್ಕೆ ನ್ಯಾಯಪೀಠ, ಅವರ ಪಕ್ಷದವರು ಮಾಡಲಿ ಬಿಡಿ, ನಿಮಗೆ ಯಾಕೆ ಬೇಕಿತ್ತು ಎಂದು ಮರುಪ್ರಶ್ನೆ ಹಾಕಿತು. ಅವರ ಪಕ್ಷದವರು ಹಾಕಿರುವ ಫೋಟೋಗಳನ್ನು ಅರ್ಜಿದಾರರು ಹಂಚಿಕೊಂಡಿದ್ದಾರಷ್ಟೇ? ಇದು ತಪ್ಪು ಎಂದಾದರೆ ಆ ಪಕ್ಷದವರು ಮಾಡಿದ್ದೂ ತಪ್ಪೇ ಎಂದಾಗುತ್ತದೆ. ಇಷ್ಟೂ ಮಾಡಬಾರದು ಎಂದರೆ, ಅಭಿವ್ಯಕ್ತಿ ಸ್ವಾಾತಂತ್ರ್ಯದ ಹಕ್ಕು ಏನಾಗಬೇಕು ಎಂದು ವಕೀಲರು ಸಮರ್ಥಿಸಿಕೊಂಡರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾದ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆವರೆಗೆ ಬಲವಂತದ ಕ್ರಮ ಜರುಗಿಸಬಾರದು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)