- ಟ್ರಯಲ್ ಕೋರ್ಟ್
- Like this post: 2
ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧದ ಖಾಸಗಿ ದೂರು ವಜಾ
- by LegalSamachar
- August 10, 2024
- 175 Views
ಬೆಂಗಳೂರು: ಮುಸ್ಲಿಮರನ್ನು ನುಸುಳುಕೋರರು ಎಂದು ಕರೆದ ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡುತ್ತದೆ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಮೋದಿ ಅವರ ಭಾಷಣ ಮುಸ್ಲಿಮರನ್ನು ನಿಂದಿಸುವಂತಿದ್ದು, ದೇಶದ ಸಂಪತ್ತು ಲೂಟಿ ಹೊಡೆದ ನುಸುಳುಕೋರರಿಗೆ ಇಲ್ಲಿನ ಮುಸ್ಲಿಮರನ್ನು ಹೋಲಿಕೆ ಮಾಡುವಂತೆ ಉಳಿದ ಜನರನ್ನು ಪ್ರಚೋದಿಸುವಂತಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ದ್ವೇಷ ಹರಡಿದ, ಶಾಂತಿ ಭಂಗ ಉಂಟು ಮಾಡಿದ ಆರೋಪದಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬೆಂಗಳೂರಿನ ಜಿಯಾವುರ್ ರಹಮಾನ್ ನೊಮಾನಿ ಕಳೆದ ಮೇ 23ರಂದು ಖಾಸಗಿ ದೂರು ದಾಖಲಿಸಿದ್ದರು.
ದೂರಿನ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ಮ್ಯಾಜಿಸ್ಟ್ರೇಟ್ ಕೆ ಎನ್ ಶಿವಕುಮಾರ್ ಅವರು ಪ್ರಕಟಿಸಿದ್ದು, ಸಿಆರ್ಪಿಸಿ ಸೆಕ್ಷನ್ 200ರ ಅಡಿ ದೂರುದಾರ ಜಿಯಾವುರ್ ರಹಮಾನ್ ನೊಮಾನಿ ಅವರು ಐಪಿಸಿ ಸೆಕ್ಷನ್ಗಳಾದ 153ಎ, 153ಬಿ, 295ಎ, 503, 504 ಮತ್ತು 505(2)ರ ಅಡಿ ನರೇಂದ್ರ ಮೋದಿ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿದ್ದ ದೂರು ಸಿಆರ್ಪಿಸಿ ಸೆಕ್ಷನ್ 156(3) ಅಡಿ ಪರಿಗಣಿಸಲು ಸೂಕ್ತವಲ್ಲ ಎಂದು ತಿಳಿಸಿ, ದೂರು ವಜಾಗೊಳಿಸಿ ಆದೇಶಿಸಿದೆ.
ದೂರುದಾರರ ಮನವಿ:
ಏಪ್ರಿಲ್ನಲ್ಲಿ ರಾಜಸ್ಥಾನದಲ್ಲಿ ನಡೆದಿದ್ದ ಲೋಕಸಭಾ ಚುನಾವಣಾ ಪ್ರಚಾರ ಭಾಷಣದಲ್ಲಿ ಸಮಾಜ ಮತ್ತು ಧರ್ಮಗಳ ನಡುವೆ ದ್ವೇಷ ಬಿತ್ತುವ, ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಕ್ರಿಮಿನಲ್ ಪ್ರಚೋದನೆ ನೀಡುವ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ಗಳಾದ 153ಎ, 153ಬಿ, 295ಎ, 503, 504, 505(2) ಅಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಕರಣ ದಾಖಲಿಸಲು ಅಮೃತಹಳ್ಳಿ ಠಾಣಾ ಪೊಲೀಸರಿಗೆ ನಿರ್ದೇಶಿಸುವಂತೆ ದೂರುದಾರರು ಮನವಿ ಮಾಡಿದ್ದರು.
ಆರೋಪಿ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಲು ವಿಫಲವಾಗಿರುವುದರಿಂದ ಮುಸ್ಲಿಂ ಸಮುದಾಯದ ಸುರಕ್ಷತೆಗೆ ಬೆದರಿಕೆ ಒಡ್ಡುವಂತಾಗಿದೆ. ಇದು ಸಾಂವಿಧಾನಿಕ ಮೌಲ್ಯಗಳಾದ ಭ್ರಾತೃತ್ವ, ಏಕತೆ ಮತ್ತು ಸಮಗ್ರತೆ ಮೇಲಿನ ನೇರ ದಾಳಿಯಲ್ಲದೇ ಬೇರೇನೂ ಅಲ್ಲ. ತಮ್ಮ ದ್ವೇಷ ಭಾಷಣದ ಮೂಲಕ ಪ್ರಧಾನಿ ಮೋದಿ ಸಂವಿಧಾನದ 14, 17 ಮತ್ತು 51ಎ ವಿಧಿಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆಕ್ಷೇಪಿಸಲಾಗಿತ್ತು.
ಪ್ರಕರಣವೇನು?
2024ರ ಏ.21ರಂದು ರಾಜಸ್ಥಾನದ ಬನ್ಸ್ವಾರದಲ್ಲಿನ ಚುನಾವಣಾ ಸಮಾವೇಶದಲ್ಲಿ ಭಾಷಣ ಮಾಡಿದ್ದ ಮೋದಿ, ತಾಯಂದಿರು, ಸಹೋದರಿಯರ ಬಂಗಾರ ಲೆಕ್ಕ ಹಾಕುವುದಾಗಿ, ಅದರ ಬಗ್ಗೆ ಮಾಹಿತಿ ಪಡೆಯುವುದಾಗಿ, ನಂತರ ಸಂಪತ್ತನ್ನು ಮರು ಹಂಚಿಕೆ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆ ಹೇಳುತ್ತದೆ. ಅದನ್ನು ಯಾರಿಗೆ ಹಂಚುತ್ತಾರೆ? ಮುಸ್ಲಿಮರು ದೇಶದ ಸಂಪತ್ತಿನ ಮೊದಲ ಹಕ್ಕುದಾರರು ಎಂದು ಮನಮೋಹನ್ ಸಿಂಗ್ ಸರ್ಕಾರ ಹೇಳಿತ್ತು. ಅದರ ಅರ್ಥ, ಹೆಚ್ಚು ಮಕ್ಕಳಿರುವವರಿಗೆ ನಿಮ್ಮ ಸಂಪತ್ತು ಹಂಚಿಕೆಯಾಗುತ್ತದೆ. ನುಸುಳುಕೋರರಿಗೆ ಸಂಪತ್ತು ಹಂಚಿಕೆಯಾಗುತ್ತದೆ. ನೀವು ಕಷ್ಟದಿಂದ ಸಂಪಾದಿಸಿದ ಹಣ ನುಸುಳುಕೋರರ ಪಾಲಾಗಬೇಕೆ? ಅದಕ್ಕೆ ನಿಮ್ಮ ಒಪ್ಪಿಗೆ ಇದೆಯೇ ಎಂದು ಸಭಿಕರನ್ನು ಪ್ರಶ್ನಿಸಿದ್ದರು.
Related Articles
Thank you for your comment. It is awaiting moderation.
Comments (0)