ರಾಜ್ಯ ಸರ್ಕಾರಗಳು ಎಸ್‌ಸಿ, ಎಸ್‌ಟಿ ಒಳಮೀಸಲಾತಿ ನೀಡಬಹುದು; ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ (ಎಸ್‌ಸಿ/ಎಸ್‌ಟಿ) ಪ್ರತ್ಯೇಕ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್‌ನ ಈ ಐತಿಹಾಸಿಕ ತೀರ್ಪಿನಿಂದ ಈಗಾಗಲೇ ಕರ್ನಾಟಕವೂ ಸೇರಿ ಹಲವಾರು ರಾಜ್ಯಗಳಲ್ಲಿ ಒಳಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಗಳು ಹೊಸ ತಿರುವು ಪಡೆದುಕೊಳ್ಳುವ ಜತೆಗೆ, ಮೀಸಲಾತಿಯಲ್ಲಿ ಸಾಕಷ್ಟು ಬದಲಾವಣೆಗೂ ಕಾರಣವಾಗುವ ಸಾಧ್ಯತೆಯಿದೆ.

ಎಸ್‌ಸಿ, ಎಸ್‌ಟಿಗಳಲ್ಲೇ ಹೆಚ್ಚು ದಮನಿತರನ್ನು ಗುರುತಿಸಿ ಅವರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರಗಳು ಈ ಕ್ರಮ ಕೈಗೊಳ್ಳಬಹುದು ಎಂದು 140 ಪುಟಗಳ ತೀರ್ಪಿನಲ್ಲಿ ಹೇಳಲಾಗಿದೆ. ಏಳು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠದ ನಾಲ್ವರು ನ್ಯಾಯಮೂರ್ತಿಗಳು, ಎಸ್‌ಸಿ, ಎಸ್‌ಟಿ ಮೀಸಲಿನಲ್ಲಿ ಕೆನೆಪದರ ನೀತಿ ಜಾರಿಗೆ ತರಬೇಕು. ಅಂದರೆ, ಮೀಸಲು ಪಡೆದ ನಿರ್ದಿಷ್ಟ ಸಮುದಾಯದಲ್ಲಿ ಈಗಾಗಲೇ ಮುಂದುವರಿದು ಸಬಲೀಕರಣಗೊಂಡಿರುವವರನ್ನು ಮೀಸಲಿನಿಂದ ಹೊರಗಿಡಲು ರಾಜ್ಯಗಳು ನೀತಿ ರೂಪಿಸಬೇಕು ಎಂದು ಹೇಳಿದ್ದಾರೆ.

6:1 ರ‌ ಅನುಪಾತದ ತೀರ್ಪು:
ರಾಜ್ಯಗಳಿಗೆ ಎಸ್‌ಸಿ, ಎಸ್‌ಟಿ ಮೀಸಲಿನಲ್ಲಿ ಒಳಮೀಸಲು ನೀಡುವ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು 6:1ರ ಅನುಪಾತದಲ್ಲಿದೆ. ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಮಿಶ್ರಾ ಇಬ್ಬರೂ ಸೇರಿ ಒಂದು ತೀರ್ಪು ಹಾಗೂ ನಾಲ್ವರು ನ್ಯಾಯಮೂರ್ತಿಗಳು ತಲಾ ಒಂದು ತೀರ್ಪು ನೀಡಿದ್ದು, ಆರು ನ್ಯಾಯಮೂರ್ತಿಗಳ ತೀರ್ಪುಗಳು ಒಳಮೀಸಲಾತಿ ಪರವಾಗಿದೆ. ನ್ಯಾಯಮೂರ್ತಿ ಬೇಲಾ ತ್ರಿವೇದಿ ಮಾತ್ರ ರಾಜ್ಯಗಳಿಗೆ ಒಳಮೀಸಲು ನೀಡುವ ಅಧಿಕಾರವಿಲ್ಲ ಎಂದು ತೀರ್ಪು ಬರೆದಿದ್ದಾರೆ. ಇನ್ನು ನಾಲ್ವರು ನ್ಯಾಯಮೂರ್ತಿಗಳು ಕೆನೆಪದರ ನೀತಿ ಜಾರಿಗೆ ತರಬೇಕು ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

20 ವರ್ಷಗಳ ಹಿಂದಿನ ತೀರ್ಪು ರದ್ದು:
2004ರಲ್ಲಿ ಇ.ವಿ.ಚೆನ್ನಯ್ಯ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವಿನ ಪ್ರಕರಣದಲ್ಲಿ, ಶತಮಾನಗಳ ಕಾಲ ತಾರತಮ್ಯ ಹಾಗೂ ಅವಮಾನ ಎದುರಿಸಿದ ಎಲ್ಲ ಎಸ್‌ಸಿ, ಎಸ್.ಟಿ ಸಮುದಾಯಗಳೂ ಒಂದೇ ಆಗಿವೆ. ಅವುಗಳಲ್ಲಿ ಉಪವರ್ಗೀಕರಣ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಪಂಚಸದಸ್ಯ ತೀರ್ಪು ನೀಡಿತ್ತು.

ಅದರ ವಿರುದ್ದ ಸಲ್ಲಿಕೆಯಾದ ಮೇಲ್ಮನವಿಗಳು, 2010ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯೂ ಸೇರಿ ವಿವಿಧ ರಾಜ್ಯಗಳು ಹಾಗೂ ಸಂಘಟನೆಗಳು ಸಲ್ಲಿಸಿದ್ದ 30ಕ್ಕೂ ಅಧಿಕ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿದ ಮುಖ್ಯ ನ್ಯಾ ಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ, ರಾಜ್ಯಗಳಿಗೆ ಎಸ್‌ಸಿ, ಎಸ್‌ಟಿಯಲ್ಲಿ ಅತ್ಯಂತ ಹಿಂದುಳಿದ ಜಾತಿಗಳನ್ನು ಗುರುತಿಸಿ ಮೀಸಲಾತಿಯೊಳಗೇ ಪ್ರತ್ಯೇಕ ಮೀಸಲಾತಿ ನೀಡುವ ಅಧಿಕಾರವಿದೆ ಎಂದು ಹೇಳುವ ಮೂಲಕ 2004ರಲ್ಲಿ ತಾನೇ ನೀಡಿದ್ದ ತೀರ್ಪನ್ನು ರದ್ದುಪಡಿಸಿದೆ.

ಒಳಮೀಸಲು ನೀಡಲು ಪ್ರಮಾಣೀಕರಿಸಬಹುದಾದ ಮತ್ತು ಎದ್ದು ತೋರುವ ದತ್ತಾಂಶಗಳು ರಾಜ್ಯಗಳ ಬಳಿ ಇರಬೇಕು. ಅವುಗಳ ಅನುಪಸ್ಥಿತಿಯಲ್ಲಿ ರಾಜ್ಯಗಳು ತಮ್ಮಿಚ್ಛೆಯಂತೆ ಒಳಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದೂ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

Related Articles

Comments (0)

Leave a Comment