- ವ್ಯಕ್ತಿಪರಿಚಯ
- ಸಂಪಾದಕೀಯ
- Like this post: 17
ವಕೀಲರ ಸಂಘದ ಅಧ್ಯಕ್ಷ ಗಾದಿಗೆ ಪಂಚ ಗ್ಯಾರಂಟಿಗಳೊಂದಿಗೆ ಚುನಾವಣಾ ಅಖಾಡಕ್ಕಿಳಿದ ಟಿ.ಜಿ.ರವಿ
- by LegalSamachar
- February 5, 2025
- 2079 Views

AAB Election: ಬೆಂಗಳೂರು ವಕೀಲರ ಸಂಘದ ಚುನಾವಣೆ ಈ ಬಾರಿ ಅಬ್ಬರದಿಂದ ನಡೆಯುತ್ತಿದ್ದು, ಅನೇಕ ಹುರಿಯಾಳುಗಳು ತಮ್ಮ ಅದೃಷ್ಟ ಪರೀಕ್ಷೆಗಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಗೆದ್ದವರಿಗೆ ಮತ್ತೆ ಗೆಲ್ಲುವ ತವಕವಾದರೆ, ಕಳೆದ ಬಾರಿ ಸೋತವರಿಗೆ ಈ ಬಾರಿ ಹೇಗಾದರೂ ಗೆದ್ದು ತೋರಿಸಬೇಕು ಎನ್ನುವ ಛಲವಿದೆ. ಇವರಲ್ಲಿ ಗಮನ ಸೆಳೆಯುತ್ತಿರುವುದು ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳು. ವಕೀಲರ ಸಂಘದ ಹಾಲಿ ಪ್ರಧಾನ ಕಾರ್ಯದರ್ಶಿಯಾಗಿರುವ ಟಿ.ಜಿ. ರವಿ ಅವರು ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.
ಸಾಕಷ್ಟು ವರ್ಷಗಳಿಂದ ವಕೀಲರ ಸಂಘದಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಟಿ.ಜಿ. ರವಿ ಅವರು ಈ ಬಾರಿಯ ಚುನಾವಣೆಯಲ್ಲಿ ತಮ್ಮ ಪಂಚ ಗ್ಯಾರಂಟಿಗಳಿಂದ ಎಲ್ಲರೂ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇದೇ 16ರಂದು ನಡೆಯಲಿರುವ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾದರೆ ವಕೀಲ ಸಮುದಾಯಕ್ಕೆ ಅನುಕೂಲವಾಗುವಂತಹ 5 ಯೋಜನೆಗಳನ್ನು ಅನುಷ್ಠಾನಗೊಳಿಸುವ ಭರವಸೆಯೊಂದಿಗೆ ತಮ್ಮ ಪ್ರಣಾಳಿಕೆ ಹೊರತಂದಿದ್ದಾರೆ.
ಟಿ.ಜಿ. ರವಿ ಅವರ ಪಂಚ ಗ್ಯಾರಂಟಿಗಳು:
- ವಕೀಲರಿಗೆ ರಿಯಾಯಿತಿ ದರದಲ್ಲಿ ಸರ್ಕಾರದ ಸಹಯೋಗದಲ್ಲಿ ಮೆಟ್ರೊ ರೈಲು ಪಾಸ್ ವಿತರಣೆ.
- ಸಿಟಿ ಸಿವಿಲ್ ಕೋರ್ಟ್‌ನಿಂದ ಹೈಕೋರ್ಟ್, ಹೈಕೋರ್ಟ್‌ನಿಂದ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಉಚಿತ ಎಲೆಕ್ಟ್ರಿಕಲ್ ಬಗ್ಗಿ ಓಡಾಟ ಯೋಜನೆ.
- ಸರ್ಕಾರ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ವಕೀಲರಿಗೆ ಆರೋಗ್ಯ ವಿಮೆ.
- ವಕೀಲರ ಸಂಘದ ಕಟ್ಟಡದಲ್ಲಿ ಹೈಜೀನಿಕ್ ಫುಡ್ ಕೋರ್ಟ್ ಸ್ಥಾಪನೆ.
- ಕೋರ್ಟ್ ಆವರಣದಲ್ಲಿ 15 ದಿನಕ್ಕೊಮ್ಮೆ ವಕೀಲರಿಗೆ ಪ್ರಾಥಮಿಕ ಆರೋಗ್ಯ ತಪಾಸಣೆ ಶಿಬಿರ.
ಈ 5 ಯೋಜನೆಗಳನ್ನು ಘೋಷಿಸುವ ಮೂಲಕ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಸಂಚಲನ ಮೂಡಿಸಿರುವ ಟಿ.ಜಿ. ರವಿ ಅವರು ಅಧ್ಯಕ್ಷ ಸ್ಥಾನದ ಪ್ರಬಲ ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ.
ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆ:
ಪ್ರಧಾನ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಟಿ.ಜಿ. ರವಿ ಅವರು, ಸಿಟಿ ಸಿವಿಲ್ ಕೋರ್ಟ್ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಸ್ಕೈವಾಕ್ ನಿರ್ಮಾಣ, ಹೈಟೆಕ್ ಶೌಚಾಲಯಗಳ ನಿರ್ಮಾಣ, ಹೈಟೆಕ್ ಲೈಬ್ರರಿ, ಮಹಿಳಾ ವಕೀಲರಿಗೆ ವೇಟಿಂಗ್ ರೂಂ, ಟೈಪಿಂಗ್ ರೂಂ, ಕೋರ್ಟ್ ಆವರಣದಲ್ಲಿ ಹಸಿರೀಕರಣ, ಗಣೇಶ ದೇವಸ್ಥಾನ ನಿರ್ಮಾಣ, ಹೈಕೋರ್ಟ್‌ನಲ್ಲಿ ಮೊಬೈಲ್ ಸಿಗ್ನಲ್ ಸಮಸ್ಯೆಗೆ ಪರಿಹಾರ, ಪಾರ್ಕಿಂಗ್ ಸಮಸ್ಯೆಗೆ ಪರಿಹಾರ, ವಕೀಲರಿಗೆ ಎಚ್ಎಸ್‌ಆರ್‌ಪಿ ಅಳವಡಿಕೆ ಅಭಿಯಾನ, ಪಾಸ್‌ಪೋರ್ಟ್ ಸೇವೆ ಸೇರಿ ಹತ್ತು ಹಲವು ಕೆಲಸಗಳ ಮೂಲಕ ವಕೀಲ ಮಿತ್ರರ ಮನಸ್ಸು ಗೆದ್ದಿದ್ದಾರೆ. ಅಲ್ಲದೆ, ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಯಾಗುವಲ್ಲಿ ಇವರ ಹೋರಾಟ ಗಣನೀಯವಾದದ್ದು. ಯಾವುದೇ ಕೆಲಸವನ್ನು ನಾನು ಎಂದು ಮಾಡದೇ, ನಾವು ಎಂದು ಜತೆಯಾಗಿ ಹೆಜ್ಜೆ ಹಾಕಿದ್ದಾರೆ.
ದಿನದ 24 ಗಂಟೆಯೂ ವಕೀಲರ ಸೇವೆಗೆ ಲಭ್ಯವಿರುವುದು ಇವರ ಪ್ಲಸ್ ಪಾಯಿಂಟ್. ಸಹೃದಯಿ, ಸ್ನೇಹಪರ ವ್ಯಕ್ತಿತ್ವದಿಂದಾಗಿ ಟಿ.ಜಿ. ರವಿ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಟಿ.ಜಿ. ರವಿ ಅವರು ಇದೇ ಕಾರಣಕ್ಕೆ ಈ ಬಾರಿ ಅಧ್ಯಕ್ಷ ಸ್ಥಾನದ ಗೆಲ್ಲುವ ಕುದುರೆಯಾಗಿ ಕಾಣಿಸಿಕೊಂಡಿದ್ದಾರೆ.
ನಾನು ಪ್ರಧಾನ ಕಾರ್ಯದರ್ಶಿಯಾಗಿದ್ದ ಮೂರು ವರ್ಷದ ಅವಧಿಯಲ್ಲಿ ಹಿಂದೆಂದಿಗಿಂತ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದು ನಮ್ಮ ಸಂಘಕ್ಕೆ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದೇನೆ. ನನ್ನ ಕೆಲಸವೇ ನನಗೆ ಶ್ರೀರಕ್ಷೆ. ಆದ್ದರಿಂದ, ಈ ಬಾರಿ ವಕೀಲ ಮಿತ್ರರು ನನಗೆ ಆಶೀರ್ವದಿಸಿ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿದೆ.
ಟಿ.ಜಿ. ರವಿ
ಅಧ್ಯಕ್ಷ ಸ್ಥಾನದ ಅಭ್ಯರ್ಥಿ
Comments (0)