- ಟ್ರಯಲ್ ಕೋರ್ಟ್
- ವ್ಯಕ್ತಿಪರಿಚಯ
- Like this post: 1
ವಕೀಲರ ಕಲ್ಯಾಣಕ್ಕೆ ಶ್ರಮಿಸಿದ ಕೆ.ಎನ್. ಪುಟ್ಟೇಗೌಡ; ನ್ಯಾ. ಅರವಿಂದ ಕುಮಾರ್ ಶ್ಲಾಘನೆ
- by Jagan Ramesh
- August 14, 2024
- 85 Views
ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ಅವರು ವಕೀಲರ ಕ್ಷೇಮಾಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಶ್ಲಾಘಿಸಿದರು.
ಬೆಂಗಳೂರು ವಕೀಲರ ಸಂಘದ ವತಿಯಿಂದ ಬುಧವಾರ ಸಿಟಿ ವಿಲ್ ಕೋರ್ಟ್ ಸಂಕೀರ್ಣದಲ್ಲಿ ಹಿರಿಯ ವಕೀಲ ಕೆ.ಎನ್. ಪುಟ್ಟೇಗೌಡ ಅವರಿಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಂಗಳೂರು ವಕೀಲರ ಸಂಘದ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಕೆ.ಎನ್. ಪುಟ್ಟೇಗೌಡ ಅವರು ಅಧಿಕಾರಾವಧಿಯಲ್ಲಿ ಸದಾ ಸಂಘದ ಕಾರ್ಯಚಟವಟಿಕೆಯಲ್ಲಿ ತೊಡಗಿಸಿಕೊಂಡು, ವಕೀಲರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದರು ಎಂದರು.
ಇದರಿಂದ, ವಕೀಲರ ಸಂಘ ಎಂದರೆ ಪುಟ್ಟೇಗೌಡ, ಪುಟ್ಟೇಗೌಡ ಎಂದರೆ ವಕೀಲರ ಸಂಘ ಎಂಬಂತಿತ್ತು. ಬೆಂಗಳೂರು ವಕೀಲರ ಸಹಕಾರ ಸಂಘವನ್ನು ಹುಟ್ಟುಹಾಕಿದವರಲ್ಲಿ ಪುಟ್ಟೇಗೌಡ ಸಹ ಒಬ್ಬರು. ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದರು. ಪುಟ್ಟೇಗೌಡ ಅವರು ನನಗೆ ಬಹಳ ಆತ್ಮೀಯರು ಎಂದು ನ್ಯಾಯಮೂರ್ತಿ ಅರವಿಂದ ಕುಮಾರ್ ಸ್ಮರಿಸಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಮಾತನಾಡಿ, ಕೆ.ಎನ್.ಪುಟ್ಟೇಗೌಡ ಅವರು ವಕೀಲ ಸಮುದಾಯಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಅಧಿಕಾರಾವಧಿಯಲ್ಲಿ ಸಿಟಿ ಸಿವಿಲ್ ಕೋರ್ಟ್ ಹಾಗೂ ಹೈಕೋರ್ಟ್ನಲ್ಲಿ ವಕೀಲರಿಗಾಗಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರು ಎಂದರು.
ಶಾಸಕ ಸುರೇಶ್ ಕುಮಾರ್, ನಾನು ಮತ್ತು ಕೆ.ಎನ್. ಪುಟ್ಟೇಗೌಡ ಅವರು ಒಂದೇ ದಿನ ವಕೀಲ ವೃತ್ತಿಗೆ ನೋಂದಣಿಯಾಗಿದ್ದೆವು. ನಾನು ರಾಜಕೀಯದತ್ತ ಮುಖ ಮಾಡಿದೆ, ಪುಟ್ಟೇಗೌಡ ಅವರು ವಕೀಲಿಕೆ ಮುಂದುವರಿಸಿದರು. ಟಿ.ಎನ್. ಸೀತಾರಾಂ, ಬಿ.ಎಲ್. ಶಂಕರ್ , ಪುಟ್ಟೇಗೌಡ ಎಲ್ಲರೂ ನನ್ನ ಗೆಳೆಯರು. ವಾರದಲ್ಲಿ ಒಂದು ದಿನ ಭೇಟಿಯಾಗಿ ಹಲವಾರು ವಿಚಾರಗಳ ಕುರಿತು ಚರ್ಚಿಸುತ್ತಿದ್ದೆವು ಎಂದು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಕೆ.ಎನ್.ಪುಟ್ಟೇಗೌಡ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ವಿ. ರವಿ, ಖಜಾಂಚಿ ಎಚ್ಎಂಟಿ ಹರೀಶ್, ಮಾಜಿ ಸಭಾಪತಿ ಬಿ.ಎಲ್. ಶಂಕರ್, ನಿರ್ದೇಶಕ ಟಿ.ಎನ್. ಸೀತಾರಾಂ ಮತ್ತಿತರರು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.
Comments (0)