ಬಳಸಿದ‌ ಲ್ಯಾಪ್‌ಟಾಪ್ ಮಾರಾಟ ಮಾಡಿದ್ದಕ್ಕೆ ಬಿತ್ತು 10 ಸಾವಿರ ರೂ. ದಂಡ; ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿದ್ದ ಗ್ರಾಹಕ

ಬೆಂಗಳೂರು: ಉಪಯೋಗಿಸಿದ ಲ್ಯಾಪ್‌ಟಾಪ್ ಮಾರಾಟ ಮಾಡಿದ ಪ್ರಕರಣವೊಂದರಲ್ಲಿ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಹಾಗೂ ಮಾರಾಟಗಾರ ಕಂಪನಿಗೆ 10 ಸಾವಿರ ರೂ. ದಂಡ ವಿಧಿಸಿರುವ ಬೆಂಗಳೂರಿನ ಗ್ರಾಹಕ ನ್ಯಾಯಾಲಯ, ಲ್ಯಾಪ್‌ಟಾಪ್‌ ನ ಸಂಪೂರ್ಣ ಮೊತ್ತ 66,965 ರೂ. ಗಳನ್ನು ಶೇ.12 ಬಡ್ಡಿಯೊಂದಿಗೆ ಮರುಪಾವತಿಸುವಂತೆ ಆದೇಶಿಸಿದೆ.

ಬಳಸಿದ ಲ್ಯಾಪ್‌ಟಾಪ್ ಕಳುಹಿಸಿದ್ದ ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್ ಹಾಗೂ ಹರಿಯಾಣದ ಮಾರಾಟಗಾರ ಕಂಪನಿಯ ವಿರುದ್ಧ ರಾಜಸ್ಥಾನದ ವಿದ್ಯಾರ್ಥಿ ಪಂಕಜ್ ವರ್ಮ ಬೆಂಗಳೂರು ಗ್ರಾಮಾಂತರ ಹಾಗೂ ನಗರ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಬಿ. ನಾರಾಯಣಪ್ಪ, ಸದಸ್ಯರಾದ ಜ್ಯೋತಿ ಎನ್. ಹಾಗೂ ಶರಾವತಿ ಎಸ್.ಎಂ. ಅವರಿದ್ದ ಪೀಠ, ದೂರುದಾರರಿಂದ ಸಂಪೂರ್ಣ ಹಣ ಪಡೆದ ಹೊರತಾಗಿಯೂ ಹೊಸ ಲ್ಯಾಪ್‌ಟಾಪ್‌ ಬದಲಿಗೆ ಉಪಯೋಗಿಸಲ್ಪಟ್ಟ ಲ್ಯಾಪ್‌ಟಾಪ್ ಪೂರೈಸಿರುವುದು ಸ್ಪಷ್ಟವಾಗಿ ಸೇವಾನ್ಯೂನತೆಯಾಗಿದೆ. ಇದರಿಂದ, ದೂರುದಾರರು ಮಾನಸಿಕ ಹಿಂಸೆ ಅನುಭವಿಸುವಂತಾಗಿದ್ದು, ಅದಕ್ಕೆ ಪರಿಹಾರವಾಗಿ 5 ಸಾವಿರ ರೂ. ಹಾಗೂ ವ್ಯಾಜ್ಯದ ವೆಚ್ಚ 5 ಸಾವಿರ ರೂ. ಗಳನ್ನು ದೂರುದಾರರಿಗೆ ಪಾವತಿಸಬೇಕು ಎಂದು ಕಂಪನಿಗಳಿಗೆ ಆದೇಶಿಸಿದೆ.

ಜತೆಗೆ, ದೂರುದಾರರಿಗೆ ಮಾರಾಟ ಮಾಡಲಾಗಿರುವ ಬಳಸಲ್ಪಟ್ಟ ಲ್ಯಾಪ್‌ಟಾಪ್ ಹಿಂಪಡೆದು ಅದರ ಸಂಪೂರ್ಣ ಮೊತ್ತವನ್ನು ಖರೀದಿಸಿದ ದಿನಾಂಕದಿಂದ (2021ರ ಸೆ.26) ಅನ್ವಯವಾಗುವಂತೆ ವಾರ್ಷಿಕ ಶೇ.12 ಬಡ್ಡಿಯೊಂದಿಗೆ ದೂರುದಾರರಿಗೆ ಹಿಂದಿರುಗಿಸಬೇಕು ಎಂದೂ ಗ್ರಾಹಕರ ಆಯೋಗ ಆದೇಶ ಮಾಡಿದೆ.

ಮನೆಗೆ ಬಂದಿತ್ತು ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್:
2021ರ ಸೆ. 23ರಂದು ಫ್ಲಿಪ್‌ಕಾರ್ಟ್ ಮೂಲಕ ಎಚ್.ಪಿ ಪೆವಿಲಿಯನ್ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದ ದೂರುದಾರ ಪಂಕಜ್‌ವರ್ಮ, ಅದಕ್ಕಾಗಿ 66,965 ರೂ. ಪಾವತಿಸಿದ್ದರು. ಹರಿಯಾಣದ ಮಾರಾಟಗಾರರೊಬ್ಬರು ಕಳುಹಿಸಿದ್ದ ಲ್ಯಾಪ್‌ಟಾಪ್ ಸೆ.26ರಂದು ದೂರುದಾರರ ಕೈಸೇರಿತ್ತು. ಡೆಲಿವರಿ ಸಮಯದಲ್ಲಿ ಬಾಕ್ಸ್ ತೆಗೆದು ನೋಡಿದಾಗ ಉಪಯೋಗಿಸಿದ ಸ್ಥಿತಿಯಲ್ಲಿರುವುದು ಕಂಡುಬಂದಿತ್ತು. ವಾರಂಟಿ ಪ್ರಮಾಣಪತ್ರ ಪರಿಶೀಲಿಸಿದಾಗ ಅದಾಗಲೇ 36 ದಿನಗಳ‌ ಕಾಲ ಉಪಯೋಗಿಸಲ್ಪಟ್ಟಿರುವುದು ತಿಳಿದುಬಂದಿತ್ತು. ಲ್ಯಾಪ್‌ಟಾಪ್ ಹಿಂಪಡೆಯುವಂತೆ ದೂರುದಾರರು ಮಾಡಿದ ಮನವಿಯನ್ನು ಫ್ಲಿಪ್‌ಕಾರ್ಟ್ ತಿರಸ್ಕರಿಸಿತ್ತು. ಇದರಿಂದ, ಪಂಕಜ್ ವರ್ಮ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.

ಆರೋಪ ಅಲ್ಲಗಳೆದ ಫ್ಲಿಪ್‌ಕಾರ್ಟ್:
ದೂರಿನ ವಿಚಾರಣೆಗೆ ಹಾಜರಾಗಿದ್ದ ಫ್ಲಿಪ್‌ಕಾರ್ಟ್, ಪೂರೈಕೆದಾರರು ಹಾಗೂ ಗ್ರಾಹಕರ ನಡುವಿನ ಮಧ್ಯವರ್ತಿಯಷ್ಟೇ ಆಗಿದ್ದು, ಅದರಲ್ಲಿ ನಮ್ಮ ಹಸ್ತಕ್ಷೇಪವಿರುವುದಿಲ್ಲ. ಪೂರೈಕೆದಾರರು ಗ್ರಾಹಕರಿಗೆ ಒದಗಿಸುವ ಸೇವೆಗಳಿಗೆ ಸಂಬಂಧಿಸಿದ ಕೊರತೆಗಳಿಗೆ ನಾವು ಹೊಣೆಗಾರರಾಗುವುದಿಲ್ಲ. ದೂರುದಾರರು ಖರೀದಿಸಿದ ವಸ್ತುವನ್ನು ಪೂರೈಕೆದಾರರು ಒದಗಿಸಿದ್ದಾರೆಯೇ ಹೊರತು, ಫ್ಲಿಪ್‌ಕಾರ್ಟ್ ಮಾರಾಟ ಮಾಡಿಲ್ಲ. ದೂರುದಾರರು ಆರೋಪಿಸಿರುವಂತೆ ಫ್ಲಿಪ್‌ಕಾರ್ಟ್ ಸಂಸ್ಥೆಯ ವತಿಯಿಂದ ಯಾವುದೇ ಸೇವಾನ್ಯೂನತೆ ಘಟಿಸಿಲ್ಲ. ಆದ್ದರಿಂದ, ದೂರು ವಜಾಗೊಳಿಸಬೇಕು ಎಂದು ವಾದಿಸಿತ್ತು.

ಕಂಪನಿಗಳಿಂದ ಗ್ರಾಹಕನಿಗೆ ಮೋಸ ಸಾಬೀತು:
ಈ ವಾದವನ್ನು ತಳ್ಳಿಹಾಕಿರುವ ಗ್ರಾಹಕ ಆಯೋಗ, ದೂರುದಾರರು ಒದಗಿಸಿರುವ ವಾರಂಟಿ ಪ್ರಮಾಣಪತ್ರವು ಉಪಯೋಗಿಸಿದ ಲ್ಯಾಪ್‌ಟಾಪ್ ಮಾರಾಟ ಮಾಡಿರುವುದನ್ನು ಸ್ಪಷ್ಟಪಡಿಸುತ್ತದೆ. ಈ ವಿಚಾರವನ್ನು ಸಂಸ್ಥೆಯ ಗಮನಕ್ಕೆ ತಂದು, ಅದನ್ನು ಹಿಂಪಡೆಯುವಂತೆ ದೂರುದಾರರು ಹಲವು ಬಾರಿ ಮಾಡಿದ್ದರೂ ಆ ಮನವಿಯನ್ನು ತಿರಸ್ಕರಿಸಲಾಗಿದ್ದು, ಈ ಮೂಲಕ ದೂರುದಾರರಿಗೆ ವಂಚನೆ ಎಸಗಿರುವುದು ಸ್ಪಷ್ಟವಾಗಿದೆ. ಹೊಸ ಲ್ಯಾಪ್‌ಟಾಪ್‌ಗೆ ತಗಲುವ ಸಂಪೂರ್ಣ ಮೊತ್ತವನ್ನು ಪಡೆದು ಬಳಸಲ್ಪಟ್ಟ ಲ್ಯಾಪ್‌ಟಾಪ್ ಪೂರೈಸಲಾಗಿದೆ. ಗ್ರಾಹಕರ ಸಮಸ್ಯೆ ಬಗೆಹರಿಸಲು ಕಂಪನಿ ವಿಫಲವಾಗಿದ್ದು, ಇದನ್ನು ಸೇವಾನ್ಯೂನತೆ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

Related Articles

Comments (0)

Leave a Comment