- ಗ್ರಾಹಕ ಜಾಗೃತಿ
- ಲೇಖನ/ಅಂಕಣ
- Like this post: 7
ಗ್ರಾಹಕ ಸಂರಕ್ಷಣಾ ಕಾಯ್ದೆ – ವಂಚನೆ ತಡೆಗೆ ಸರಳಸೂತ್ರ
- by LegalSamachar
- August 13, 2024
- 102 Views
ಕೆ.ಅನಿತಾ ಶಿವಕುಮಾರ್
ಸದಸ್ಯರು
ಬೆಂಗಳೂರು ನಗರ ಜಿಲ್ಲಾ ಪ್ರಧಾನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ
ಕಾವೇರಿ ಭವನ, ಬೆಂಗಳೂರು
ಪ್ರತಿ ಮನುಷ್ಯ ದೈನಂದಿನ ಚಟುವಟಿಕೆಯಲ್ಲಿ ಒಂದಲ್ಲ ಒಂದು ರೀತಿ ಗ್ರಾಹಕನಾಗಲೇಬೇಕು ಎಂಬುದನ್ನು ಮತ್ತು ಮಾರಾಟಗಾರರಿಂದ ಅಥವಾ ಸೇವಾ ಕೇಂದ್ರಗಳಿಂದ ದಿನೇದಿನೆ ವಂಚನೆ ನಡೆಯುತ್ತಿರುವದನ್ನೂ ಸಹ ಅಲ್ಲಗಳೆಯುವಂತಿಲ್ಲ. ದೋಷಪೂರಿತ ವಸ್ತುಗಳ ಮಾರಾಟ, ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಪಡೆಯುವುದು, ವಾರಂಟಿ ಸಮಯದಲ್ಲೂ ಸೇವೆ ಒದಗಿಸದಿರುವುದು, ಗಡುವು ದಿನಾಂಕ ಮೀರಿದ ವಸ್ತುಗಳ ಮಾರಾಟ ಮಾಡುವುದು, ಉಚಿತ ವಸ್ತು ನೀಡುವ ಹೆಸರಿನಲ್ಲಿ ಜನರನ್ನು ವಂಚಿಸುವುದು ಈ ರೀತಿಯ ಅನ್ಯಾಯ, ಮೋಸ ನಡೆಯುತ್ತಲೇ ಇರುತ್ತದೆ.
ಇಂತಹ ಮೋಸಗಳನ್ನು ಪ್ರತಿಭಟಿಸಬಹುದು ಹಾಗೂ ಅವುಗಳ ವಿರುದ್ದ ಕಾನೂನು ಹೋರಾಟ ನಡೆಸಬಹುದು ಎನ್ನುವುದು ಗ್ರಾಹಕನಿಗೆ ತಿಳಿದಿರಲಿಲ್ಲ. ಆದ್ದರಿಂದ, ಗ್ರಾಹಕರಿಗೆ ಆಗಬಹುದಾದ ದಿನನಿತ್ಯದ ವಂಚನೆಯನ್ನು ತಡೆಯುವುದಕ್ಕಾಗಿ ದೇಶದಲ್ಲಿ ಗ್ರಾಹಕ ರಕ್ಷಣಾ ಕಾಯ್ದೆಯನ್ನು 1986ರಲ್ಲಿ ಜಾರಿಗೆ ತರಲಾಯಿತು. ಜಾನ್ ಕೆನಡಿಯವರು 1962ರ ಮಾರ್ಚ್ 15ರಂದು ಮೊದಲ ಬಾರಿ ಅಮೇರಿಕಾದ ಸೆನೆಟ್ನಲ್ಲಿ ಭಾಷಣ ಮಾಡುವಾಗ ಗ್ರಾಹಕರ ಹಕ್ಕುಗಳನ್ನು ಕಾಪಾಡುವ ಬಗ್ಗೆ ಮಾತನಾಡಿದ್ದರು. ಅವರ ಮಾತುಗಳಲ್ಲಿ ಮುಖ್ಯವಾಗಿ ಮಾಹಿತಿಯ ಹಕ್ಕು, ಸುರಕ್ಷತೆಯ ಹಕ್ಕು, ಆಯ್ಕೆಯ ಹಕ್ಕು ಮತ್ತು ದೂರನ್ನು ನೀಡುವ ಹಕ್ಕುಗಳ ಕುರಿತು ಪ್ರಸ್ತಾಪಿಸದ್ದರು ಎಂಬ ಕಾರಣಕ್ಕಾಗಿ, ಆ ನಾಲ್ಕು ಹಕ್ಕುಗಳನ್ನು ಆಧಾರವಾಗಿರಿಸಿಕೊಂಡು ಅಮೇರಿಕಾದಲ್ಲಿ ಕಾನೂನು ರೂಪಿಸಲಾಗಿತ್ತು.
ಇದರ ನೆನಪಿಗಾಗಿ ಪ್ರತಿ ವರ್ಷ ಪ್ರಪಂಚದಾದ್ಯಂತ ಮಾರ್ಚ್ 15ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನವೆಂದೂ, ಡಿಸೆಂಬರ್ 24ರಂದು ಭಾರತದಲ್ಲಿ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವೆಂದೂ ಆಚರಿಸಲಾಗುತ್ತದೆ. ಈಗಿನ ಸರ್ಕಾರ 1986ರ ಗ್ರಾಹಕರ ರಕ್ಷಣಾ ಕಾಯ್ದೆಯನ್ನು ಮರುರೂಪಿಸಿ ಜುಲೈ 2020ರಿಂದ ಗ್ರಾಹಕ ಸಂರಕ್ಷಣಾ ಕಾಯ್ದೆ-2019ರನ್ನು ಜಾರಿಗೆ ತಂದಿತು.
ಆಯೋಗಗಳ ರಚನೆ ಮತ್ತು ವ್ಯಾಪ್ತಿ:
ಫ್ರತಿ ಜಿಲ್ಲೆಗೂ ಒಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳು ಸ್ಥಾಪಿತಗೊಂಡಿವೆ. ಗ್ರಾಹಕನಾಗಲೀ, ವಸ್ತು ಪಡೆದ ಫಲಾನಿಭವಿಯಾಗಲೀ, ಅಪ್ರಾಪ್ತ ಗ್ರಾಹಕನಾದಲ್ಲಿ ಅವರ ಪೋಷಕರು, ಗ್ರಾಹಕನ ನಿಧನದ ನಂತರ ಅವನ/ಳ ವಾರಸ್ಸುದಾರರು ಪ್ರಕರಣವನ್ನು ಆಯೋಗದಲ್ಲಿ ದಾಖಲಿಸಲು ಅವಕಾಶವಿದೆ. ಆ ಪ್ರಕಾರ ಪ್ರತಿ ಗ್ರಾಹಕನೂ ತನ್ನ ಸಮಸ್ಯೆಗೆ/ ತನಗಾದ ವಂಚನೆಗೆ ಸೂಕ್ತ ಗ್ರಾಹಕರ ಆಯೋಗದಿಂದ ನ್ಯಾಯ ಪಡೆದುಕೊಳ್ಳಬಹುದಾಗಿದೆ.
- ಜಿಲ್ಲಾ ಗ್ರಾಹಕರ ಆಯೋಗದ ವ್ಯಾಪ್ತಿ ರೂ. 50 ಲಕ್ಷಕ್ಕಿಂತ ಕಡಿಮೆ
- ರಾಜ್ಯ ಗ್ರಾಹಕರ ಆಯೋಗದ ವ್ಯಾಪ್ತಿ ರೂ. 50 ಲಕ್ಷಕ್ಕಿಂತ ಮೇಲ್ಪಟ್ಟು ಮತ್ತು ರೂ. 2 ಕೋಟಿಗಿಂತ ಕಡಿಮೆ
- ರಾಷ್ಟ್ರೀಯ ಗ್ರಾಹಕರ ಆಯೋಗದ ವ್ಯಾಪ್ತಿ ರೂ.2 ಕೋಟಿಗೂ ಮೇಲ್ಪಟ್ಟು
ಆನ್ಲೈನ್ ವಂಚನೆ, ಆಹಾರ ಕಲಬೆರಕೆಗೂ ಶಿಕ್ಷೆ:
ಸದ್ಯದ ಪರಿಸ್ಥಿತಿಯಲ್ಲಿ ಗ್ರಾಹಕರು ಹೆಚ್ಚಾಗಿ ಆನ್ಲೈನ್ನಲ್ಲಿ ಮತ್ತು ಟೆಲಿಶಾಪಿಂಗ್ನಲ್ಲಿ ವಸ್ತುಗಳನ್ನು ಖರೀದಿಸುವ ಕಾರಣ, 2019ರ ಗ್ರಾಹಕರ ಕಾಯ್ದೆಯಲ್ಲಿ ಆನ್ಲೈನ್ ಮತ್ತು ಟೆಲಿಶಾಪಿಂಗ್ ಕಂಪನಿಗಳನ್ನು ಮೊದಲ ಬಾರಿಗೆ ಸೇರಿಸಲಾಗಿದೆ. ಗ್ರಾಹಕರು ದೇಶದ ಯಾವುದೇ ಗ್ರಾಹಕ ನ್ಯಾಯಾಲಯದಲ್ಲಿ ತಮ್ಮ ದೂರು ದಾಖಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆಹಾರ ಮತ್ತು ಪಾನೀಯಗಳಲ್ಲಿ ಮಾಡುವ ಕಲಬೆರಕೆಗಾಗಿ ಆ ಕಂಪನಿಗಳಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವುದನ್ನು ಅಳವಡಿಸಲಾಗಿದೆ.
ಸರಕು ಅಥವಾ ಸೇವೆಯನ್ನು ಪಡೆಯಲು ಪ್ರತಿಯೊಬ್ಬ ಗ್ರಾಹಕನೂ ಅದಕ್ಕೆ ಪೂರ್ತಿ ಹಣ ಅಥವಾ ಅಲ್ಪ ಹಣವನ್ನಾದರೂ ಪಾವತಿಸಬೇಕು ಎಂಬುದು ಕಡ್ಡಾಯವಾಗಿರುತ್ತದೆ. ಆದರೆ, ಆ ಗ್ರಾಹಕ ವಸ್ತುವನ್ನು ಮರು ಮಾರಾಟ ಮಾಡಲು ಖರೀದಿಸಿರಬಾರದು ಎಂಬುದು ಅಷ್ಟೇ ಮುಖ್ಯವಾದ ಅಂಶವಾಗಿರುತ್ತದೆ. ಅದರಂತೆ, ವಸ್ತು ಮಾರಾಟ ಮಾಡಿದ ಅಥವಾ ಸೇವೆಯನ್ನು ನೀಡಿದ ವ್ಯಕ್ತಿಗೆ ತಾನು ಮಾರಿದ ವಸ್ತು ಅಥವಾ ನೀಡಿದ ಸೇವೆಯಲ್ಲಿರುವ ನ್ಯೂನ್ಯತೆಯ ಬಗ್ಗೆ ಮಾಹಿತಿ ನೀಡಿ, ಅವನಿಗೆ ಸರಿಪಡಿಸಿಕೊಡುವ ಅವಕಾಶವನ್ನು ನೀಡುವುದು ಕೂಡ ಕಡ್ಡಾಯವಾಗಿರುತ್ತದೆ.
ಆಧುನಿಕ ಯುಗದಲ್ಲಿ, ಜೀವನ ಶೈಲಿಯ ಬದಲಾವಣೆಯೊಂದಿಗೆ ವೈಜ್ಞಾನಿಕ/ತಂತ್ರಜ್ಞಾನದ ಉಪಕರಣಗಳ ಬಳಕೆ ಕೂಡ ಹೆಚ್ಚುತ್ತಿರುವುದನ್ನು ನಾವೆಲ್ಲ ಗಮನಿಸುತ್ತಿದ್ದೇವೆ. ಉದಾಹರಣೆಗೆ ಮೊಬೈಲ್ ಬಳಕೆಯು ಹೆಚ್ಚುತ್ತಿರುವುದು, ಇ-ಕಾಮರ್ಸ್ನಂತಹ ವ್ಯಾಪಾರ ವೇದಿಕೆಯಿಂದ ಜನ ಮಾರುಹೋಗಿದ್ದಾರೆ. ಅಷ್ಟೇ ಅಲ್ಲದೇ ತಮ್ಮೆಲ್ಲ ಜೀವನದಲ್ಲಿ ಹಣಕಾಸಿನ ವ್ಯವಹಾರ ಕೂಡ ಮೊಬೈಲ್ ಫೋನ್ ಮುಖಾಂತರ ಮಾಡಿ ಅದರಲ್ಲೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂತಹ ಪ್ರಕರಣಗಳು ಕೂಡ ಗ್ರಾಹಕರ ಆಯೋಗದಲ್ಲಿ ದಾಖಲಾಗಿ, ವಿಚಾರಣೆ ಮುಖಾಂತರ ಇತ್ಯರ್ಥ ಮಾಡಲಾಗುತ್ತಿದೆ.
ಸರಳ ನ್ಯಾಯದಾನ ವ್ಯವಸ್ಥೆ:
ನ್ಯಾಯಾಲಯಗಳ ಮೇಲೆ ಹೊರೆ ಆಗದ ಹಾಗೆ ಮತ್ತು ಗ್ರಾಹಕರಿಗೆ ಕೂಡಲೇ ನ್ಯಾಯ ಸಿಗಲಿ ಎನ್ನುವ ಉದ್ದೇಶದಿಂದ ಗ್ರಾಹಕ ಮಧ್ಯಸ್ಥಿಕಾ ಘಟಕ (ಕನ್ಸ್ಯೂಮರ್ ಮೀಡಿಯೇಷನ್ ಸೆಲ್) ಗಳನ್ನು ರಚನೆ ಮಾಡಿ, ಪರಸ್ಪರ ಒಪ್ಪಿಗೆಯೊಂದಿಗೆ ಎರಡೂ ಕಡೆಯವರು ಮೀಡಿಯೇಷನ್ ಮುಖಾಂತರ ಕೂಡಲೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ರೂ. 5 ಲಕ್ಷಗಳಿಗಿಂತ ಕಡಿಮೆ ಇರುವ ಪರಿಹಾರಕ್ಕೆ ಗ್ರಾಹಕರು ಪ್ರಕರಣ ದಾಖಲಿಸಲು ಯಾವುದೇ ವೆಚ್ಚ ಭರಿಸುವಂತಿಲ್ಲ. ಅತೀ ಕಡಿಮೆ ವೆಚ್ಚದಲ್ಲಿ ನ್ಯಾಯ ಪಡೆಯಬಹುದಾದ ವ್ಯವಸ್ಥೆ ಇದರಲ್ಲಿದೆ. ಗ್ರಾಹಕರ ಆಯೋಗದಲ್ಲಿ ಪ್ರಕರಣಗಳನ್ನು ದಾಖಲಿಸಲು ವಕೀಲರನ್ನು ನೇಮಿಸಿಕೊಳ್ಳಬೇಕೆಂಬ ಅನಿವಾರ್ಯತೆ ಇಲ್ಲ. ಗ್ರಾಹಕರು ಖುದ್ದಾಗಿ ಪ್ರಕರಣ ನಡೆಸಬಹುದಾದ ಸುಲಭ ವಿಧಾನವನ್ನು ಇದು ಒಳಗೊಂಡಿದೆ.
ದಾರಿ ತಪ್ಪಿಸುವವರ ವಿರುದ್ಧವೂ ಕ್ರಮಕ್ಕೆ ಅವಕಾಶ:
2019ರ ಗ್ರಾಹಕ ಸಂರಕ್ಷಣಾ ಕಾನೂನಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ಮಾದರಿಯ ಪ್ರಕರಣಗಳನ್ನು ದಾಖಲಿಸಲು ಹೊಸ ರೀತಿಯ ಪ್ರಾಧಿಕಾರ ರಚನೆಯಾಗಿದೆ. ಈ ಕಾನೂನಿನಡಿಯಲ್ಲಿ ಗ್ರಾಹಕರಿಗೆ ದಾರಿ ತಪ್ಪಿಸುವ ಜಾಹಿರಾತುಗಳನ್ನು ನೀಡುವ ಕಂಪನಿಗಳಷ್ಟೇ ಅಲ್ಲದೇ, ಅದನ್ನು ಪ್ರಚಾರ ಮಾಡುವ ಚಿತ್ರರಂಗ, ಕ್ರೀಡಾರಂಗದ ಹೆಸರಾಂತ ವ್ಯಕ್ತಿಗಳ ವಿರುದ್ದ ಸಹ ಕ್ರಮಕೈಗೊಳ್ಳುವ ಹಾಗೂ ಶಿಕ್ಷಿಸುವ ಅವಕಾಶವಿರುವುದು ವಿಶೇಷವಾಗಿದೆ. ಇದರ ಮುಖ್ಯ ಉದ್ದೇಶ, ಕೇವಲ ಹಣಕ್ಕಾಗಿ ಜಾಹೀರಾತು ನೀಡುವುದಲ್ಲದೇ, ರಾಯಭಾರಿ/ಜಾಹಿರಾತಿಗಾಗಿ ಆಗುವ ಒಪ್ಪಂದ ಆಗುವ ಮುನ್ನ ವಸ್ತುವಿನ ಬಗ್ಗೆ ಸಂಪೂರ್ಣ ಮಾಹಿತಿ ಹೊಂದುವುದು ಹಾಗೂ ಅದರಿಂದೇನಾದರೂ ದುಷ್ಪರಿಣಾಮ ಆದಲ್ಲಿ ಜಾಹೀರಾತು ನೀಡಿದವರೂ ಕೂಡ ಜವಾಬ್ದಾರಿಯಾಗುವ ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ.
ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಸ್ಥಾಪನೆ:
ಕಾನೂನಿನ ಅಡಿಯಲ್ಲಿ ಈ ಎಲ್ಲ ಅವಕಾಶ ನೀಡಿರುವುದು ಗ್ರಾಹಕರ ಹಿತದೃಷ್ಟಿಯಿಂದ ಮಾತ್ರವಲ್ಲದೇ, ವಂಚನೆಯನ್ನೇ ಆದಾಯ ಮಾಡಿಕೊಂಡಿರುವ ಕಂಪನಿಗಳ ವಿರುದ್ದವಾಗಿದೆ. ಇದರೊಂದಿಗೆ ಯಾವುದೇ ಒಬ್ಬ ವಸ್ತು ತಯಾರಿಕೆದಾರ ಅಥವಾ ಸೇವಾ ಸಂಸ್ಥೆ ಅನುಚಿತ ವ್ಯಾಪಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದರೆ, ಅವರ ವಿರುದ್ಧ ಕೂಡ ಕಾನೂನು ರೀತಿ ಕ್ರಮವನ್ನು ಕೈಗೊಳ್ಳಲು ಹಾಗೂ ಅದರಿಂದ ಗ್ರಾಹಕರಿಗಾಗುವ ವಂಚನೆಯನ್ನು ತಪ್ಪಿಸಲು ‘ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ’ವನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕಾರ ನವದೆಹಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ, ದೇಶದ ಹಲವೆಡೆ ತನ್ನ ಪ್ರಾದೇಶಿಕ ಕಛೇರಿಗಳನ್ನು ಹೊಂದಿದೆ. ತನಿಖಾದಳವು ರಾಷ್ಟ್ರೀಯ ಗ್ರಾಹಕರ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಕೆಲಸ ನಿರ್ವಹಿಸುತ್ತಿದೆ. ತನಿಖಾದಳದ ವರದಿಯ ಆಧಾರದ ಮೇರೆಗೆ ತಪ್ಪಿತಸ್ಥ ಕಂಪನಿ ವಿರುದ್ದ ಕ್ರಮ, ಶಿಕ್ಷೆ ಮತ್ತು ದಂಡ ಹೇರುವ ಅವಕಾಶವಿದೆ. ಅಲ್ಲದೇ, ಈ ರೀತಿಯ ಪ್ರಕರಣಗಳನ್ನು ಆಯಾ ಜಿಲ್ಲಾಧಿಕಾರಿಯವರು ಸ್ವೀಕರಿಸಿ, ತನಿಖೆಯಲ್ಲಿ ಕಾರ್ಯನಿರತರಾಗಲು ಕಾನೂನಿನಡಿಯಲ್ಲಿ ಅಧಿಕಾರ ನೀಡಿದೆ.
ಗ್ರಾಹಕ ಕೋರ್ಟ್ಗಳಲ್ಲಿ ಆನ್ಲೈನ್ ವ್ಯವಸ್ಥೆ:
ಯುವ ಪೀಳಿಗೆಗೆ ಹಾಗೂ ಆಧುನಿಕ ಕಾಲಕ್ಕೆ ತಕ್ಕ ಹಾಗೆ ಬದಲಾವಣೆಯ ಉದ್ದೇಶದಿಂದ ನ್ಯಾಯಾಲಯದಲ್ಲಿ ಪ್ರಕರಣ ದಾಖಲೆ ಮತ್ತು ನಡುವಳಿಗಳು ಕೂಡ ಆನ್ಲೈನ್ನಲ್ಲಿ ನಡೆದಿರುವುದು ಜನರಿಗೆ ತುಂಬಾ ಅನುಕೂಲವಾದ ಸಂಗತಿ. ಇ-ಫೈಲಿಂಗ್, ಹಿಯರಿಂಗ್ ಆನ್ ವೀಡಿಯೋ ಕಾನ್ಫರೆನ್ಸಿಂಗ್, ಆನ್ಲೈನ್ ಮೀಡಿಯೇಷನ್ ಮುಖಾಂತರ ಪ್ರಕರಣ ದಾಖಲೆಯಿಂದ ಹಿಡಿದು ಪ್ರಕರಣದ ಇತ್ಯರ್ಥದವರೆಗೆ ಎಲ್ಲವೂ ಎಲೆಕ್ಟ್ರಾನಿಕ್ ಉಪಕರಣದ ಮುಖಾಂತರ ಸೌಲಭ್ಯ ನೀಡಲಾಗಿದೆ. ಅದನ್ನು ಹಿರಿಯ ಗ್ರಾಹಕರಿಗಿಂತ ಯುವ ಗ್ರಾಹಕರು ಅಂದರೆ ಯುವಕ/ಯುವತಿಯರು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ನನ್ನದು. ಮುಖ್ಯ ಕಾರಣವೇನೆಂದರೆ, ‘ಸಮಯವೇ ಹಣ’ ಎಂದು ಭಾವಿಸಿರುವ ಯುವ ಜನಾಂಗ ಆಯೋಗಕ್ಕೆ ಹೋಗಿ ಪ್ರಕರಣ ದಾಖಲಿಸುವುದು, ಪ್ರತಿ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಲು ಸಮಯದ ಅಭಾವವನ್ನು ಮನದಲ್ಲಿಟ್ಟುಕೊಂಡು ಆಗಿರುವ ಅನ್ಯಾಯವನ್ನು ಸಹಿಸಿಕೊಳ್ಳದೇ, ಮೊಬೈಲ್ ಬಳಕೆ ಮುಖಾಂತರ ಪ್ರಕರಣ ದಾಖಲಿಸಿ ನ್ಯಾಯಪಡೆಯುವುದು ಇದರ ಮುಖ್ಯ ಉದ್ದೇಶ. ಆದ ಅನ್ಯಾಯವನ್ನು ಸಹಿಸಿಕೊಂಡಲ್ಲಿ ವ್ಯಾಪಾರಸ್ಥರಿಗೆ, ಸೇವಾ ಸಂಸ್ಥೆಗಳಿಗೆ ಅದರಿಂದ ಅನುಚಿತ ವ್ಯಾಪಾರ ಪದ್ದತಿಯನ್ನು ರೂಢಿಸಿಕೊಳ್ಳುತ್ತಾರೆ ಹೊರತು ನ್ಯಾಯದ ಹಾದಿಯ ಪರಿಚಯವಾಗುವುದಿಲ್ಲ.
ಆದ್ದರಿಂದ, ನ್ಯಾಯಾಲಯಗಳಲ್ಲಿ ಇ-ಫೈಲಿಂಗ್ನಂತಹ ಅವಕಾಶವನ್ನು ಬಳಿಸಿಕೊಂಡು ನ್ಯಾಯ ಪಡೆಯಬಹುದು ಎಂಬ ಅಂಶ ಹೆಚ್ಚಾಗಿ ಕೋವಿಡ್ ಸಂದರ್ಭದಲ್ಲಿ ಪರಿಚಯಿಸಿದಂತಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಹಿರಿಯ ಗ್ರಾಹಕರೂ ಕೂಡ ಆನ್ಲೈನ್ನಲ್ಲಿ ತಮ್ಮ ವ್ಯವಹಾರಗಳನ್ನು ಮಾಡಲು ಕಲಿತಂತಾಗಿದೆ. ಸಾಕಷ್ಟು ಸೌಲಭ್ಯಗಳನ್ನು ಕಾನೂನಿನಲ್ಲಿ ಅವಕಾಶ ನೀಡಿದೆ. ಆದರೆ, ಅದರ ಸದುಪಯೋಗ ಪಡೆದು ತಮಗಾದ ಅನ್ಯಾಯವನ್ನು ಸರಿಪಡಿಸಿಕೊಳ್ಳುವುದರ ಜೊತೆಗೆ ಮೋಸಮಾಡುವ ಮಾರಾಟಗಾರರಿಗೆ/ ಉತ್ಪಾದಕರಿಗೆ ಗ್ರಾಹಕರ ಹಕ್ಕಿನ ಕುರಿತು ಪರಿಚಯಿಸಿ, ಉತ್ತಮ ವ್ಯಾಪಾರ ಪದ್ದತಿಯನ್ನು ರೂಡಿಸಿಕೊಳ್ಳುವುದಾದರೆ, ಪ್ರತಿಯೊಬ್ಬ ಗ್ರಾಹಕನ ಹಕ್ಕನ್ನು ಗೌರವಿಸಿದಂತಾಗುತ್ತದೆ.
Comments (0)