ಮನೆಯೂಟಕ್ಕಾಗಿ ದರ್ಶನ್ ಸಲ್ಲಿಸಿದ್ದ ಮನವಿ ತಿರಸ್ಕರಿಸಲಾಗಿದೆ; ರಾಜ್ಯ ಸರ್ಕಾರದಿಂದ ಹೈಕೋರ್ಟ್ಗೆ ಮಾಹಿತಿ
- by Jagan Ramesh
- August 20, 2024
- 252 Views
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಮನೆಯಿಂದ ಊಟ ಪಡೆಯಲು ಅನುಮತಿಸುವಂತೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಮನೆಯಿಂದ ಊಟ, ಹಾಸಿಗೆ ಮತ್ತು ಪುಸ್ತಕಗಳನ್ನು ಪಡೆಯಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಧೀಕ್ಷಕರಿಗೆ ನಿರ್ದೇಶಿಸುವಂತೆ ನಟ ದರ್ಶನ್ ತೂಗುದೀಪ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ಹಾಜರಾದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ, ದರ್ಶನ್ ಅವರು ಮನೆಯಿಂದ ಊಟ, ಹಾಸಿಗೆ ಹಾಗೂ ಪುಸ್ತಕಗಳನ್ನು ತರಿಸಿಕೊಳ್ಳಲು ಅನುಮತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಸರ್ಕಾರ ಆಗಸ್ಟ್ 14ರಂದು ತಿರಸ್ಕರಿಸಿದೆ. ಅಂದೇ ಈ ಬಗ್ಗೆ ದರ್ಶನ್ ಅವರ ಗಮನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ದರ್ಶನ್ ಪರ ವಕೀಲರು, ಮನೆ ಊಟ ತಿರಸ್ಕರಿಸಿರುವ ಆದೇಶದ ಪ್ರತಿ ಈವರೆಗೂ ನಮಗೆ ತಲುಪಿಲ್ಲ. ಆ ಆದೇಶ ಅಧ್ಯಯನ ಮಾಡಿ ಪ್ರತಿಕ್ರಿಯೆ ಸಲ್ಲಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟಂಬರ್ 5ಕ್ಕೆ ಮುಂದೂಡಿತು.
ದರ್ಶನ್ ಅರ್ಜಿಯನ್ನು ಹೈಕೋರ್ಟ್ ಜುಲೈ 31ರಂದು ವಿಚಾರಣೆ ನಡೆಸಿತ್ತು. ಸರ್ಕಾರದ ಪರ ವಕೀಲರು, ಮನೆ ಊಟಕ್ಕೆ ಅನುಮತಿ ಕೋರಿ ದರ್ಶನ್ ಸರ್ಕಾರಕ್ಕೂ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ, ದರ್ಶನ್ ಮನವಿಗೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನ ಕೈಗೊಂಡು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿದ್ದ ಪೀಠ ವಿಚಾರಣೆಯನ್ನು ಆಗಸ್ಟ್ 20ಕ್ಕೆ (ಮಂಗಳವಾರ) ಮುಂದೂಡಿತ್ತು. ಇದೀಗ ದರ್ಶನ್ ಅವರ ಮನವಿ ತಿರಸ್ಕರಿಸಿರುವುದಾಗಿ ಸರ್ಕಾರ ಮಂಗಳವಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
Related Articles
Thank you for your comment. It is awaiting moderation.
Comments (0)