ರಸ್ತೆ ಗುಂಡಿ ಮುಚ್ಚಲು ಕೈಗೊಂಡ ಕ್ರಮಗಳೇನು? ಸಮಗ್ರ ಪ್ರಮಾಣಪತ್ರ ಸಲ್ಲಿಸಲು ಜಿಬಿಎಗೆ ಹೈಕೋರ್ಟ್ ನಿರ್ದೇಶನ
- by LegalSamachar
- August 14, 2026
- 6 Views
ಬೆಂಗಳೂರು: ನಗರದಲ್ಲಿ ಈವರೆಗೆ ಎಷ್ಟು ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ, ಅವುಗಳಲ್ಲಿ ಎಷ್ಟು ಗುಂಡಿಗಳನ್ನು ಮುಚ್ಚಲಾಗಿದೆ, ರಸ್ತೆ ಗುಂಡಿಗಳನ್ನು ಮುಚ್ಚಲು ಕೈಗೊಂಡಿರುವ ಕ್ರಮಗಳೇನು ಎಂಬ ಕುರಿತ ಸಮಗ್ರ ವಿವರಗಳನ್ನು ಒಳಗೊಂಡ ಪ್ರಮಾಣಪತ್ರ ಸಲ್ಲಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಹೈಕೋರ್ಟ್ ನಿರ್ದೇಶಿಸಿದೆ.
ಬೆಂಗಳೂರಿನ ರಸ್ತೆಗಳ ದುಸ್ಥಿತಿಯ ಕುರಿತು 2015ರಲ್ಲಿ ಕೋರಮಂಗಲದ ವಿಜಯನ್ ಮೆನನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ರಸ್ತೆ ದುರಸ್ತಿ ಕಾರ್ಯವಿಧಾನವನ್ನು ಸೂಚಿಸುವ ಪ್ರಮಾಣಪತ್ರ ಸಲ್ಲಿಸುವಂತೆ ಜಿಬಿಎಗೆ ಸೂಚಿಸಿತಲ್ಲದೆ, ಪ್ರಮಾಣಪತ್ರದಲ್ಲಿ ಗುಂಡಿಗಳ ಸಮಸ್ಯೆ ಎದುರಿಸಲು ಪ್ರತಿ ವರ್ಷ ಅಳವಡಿಸಿಕೊಳ್ಳುವ ಕಾರ್ಯವಿಧಾನ, ಹದಗೆಟ್ಟ ರಸ್ತೆಗಳನ್ನು ಸರಿಪಡಿಸಲು ಮತ್ತು ಅಂಥ ರಸ್ತೆಗಳ ಪ್ರಮಾಣ ತಗ್ಗಿಸಲು ಕೈಗೊಂಡ ಕ್ರಮಗಳು ಮತ್ತು ಗುಂಡಿಗಳನ್ನು ಗುರುತಿಸಿ ದುರಸ್ತಿ ಮಾಡಿದ ಸಮಗ್ರ ವಿವರಗಳನ್ನು ಒಳಗೊಂಡಿರುಬೇಕು ಎಂದು ಆದೇಶಿಸಿತು.
ಇದೇ ವೇಳೆ, ರಸ್ತೆ ಗುಂಡಿಗಳಿಂದ ಉಂಟಾದ ಸಾವು, ನೋವುಗಳಿಗೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ಗಳ ಸಂಖ್ಯೆಯ ಕುರಿತು ಮಾಹಿತಿ ಪಡೆದು ಒದಗಿಸುವಂತೆ ಸರ್ಕಾರದ ಪರ ವಕೀಲರಿಗೆ ನ್ಯಾಯಪೀಠ ಸೂಚಿಸಿದೆ.
ಇದಕ್ಕೂ ಮುನ್ನ ಜಿಬಿಎ ಪರ ವಕೀಲರು ವಾದ ಮಂಡಿಸಿ, ಏಪ್ರಿಲ್‌ನಿಂದ ಈವರೆಗೆ 10,202 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ರಸ್ತೆಗುಂಡಿ ಮುಚ್ಚುವ ಕಾರ್ಯ ಈಗಲೂ ನಡೆಯುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ರಸ್ತೆ ಗುಂಡಿಗಳನ್ನು ಮುಚ್ಚಲು ಎಷ್ಟು ಸಮಯದ ಅಗತ್ಯವಿದೆ ಎಂಬ ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಿದ ವಕೀಲರು, ಅದು ನಿರಂತರ ಪ್ರಕ್ರಿಯೆ ಎಂದು ತಿಳಿಸಿದರು.
Related Articles
Thank you for your comment. It is awaiting moderation.


Comments (0)